ಬೆಂಗಳೂರು: ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮಹಿಳೆಯ ಕೊಲೆ ಕೇಸ್ (murder case) ಅನ್ನು ಪೊಲೀಸರು ಭೇದಿಸಿದ್ದಾರೆ. ನಾನೇ ನನ್ನ ತಾಯಿಯನ್ನು ಕೊಂದಿದ್ದು ಎಂದು ಅಪ್ರಾಪ್ತನೊಬ್ಬ ಪೊಲೀಸರಿಗೆ ಶರಣಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಕೊಲೆಗಾರ ಮಗನಲ್ಲ, ತಂದೆ ಎಂಬುದು ತಿಳಿದು ಬಂದಿದೆ. ಜತೆಗೆ ಅನೈತಿಕ ಸಂಬಂಧಕ್ಕೆ ಮಹಿಳೆ ಕೊಲೆಯಾಗಿದ್ದು ಎನ್ನಲಾಗಿದೆ.
ನೇತ್ರಾ ಎಂಬಾಕೆ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಳು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ನೇತ್ರಾಳ ಮಗನನ್ನು ವಶಕ್ಕೆ ಪಡೆದಿದ್ದರು. ಯಾಕೆಂದರೆ ತಾನೇ ಕೊಲೆ ಮಾಡಿದ್ದಾಗಿ ಬಾಲಕ ಪೊಲೀಸರ ಮುಂದೆ ಹೇಳಿದ್ದ. ಹೀಗಾಗಿ ಕೊಲೆ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಆಗ ಸ್ಥಳದಲ್ಲಿ ಸಿಕ್ಕಿದ್ದ ಫಿಂಗರ್ ಪ್ರಿಂಟ್ ಸಂಗ್ರಹಿಸಿದರು. ಅದರ ಜಾಡು ಹಿಡಿದಾಗ ಮಹಿಳೆಯ ಕೊಲೆಯನ್ನು ಆಕೆಯ ಪತಿಯೇ ಮಾಡಿದ್ದು ಎಂದು ತಿಳಿದು ಬಂದಿತ್ತು.
ನೇತ್ರಾಳ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪೊಲೀಸರ ಮುಂದೆ ಸತ್ಯವನ್ನು ಬಾಯ್ಬಿಟ್ಟಿದ್ದ. ನೇತ್ರಾ ಗಂಡ-ಮಗನನ್ನು ಮರೆತು, ಮತ್ತೊಬ್ಬರನ್ನೂ ಮೋಹಿಸಿದ್ದಳು. ಅನೈತಿಕ ಸಂಬಂಧ ಜತೆಗೆ ಕುಡಿತವನ್ನು ರೂಢಿಸಿಕೊಂಡಿದ್ದಳು. ಕೆಲವೊಮ್ಮೆ ಮನೆಯಿಂದ ಹೊರಹೋದರೆ ಎರಡ್ಮೂರು ದಿನಗಳ ಕಾಲ ಮನೆಗೆ ಬರುತ್ತಿರಲಿಲ್ಲ. ನೇತ್ರಾಳ ನಡವಳಿಕೆಯಿಂದ ಪತಿ ಸಿಟ್ಟಿಗೆದ್ದಿದ್ದ. ಹೀಗಾಗಿ ಮಗನೊಟ್ಟಿಗೆ ಸೇರಿ ಕೊಲೆ ಮಾಡಲು ನಿರ್ಧಾರ ಮಾಡಿದ್ದೆ ಎಂದು ವಿಚಾರಣೆಯಲ್ಲಿ ಹೇಳಿದ್ದಾನೆ. ಇನ್ನೂ ಅಪ್ರಾಪ್ತರು ಜೈಲಿಗೆ ಹೋದರೆ ಶಿಕ್ಷೆ ಕಡಿಮೆ ಇರುತ್ತೆ. ಜತೆಗೆ ಅವರೇ ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ ಎಂದು ಮಗನೇ ಅಪ್ಪನನ್ನು ಓಲೈಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: Murder Case : ಮತ್ತೊಬ್ಬನ ಮೋಹಕ್ಕೆ ಸಿಲುಕಿ ಗಂಡನ ಕೊಂದಳು ಮೂರು ಮಕ್ಕಳ ತಾಯಿ
ಧಾರವಾಡದಲ್ಲಿ ಆಸ್ತಿಗಾಗಿ ವೃದ್ಧೆ ಕೊಲೆ
ವೃದ್ಧೆಯ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಧಾರವಾಡ ಹೊರವಲಯದ ನವಲೂರ ಗ್ರಾಮದಲ್ಲಿ ನಡೆದಿದೆ. ಕರೆವ್ವ ಈರಪ್ಪಗೆರಿ ಕೊಲೆಯಾದ ವೃದ್ಧೆ. ಆಸ್ತಿ ವಿಚಾರವಾಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾರವಾಡ ವಿದ್ಯಾಗಿರಿ ಪೊಲೀಸರ ಭೇಟಿ ನೀಡಿ ಪರಿಶೀಲಿಸಿದ್ದು, ವೃದ್ಧೆಯ ಶವವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ದೊಣ್ಣೆಯಿಂದ ಹೊಡೆದು ಕೊಂದರು
ಬೆಂಗಳೂರಲ್ಲಿ ಕಳೆದ ಭಾನುವಾರ ಗಲಾಟೆಯಲ್ಲಿ ಯುವಕನ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಹೇಮಂತ್ ಎಂಬಾತ ಮೃತಪಟ್ಟಿದ್ದಾನೆ.
ಹೇಮಂತ್ ಅಲಿಯಾಸ್ ಕುಷ್ಕಾ ಎಂಬಾತನ ಮೇಲೆ ಕಿರಣ್ ಮತ್ತು ಗ್ಯಾಂಗ್‌ನವರು ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದರು. ತೀವ್ರ ಹಲ್ಲೆಗೊಳಗಾದ ಹೇಮಂತ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ರಾತ್ರಿ ಹೇಮಂತ್ ಮೃತಪಟ್ಟಿದ್ದಾನೆ.
ಭಾನುವಾರ ರಾತ್ರಿ ಕೆಂಗೇರಿ ಬಳಿಯ ಹೇಮಂತ್ ಮನೆ ಬಳಿ ತೆರಳಿದ್ದ ಕಿರಣ್ ಗ್ಯಾಂಗ್ ಬಾಗಲಗುಂಟೆಗೆ ಕರೆದುಕೊಂಡು ಹೋಗಿದೆ. ಅಲ್ಲಿ ಮನಸೋ ಇಚ್ಛೆ ಹಲ್ಲೆ ಮಾಡಿ ಪರಾರಿ ಆಗಿದ್ದರು. ಯುವತಿ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ