Site icon Vistara News

ಪರಿಚಯದ ಮಹಿಳೆಯ ಪುತ್ರಿಯನ್ನೇ ಕಿಡ್ನ್ಯಾಪ್​ ಮಾಡಿದ ಕ್ರಿಮಿನಲ್​ ಲೇಡಿ; ತನ್ನ ಮಗಳನ್ನೂ ಅಪಹರಿಸಿದ್ದೇಕೆ?

Kidnap Photo

ಗುರುಗ್ರಾಮ: ಜಗತ್ತಿನಲ್ಲಿ ಎಂತೆಂಥಾ ಕ್ರಿಮಿನಲ್​ ಬುದ್ಧಿಯವರು ಇರುತ್ತಾರೆ ನೋಡಿ..!-ತೆಗೆದುಕೊಂಡ ಸಾಲವನ್ನು ವಾಪಸ್​ ಕೊಡಲಾಗದ್ದಕ್ಕೆ ಮಹಿಳೆಯೊಬ್ಬಳು ಖತರ್ನಾಕ್​ ಐಡಿಯಾ ಮಾಡಿ ಸಿಕ್ಕಿಬಿದ್ದಿದ್ದಾಳೆ. ಜತೆಗೆ ಅವಳಿಗೆ ಸಹಾಯ ಮಾಡಿದ ಇಬ್ಬರೂ ಅರೆಸ್ಟ್ ಆಗಿದ್ದಾರೆ.

ದೆಹಲಿಯ ಗುರುಗ್ರಾಮದಲ್ಲಿ ರಿಂಕಿ ಎಂಬ ಮಹಿಳೆ ತನ್ನ ಕಾರು ಡ್ರೈವರ್​ ಸಾಗರ್​ ಮತ್ತು ತನ್ನದೇ ಡಾಬಾದಲ್ಲಿ ಕೆಲಸ ಮಾಡುತ್ತಿದ್ದ ಸೂರಜ್​​ ಎಂಬುವನ ಜತೆ ಸೇರಿ ಇಬ್ಬರು ಮಕ್ಕಳನ್ನು ಅಪಹರಣ ಮಾಡುತ್ತಾಳೆ. ಹೀಗೆ ಅಪಹರಣಗೊಂಡವಳಲ್ಲಿ ಒಬ್ಬಳು 9 ವರ್ಷದ ಹುಡುಗಿ ಮತ್ತೊಬ್ಬಳು 14 ವರ್ಷದ ಹುಡುಗಿ. ಆದರೆ ವಿಚಿತ್ರವೆಂದರೆ ಈ 14 ವರ್ಷದ ಹುಡುಗಿ ರಿಂಕಿಯ ಮಗಳು. ಮತ್ತು ಮತ್ತೊಬ್ಬ ಹುಡುಗಿ ಮತ್ತು ಆಕೆಯ ಕುಟುಂಬದವರೂ ರಿಂಕಿಗೆ ಪರಿಚಯದವರೇ. ಒಟ್ಟಿನಲ್ಲಿ ಮಹಿಳೆ ತನ್ನ ಮಗಳನ್ನೂ ಸೇರಿ ಇಬ್ಬರು ಬಾಲಕಿಯರನ್ನು ಅಪಹರಿಸಿದ್ದಳು. ಅಷ್ಟೇ ಅಲ್ಲ, 50 ಲಕ್ಷ ರೂಪಾಯಿ ಕೊಟ್ಟರೆ ಮಕ್ಕಳನ್ನು ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಳು.

9 ವರ್ಷದ ಹುಡುಗಿಯ ತಾಯಿ ಕೊಟ್ಟ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗಲೇ ರಿಂಕಿ ಕೃತ್ಯ ಬಯಲಾಯಿತು. ಆಕೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ‘9 ವರ್ಷದ ಹುಡುಗಿಯ ತಾಯಿಯಿಂದ ರಿಂಕಿ 26 ಲಕ್ಷ ರೂಪಾಯಿ ಸಾಲ ಪಡೆದಿದ್ದಳು. ಅದನ್ನು ವಾಪಸ್​ ಕೊಡಲು ಸಾಧ್ಯವಾಗದ್ದಕ್ಕೆ ಈ ಯೋಜನೆ ರೂಪಿಸಿದ್ದಾಳೆ. ಸಾಲ ಕೊಟ್ಟ ಮಹಿಳೆಯ ಮನೆಯಲ್ಲಿ ಕೀರ್ತನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದಕ್ಕೆ ರಿಂಕಿಗೂ ಆಹ್ವಾನ ಇತ್ತು. ಅಲ್ಲಿಗೆ ಹೋಗಿದ್ದ ಈಕೆ ತನ್ನಿಬ್ಬರು ಸಹಚರರೊಂದಿಗೆ ಮಕ್ಕಳನ್ನು ಕಿಡ್ನ್ಯಾಪ್​ ಮಾಡಿದ್ದಳು. ಆಕೆಯ ಉದ್ದೇಶ ಸಾಲ ಕೊಟ್ಟ ಮಹಿಳೆಯ ಮಗಳೊಬ್ಬಳನ್ನೇ ಅಪಹರಿಸುವುದು ಆಗಿತ್ತು. ಆದರೆ ಯಾರಿಗೂ ಅನುಮಾನ ಬರಬಾರದು ಎಂದು ಜತೆಗೆ ತನ್ನ ಪುತ್ರಿಯನ್ನೂ ಕಿಡ್ನ್ಯಾಪ್​ ಮಾಡಿದ್ದಳು’ ಎಂದು ಪೊಲೀಸರು ವಿವರಿಸಿದ್ದಾರೆ.

ಇದನ್ನೂ ಓದಿ: Traffic Violation | ಕುಡಿದು ಜಾಲಿ ಡ್ರೈವಿಂಗ್‌; 20 ಸಾವಿರ ರೂ. ದಂಡ ಹಾಕಿ ಕಿಕ್‌ ಇಳಿಸಿದ ಟ್ರಾಫಿಕ್‌ ಪೊಲೀಸ್‌!

Exit mobile version