ಲಖಿಂಪುರ ಖೇರಿ: ಮುಸ್ಲಿಂ ವ್ಯಕ್ತಿಯೊಬ್ಬನನ್ನು ಮದುವೆಯಾಗಿ, ಬಳಿಕ ಇಸ್ಲಾಂಗೆ ಮತಾಂತರಗೊಂಡಿದ್ದ ಮಹಿಳೆ ಈಗ ಆಕೆಯ ಪತಿಯಿಂದಲೇ ಹತ್ಯೆಗೀಡಾಗಿದ್ದಾಳೆ. ಉತ್ತರ ಪ್ರದೇಶದ ಲಖಿಂಪುರ ಖೇರಿಯ ಹಫಿಜಾಪುರ್ನ ನಿವಾಸಿ ಮೊಹಮ್ಮದ್ ವಾಸಿ ಎಂಬಾತ ಕೆಲವು ವರ್ಷಗಳ ಹಿಂದೆ ಅದೇ ಏರಿಯಾದ ಹಿಂದು ಹುಡುಗಿ ಉಮಾ ಶರ್ಮಾ ಎಂಬುವಳನ್ನು ಪ್ರೀತಿಸಿ ಮದುವೆಯಾದ. ಆಕೆಗೂ ಮೊಹಮ್ಮದ್ ಮೇಲೆ ಮನಸಿತ್ತು. ಈ ದಂಪತಿಗೆ ಇಬ್ಬರು ಮಕ್ಕಳೂ ಇದ್ದರು. ಉಮಾ ಶರ್ಮಾ ಮದುವೆಯಾದ ಬಳಿಕ ಇಸ್ಲಾಂಗೆ ಮತಾಂತರಗೊಂಡು ಅಕ್ಷಾ ಫಾತಿಮಾ ಆಗಿ ಬದಲಾಗಿದ್ದಳು.
ಹಲವು ದಿನಗಳಿಂದ ಮೊಹಮ್ಮದ್ ವಾಸಿ ಮತ್ತು ಫಾತಿಮಾ ಮಧ್ಯೆ ಜಗಳವಾಗುತ್ತಿತ್ತು. ಪ್ರೀತಿಸಿಯೇ ಮದುವೆಯಾದವರಿಗೆ ಈಗೀಗ ಏನಾಗಿತ್ತೋ ಗೊತ್ತಿಲ್ಲ, ಗಲಾಟೆ ನಡೆಯುತ್ತಲೇ ಇತ್ತು. ಮೊಹಮ್ಮದ್ ವಾಸಿ ತನ್ನ ಪತ್ನಿ, ಮಕ್ಕಳೊಂದಿಗೆ ಹಫಿಜಾಪುರ್ನಲ್ಲಿ ವಾಸವಾಗಿದ್ದರೆ, ವಾಸಿಯ ತಾಯಿ ಕಾನ್ಪುರದಲ್ಲಿ ನೆಲೆಸಿದ್ದರು.
ಡಿಸೆಂಬರ್ 21ರಂದು ಕೂಡ ಮೊಹಮ್ಮದ್ ವಾಸಿ ಮತ್ತು ಫಾತಿಮಾ ನಡುವೆ ಸಿಕ್ಕಾಪಟೆ ಜಗಳವಾಗಿದೆ. ಮಕ್ಕಳ ಎದುರೇ ಇವರಿಬ್ಬರೂ ಮಾತಿಗೆ ಮಾತು ಬೆಳೆಸಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಮೊಹಮ್ಮದ್ ವಾಸಿ ಅತ್ಯಂತ ಕ್ರೋಧಗೊಂಡು, ಫಾತಿಮಾಗೆ ಕರೆಂಟ್ ಶಾಕ್ ಕೊಟ್ಟು ಕೊಂದಿದ್ದಾನೆ. ಅಷ್ಟಾದ ಮೇಲೆ ತನ್ನ ಮನೆಯ ಕೋಣೆಯೊಂದರಲ್ಲಿ ನೆಲ ಅಗೆದು, ಮೃತದೇಹವನ್ನು ಹೂತಿಟ್ಟಿದ್ದ. ಇದೆಲ್ಲವನ್ನೂ ಆತ ಪುಟ್ಟ ಮಕ್ಕಳ ಎದುರೇ ಮಾಡಿದ್ದ.
ಎರಡು ದಿನ ಹೀಗೇ ಶವವನ್ನು ಕೋಣೆಯ ಮಣ್ಣಿನಡಿ ಇಟ್ಟುಕೊಂಡೇ ಕಾಲ ಕಳೆದಿದ್ದ. ಡಿ.24ರಂದು ವಾಸಿಯ ತಾಯಿ ಆಶಿಯಾ ಬೇಗಮ್ ಕಾನ್ಪುರದಿಂದ ಮಗನಿಗೆ ಕರೆ ಮಾಡಿದ್ದರು. ಆಗ ಫಾತಿಮಾ ಎಲ್ಲಿ ಎಂದು ಕೇಳಿದ್ದಕ್ಕೆ, ಅವಳೆಲ್ಲೋ ಹೋಗಿದ್ದಾಳೆ, ಹೇಳದೆ ಕೇಳದೆ ನಾಪತ್ತೆಯಾಗಿದ್ದಾಳೆ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದ. ಕೂಡಲೇ ಮಗನ ಮನೆಗೆ ಬಂದ ತಾಯಿ ಆಶಿಯಾ ಪೊಲೀಸರಿಗೆ ದೂರು ಕೊಟ್ಟಿದ್ದರು. ಅಷ್ಟರಲ್ಲಿ ವಾಸಿ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದ್ದ. ಪೊಲೀಸರು ಆತನ ಮನೆಯನ್ನು ಅಗೆದು ಮೃತದೇಹ ವಶಪಡಿಸಿಕೊಂಡು ಪೋಸ್ಟ್ಮಾರ್ಟಮ್ಗೆ ಕಳಿಸಿದ್ದಾರೆ. ಹಾಗೇ, ವಿಚಾರಣೆಯನ್ನೂ ಪ್ರಾರಂಭ ಮಾಡಿದ್ದಾರೆ. ‘ಮೃತದೇಹದ ಮೈಮೇಲೆ ಎಲ್ಲಿಯೂ ಗಾಯದ ಗುರುತು ಇಲ್ಲ. ವಿದ್ಯುತ್ ಶಾಕ್ ತೀವ್ರತೆ ಜಾಸ್ತಿಯಾಗಿಯೇ ಆಕೆ ಮೃತಪಟ್ಟಿದ್ದಾಳೆ. ವಾಸಿ ಮತ್ತು ಫಾತಿಮಾ ಮಧ್ಯೆ ಜಗಳಕ್ಕೆ ಕಾರಣವೇನು ಎಂಬುದು ವಿಚಾರಣೆ ಬಳಿಕವಷ್ಟೇ ಗೊತ್ತಾಗಲಿದೆ’ ಎಂದು ಪೊಲೀಸ್ ಅಧಿಕಾರಿ ಡಿಪಿ ಶುಕ್ಲಾ ತಿಳಿಸಿದ್ದಾರೆ.
ಇದನ್ನೂ ಓದಿ: China Covid Information | ಕೊರೊನಾ ಸೋಂಕಿತರ ಮಾಹಿತಿ ವಿಚಾರದಲ್ಲಿ ಚೀನಾ ಕಳ್ಳಾಟ, ವರದಿ ನೀಡದಿರಲು ತೀರ್ಮಾನ