Site icon Vistara News

ಕನ್ನ ಹಾಕುವುದು ಹೇಗೆಂದು ಯೂಟ್ಯೂಬ್‌ನಲ್ಲಿ ಕಲಿತು ಕಳವು ಮಾಡಿದವ ಅರೆಸ್ಟ್‌ !

Mumbai Crime

ಮುಂಬೈ: ಇದು ಇಂಟರ್‌ನೆಟ್‌ ಯುಗ. ಇದೊಂತರ ಕಲಿಕಾ ತಾಣವೂ ಹೌದು-ಮನರಂಜನಾ ವಲಯವೂ ಹೌದು. ಬೆರಳ ತುದಿಯಲ್ಲಿ ಇಂಟರ್ನೆಟ್‌ ಸಿಗುವ ಈ ದಿನಗಳಲ್ಲಿ ನಾವು ಏನು ಬೇಕಾದರೂ ಕಲಿಯಬಹುದು. ಬಟ್ಟೆ ಹೊಲಿಯುವುದದರಿಂದ ಹಿಡಿದು, ಕೇಕ್‌ ಮಾಡುವವರೆಗೆ- ಹಣಕಾಸು ಗಳಿಕೆ, ಉಳಿತಾಯ, ಮನೆಪಾಠದಿಂದ ಹಿಡಿದು-ಮನೆಗೆ ಕನ್ನ ಹಾಕುವುದು ಹೇಗೆ ಎಂಬವರೆಗೆ ಎಲ್ಲ ಮಾಹಿತಿಗಳೂ ಇಲ್ಲಿ ಲಭ್ಯ. ಅದೇ ರೀತಿ, ಕನ್ನ ಹಾಕುವುದು ಹೇಗೆಂದು ಇಂಟರ್‌ನೆಟ್‌ನಲ್ಲಿ ಕಲಿತು, ಮನೆಯೊಂದರಲ್ಲಿ ಕಳವು ಮಾಡಿದವನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮುಂಬೈನ ನಲಸೋಪರ್‌ನಲ್ಲಿ ಮನೆಯೊಂದರಲ್ಲಿ ದರೋಡೆಯಾಗಿತ್ತು. ಬಾಗಿಲು ಮುರಿದು ಸುಮಾರು ಹತ್ತು ಲಕ್ಷ ರೂ. ಮೌಲ್ಯದ ಹಣ ಮತ್ತು ಚಿನ್ನಾಭರಣಗಳನ್ನು ದೋಚಲಾಗಿತ್ತು. ಸಿಸಿಟಿವಿಯ ದೃಶ್ಯಗಳ ಜಾಡು ಹಿಡಿದ ಪೊಲೀಸರು ಆ ಪ್ರದೇಶದಲ್ಲಿ ಮರಗೆಲಸ ಮಾಡುತ್ತಿದ್ದ ದಿಲ್‌ಶಾನ್‌ ಶೇಖ್‌ನನ್ನು (38) ಬಂಧಿಸಿದ್ದಾರೆ. ʼನನಗೆ ಕಾರ್ಪೆಂಟರ್‌ ಕೆಲಸದಿಂದ ಬರುವ ಆದಾಯ ಸಾಕಾಗದೆ, ಕಳ್ಳತನ ಮಾಡಿದ್ದೇನೆ. ಮನೆಯನ್ನು ದೋಚುವುದು ಹೇಗೆ ಎಂಬುದನ್ನು ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಕಲಿತೆʼ ಎಂದು ಆತ ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಮುಂಬೈನಲ್ಲಿ ಕಳವು ಮಾಡಿ ಉತ್ತರ ಪ್ರದೇಶದಲ್ಲಿರುವ ತನ್ನ ಮನೆಗೆ ಹೋಗಿದ್ದ ದಿಲ್‌ಶಾನ್‌ ಶೇಖ್‌ನನ್ನು ಅವನ ಮನೆಯಲ್ಲೇ ಬಂಧಿಸಲಾಗಿದೆ. ವಾಪಸ್‌ ಮುಂಬೈನ ಅಚೋಲೆ ಪೊಲೀಸ್‌ ಠಾಣೆಗೆ ಕರೆತರಲಾಗಿದೆ.

ಇಂಥದ್ದೇ ಮತ್ತೊಂದು ಪ್ರಕರಣದಲ್ಲಿ, ಗಜಾನನ ಅರ್ಜುನ ಪಾಟೀಲ್‌ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪುಣೆ ಮತ್ತು ನವಿ ಮುಂಬೈ ಸೇರಿ ಒಟ್ಟು ಎಂಟು ಕಡೆಗಳಲ್ಲಿ ಮನೆ ಬಾಗಿಲು ಮುರಿದು ಕಳ್ಳತನ ಮಾಡಿದ್ದ. ಈತನಿಂದ ಪೊಲೀಸರು 18.31 ಲಕ್ಷ ರೂಪಾಯಿ ಮೌಲ್ಯದ ಅಪಾರ ಆಭರಣಗಳು ಮತ್ತು ಮಾರುತಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಎಲ್ಲೂ ಕಾಣಿಸುತ್ತಿಲ್ಲ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ, ಮುಂಬೈ ಪೊಲೀಸರಿಂದ ಹುಡುಕಾಟ

Exit mobile version