ಬೆಂಗಳೂರು: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ತನ್ನ ಅಮ್ಮನನ್ನೇ ಕಬ್ಬಿಣದ ರಾಡ್‌ನಿಂದ ಹೊಡೆದು ಭೀಕರವಾಗಿ ಮಗನೇ ಹತ್ಯೆ (Murder Case) ಮಾಡಿದ ಘಟನೆ ನಡೆದಿದೆ.
ಕೆ.ಆರ್. ಪುರಂನ ಜಸ್ಟ್ ಭೀಮಯ್ಯ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ನೇತ್ರಾ (40) ಪುತ್ರನಿಂದಲೇ ಕೊಲೆಯಾದ ತಾಯಿಯಾಗಿದ್ದಾರೆ. ತಾಯಿ ಹಾಗೂ ಮಗನ ಮಧ್ಯೆ ಯಾವುದೋ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ ಎನ್ನಲಾಗಿದೆ. ಈ ವೇಳೆ ಸಿಟ್ಟಿಗೆದ್ದ 18ರ ವಯಸ್ಸಿನ ಪುತ್ರ ಮನೆಯಲ್ಲೇ ಇದ್ದ ಕಬ್ಬಿಣದ ರಾಡ್‌ನಿಂದ ನೇತ್ರಾ ಅವರ ತಲೆಗೆ ಹೊಡೆದಿದ್ದಾನೆ.
ಆತ ಬಲವಾಗಿ ತಲೆಗೆ ಹೊಡೆದಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. ಹೀಗಾಗಿ ಸ್ಥಳದಲ್ಲೇ ಆಕೆ ಮೃತಪಟ್ಟಿದ್ದಾರೆ. ಬೆಳಗ್ಗೆ 8 ಗಂಟೆ ಹೊತ್ತಿಗೆ ಈ ಕೃತ್ಯ ನಡೆದಿದೆ. ಕೊಲೆ ಮಾಡಿದ ಯುವಕ ಮುಳಬಾಗಿಲಿನ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮೊ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
BMTC Accident: ಕಿಲ್ಲರ್ ಬಿಎಂಟಿಸಿಗೆ ವಿದ್ಯಾರ್ಥಿನಿ ಬಲಿ; ಹರಿಶ್ಚಂದ್ರ ಘಾಟ್ ಬಳಿ ಅಪಘಾತ
ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಎಂಬುದು ಪದೇ ಪದೆ ಸಾಬೀತಾಗುತ್ತಲೇ ಇದೆ. ರಾಜಾಜಿನಗರದ ಹರಿಶ್ಚಂದ್ರ ಘಾಟ್ (Harishchandra Ghat) ಬಳಿ ಬಿಎಂಟಿಸಿ ಡಿಕ್ಕಿ ಹೊಡೆದ (BMTC Accident) ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಕುಸುಮಿತಾ (21) ಅಪಘಾತಕ್ಕೆ ಬಲಿಯಾದ ವಿದ್ಯಾರ್ಥಿನಿಯಾಗಿದ್ದಾಳೆ. ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕುಸುಮಿತಾ ಕಾಲೇಜಿಗೆ ಹೋಗುವ ವೇಳೆ ಅಪಘಾತಕ್ಕೆ ಬಲಿಯಾಗಿದ್ದಾಳೆ. ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Missing Case: ಮೂವರು ಮಕ್ಕಳೊಂದಿಗೆ ಬೆಂಗಳೂರಿಗೆ ಹೊರಟ ಮಹಿಳೆ ನಾಪತ್ತೆ
ತುಮಕೂರು: ಮೂವರು ಸಣ್ಣ ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಪ್ರಕರಣ (missing Case) ಕುಣಿಗಲ್‌ನಲ್ಲಿ ನಡೆದಿದೆ. ಕುಣಿಗಲ್ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ ವಸಂತಕುಮಾರಿ (25) ಅವರು ಮಕ್ಕಳಾದ ತನುಶ್ರೀ (8) ಭೂಮಿಕಾ (6) ಜೊತೆಗೆ ನಾಪತ್ತೆಯಾಗಿದ್ದಾರೆ. ಜನವರಿ 16ರಂದು ಮಕ್ಕಳೊಂದಿಗೆ ಬೆಂಗಳೂರಿಗೆ ಹೋಗಿ ಬರುವುದಾಗಿ ಮನೆ ಬಿಟ್ಟು ಹೋಗಿದ್ದ ತಾಯಿ ವಸಂತಾ ಆಮೇಲೆ ಎಲ್ಲೂ ಕಾಣಿಸಿಕೊಂಡಿಲ್ಲ. ಸಂಬಂಧಿಕರು ಈಕೆಗಾಗಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದು, ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.
ಮಹಿಳೆ ಜೊತೆಗೆ ಕಿರಿಕ್, ಕರ್ನಾಟಕದ ಐಪಿಎಸ್ ಅಧಿಕಾರಿ ತಮಿಳುನಾಡಿನಲ್ಲಿ ಬಂಧನ
ಕಲಬುರಗಿ: ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಕರ್ನಾಟಕದ ಐಪಿಎಸ್ ಅಧಿಕಾರಿಯೊಬ್ಬರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.
ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಕಿರಿಕ್ ಮಾಡಿಕೊಂಡಿದ್ದು, ತಮಿಳುನಾಡಿನ ಗೋಬಿ ಪೊಲೀಸ್ ಠಾಣೆಯಲ್ಲಿ ಅರುಣ್ ವಿರುದ್ಧ ಜಿಲ್ಲೆಯ ಮಹಿಳಾ ಪೊಲೀಸ್ ಒಬ್ಬರು ದೂರು ದಾಖಲು ಮಾಡಿದ್ದರಿಂದ ಐಪಿಎಸ್ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕದ ಅರುಣ್ ರಂಗರಾಜನ್ ಬಂಧಿತ ಅಧಿಕಾರಿ ಎಂದು ಹೇಳಲಾಗುತ್ತಿದ್ದು, ದೂರು ನೀಡಿದ ಮಹಿಳೆ ಚಿಂಚೋಳಿ ತಾಲೂಕಿನ ಪೊಲೀಸ್ ಠಾಣೆಯೊಂದರಲ್ಲಿ ಕಾರ್ಯ ನಿರ್ವಹಿಸುವವರು ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ಈ ಮಹಿಳೆ ಜತೆ ಐಪಿಎಸ್ ಅಧಿಕಾರಿ ಅರುಣ ರಂಗರಾಜನ್ ತಮಿಳುನಾಡಿನ ತಿರುಚ್ಚಿಗೆ ತೆರಳಿದ್ದರು. ಈ ವೇಳೆ ಅವರಿಬ್ಬರ ಮಧ್ಯೆ ಜಗಳವಾಗಿದೆ. ಸ್ಥಳೀಯ ಪೊಲೀಸರು ರಾಜಿ ಮಾಡಿ ಕಳಿಸಿದ್ದರು.
ಕಲಬುರಗಿ ಮಹಿಳಾ ಪೊಲೀಸ್ ದೂರು ಬಳಿಕ ಅರುಣ್ ಅವರು ತಮ್ಮ ಹುಟ್ಟೂರು ತಿರುಚ್ಚಿಯ ಶ್ರೀರಂಗಂಗೆ ತಮ್ಮನ್ನು ಕರೆದೊಯ್ದಿದ್ದು, ಹಲ್ಲೆ ನಡೆಸಿದ್ದಾರೆ ಎಂದ ಮಹಿಳೆ ಗೋಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಅರುಣ್ ಅವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: Tiger Dance: ಖ್ಯಾತ ಹುಲಿ ವೇಷಧಾರಿ ಅಶೋಕ್ ರಾಜ್ ನಿಧನ
ಕಲಬುರಗಿಯಲ್ಲಿ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ತಮ್ಮ ಪತ್ನಿಯನ್ನು ಅಕ್ರಮವಾಗಿ ಬಂಧನಲ್ಲಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಹಿಳೆಯ ಪತಿ ಕಳೆದ
ಮಾರ್ಚ್‌ನಲ್ಲಿ ದೂರು ದಾಖಲು ಮಾಡಿದ್ದರು. ಈ ಕುರಿತು ಸ್ಟೇಷನ್ ಬಜಾರ್ ಠಾಣೆಯ ಪಿಐ ಚಾರ್ಜಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.