ಬೆಂಗಳೂರು: ಕಳ್ಳನೊಬ್ಬ ಕೊಲೆಗಡುಕನಾದ ಕಥೆ ಇದು. ಖತರ್ನಾಕ್ ಕಳ್ಳನೊಬ್ಬ ಬೈಕ್ (Bike Theft Case) ಕದ್ದು ಪರಾರಿಯಾಗುವಾಗ, ವೃದ್ಧರೊಬ್ಬರ ಬೈಕ್‌ಗೆ ಡಿಕ್ಕಿ (Bike Accident) ಹೊಡೆದು ಅಪಘಾತ ಮಾಡಿದ್ದ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದು, ಕಳ್ಳ ಹಲ್ಲೆ ಮಾಡಿ ಕಾಲ್ಕಿತ್ತಿದ್ದ. ಮೊದಲು ಆಕ್ಸಿಡೆಂಟ್ ಕೇಸ್ ಎಂದು ಭಾವಿಸಿದ ಪೊಲೀಸರು ತನಿಖೆಗಿಳಿದು ಕಾರ್ಯಾಚರಣೆ ನಡೆಸಿದ ಮೇಲೆ ಕೊಲೆ ಕೇಸ್ (Murder Case) ಎಂದು ತಿಳಿದು ಬಂದಿದೆ.
ಕಳೆದ ನವೆಂಬರ್ 16ರಂದು ಪ್ಯಾಲೇಸ್ ಗುಟ್ಟಹಳ್ಳಿ ಬಳಿ ಮೆಡಿಸಿನ್ ತರಲೆಂದು ಕೃಷ್ಣಪ್ಪ ಎಂಬುವವರು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಕೃಷ್ಣಪ್ಪನ ಬೈಕ್‌ಗೆ ಸರ್ಫರಾಜ್ ಖಾನ್ ಎಂಬಾತ ಡಿಕ್ಕಿ ಹೊಡಿದಿದ್ದ. ನಂತರ ಕೃಷ್ಣಪ್ಪನವರು ಸರ್ಫರಾಜ್ ಖಾನ್ ಮೇಲೆ ಕೂಗಾಡಿ, ಸರಿಯಾಗಿ ಬೈಕ್ ಓಡಿಸುವಂತೆ ತಾಕೀತು ಮಾಡಿದ್ದರು. ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ನಡುರಸ್ತೆಯಲ್ಲೇ ಕಿತ್ತಾಡಿಕೊಂಡಿದ್ದರು. ಈ ವೇಳೆ ಸಿಟ್ಟಿಗೆದ್ದ ಸರ್ಫರಾಜ್ ಪಕ್ಕದಲ್ಲಿದ್ದ ಕಲ್ಲಿನಿಂದ ಕೃಷ್ಣನ ಮೇಲೆ ಹಲ್ಲೆ ಮಾಡಿ ಪರಾರಿ ಆಗಿದ್ದ.
ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವೃದ್ಧ ಕೃಷ್ಣಪ್ಪರನ್ನು ಅಲ್ಲಿದ್ದ ಕೆಲ ಸ್ಥಳೀಯರು ಅಪಘಾತವಾಗಿರಬಹುದೆಂದು ಭಾವಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಕಾರಣದಿಂದಾಗಿ ಚಿಕಿತ್ಸೆ ಫಲಿಸದೇ ಕೃಷ್ಣಪ್ಪ ಮೃತಪಟ್ಟಿದ್ದರು.
ಡ್ಯಾಮೇಜ್ ಆಗದ ಬೈಕ್! ಕೃತ್ಯ ಸಿಸಿಟಿವಿಯಲ್ಲಿ ಪತ್ತೆ
ಅಪಘಾತದಲ್ಲಿ ಬೈಕ್‌ಗೆ ಯಾವುದೇ ಡ್ಯಾಮೇಜ್ ಆಗದಿರುವುದನ್ನು ಕೃಷ್ಣಪ್ಪರ ಪುತ್ರ ಸತೀಶ್ ಗಮನಿಸಿದ್ದರು. ಅನುಮಾನಗೊಂಡು ನವೆಂಬರ್ 17ರಂದು ಅಪಘಾತ ನಡೆದ ಸ್ಥಳಕ್ಕೆ ಹೋಗಿ ಸಿಸಿಟಿವಿ ಪರಿಶೀಲಿಸಿದ್ದಾರೆ. ಈ ವೇಳೆ ಸರ್ಫರಾಜ್ ಖಾನ್, ಕೃಷ್ಣಪ್ಪರಿಗೆ ಹಲ್ಲೆ ಮಾಡಿರುವುದು ತಿಳಿದು ಬಂದಿದೆ.
ಕೂಡಲೇ ಸತೀಶ್ ಅವರು ವಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆಗಿಳಿದು ಆರೋಪಿಯನ್ನು ಬಂಧಿಸಿದಾಗ ಸರ್ಫರಾಜ್ ಖಾನ್ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ ಈತನ ಮೇಲೆ ರೌಡಿಶೀಟರ್ ತೆರೆಯಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ