Site icon Vistara News

ಕುಟುಂಬ ಸಮೇತ ಸಾಯಲು ಕಾರಿಗೆ ಬೆಂಕಿ ಹಚ್ಚಿದ ಉದ್ಯಮಿ; ಜೀವ ಉಳಿಸಿಕೊಂಡ ಪತ್ನಿ-ಮಗ

Nagpur Businessman

ನಾಗ್ಪುರ: ಉದ್ಯಮಿಯೊಬ್ಬರು ಪತ್ನಿ ಮತ್ತು ಮಗನೊಂದಿಗೆ ಕಾರಿನಲ್ಲಿ ಕುಳಿತು, ಆ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬ ಸಮೇತ ಸಜೀವ ದಹನ ಆಗುವುದು ಅವರ ಉದ್ದೇಶವಾಗಿತ್ತು. ಆದರೆ ಪತ್ನಿ-ಮಗ ಪಾರಾಗಿದ್ದು ಉದ್ಯಮಿಯ ಜೀವ ಬಲಿಯಾಗಿದೆ. ಮೃತ ಉದ್ಯಮಿಯ ಹೆಸರು ರಾಮರಾವ್‌ ಭಟ್‌ (58)ವರ್ಷ. ಗಂಭೀರವಾಗಿ ಗಾಯಗೊಂಡ ಅವರ ಪತ್ನಿ ಸಂಗೀತಾ (57) ಮತ್ತು ಪುತ್ರ ನಂದನ್‌ (25)ರನ್ನು ಸದ್ಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ರಾಮರಾವ್‌ ಭಟ್‌ ಮೈತುಂಬ ಸಾಲ ಮಾಡಿಕೊಂಡು, ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದರು. ಹೀಗಾಗಿ ಆತ್ಮಹತ್ಯೆ ನಿರ್ಧಾರ ಮಾಡಿದ್ದರು. ಮಂಗಳವಾರ ಮಧ್ಯಾಹ್ನ ಪತ್ನಿ-ಮಗನನ್ನು ಕರೆದುಕೊಂಡು ಊಟಕ್ಕೆಂದು ಕಾರಿನಲ್ಲಿ ಹೊರಟಿದ್ದಾರೆ. ಸುಮಾರು 12.30ರ ಹೊತ್ತಿಗೆ ಮನೆಯಿಂದ ಹೊರಟ ಅವರು, ಅರ್ಧಗಂಟೆ ಡ್ರೈವ್‌ ಮಾಡಿದ ಬಳಿಕ 1ಗಂಟೆಗೆ ಖಪ್ರಿ ಪುನರ್ವಸನ್‌ ಎಂಬಲ್ಲಿ ಗಾಡಿ ನಿಲ್ಲಿಸಿದ್ದಾರೆ. ಇತ್ತ ಪತ್ನಿ ಮತ್ತು ಮಗನಿಗೆ ಏನೇನೂ ಗೊತ್ತಿಲ್ಲ. ತಾವು ಊಟಕ್ಕೆ ಹೊರಟಿದ್ದೇವೆ ಎಂದೇ ಅವರು ಭಾವಿಸಿದ್ದರು. ಆದರೆ ಕಾರು ನಿಲ್ಲಿಸಿದ ರಾಮರಾವ್‌ ಒಮ್ಮೆಲೇ ಒಳಗೆಲ್ಲ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ. ಹಾಗಿದ್ದಾಗ್ಯೂ ಸಂಗೀತಾ ಮತ್ತು ನಂದನ್‌ ಕೂಡಲೇ ಕಾರಿನ ಬಾಗಿಲು ತೆಗೆದು ಕೆಳಗೆ ಇಳಿದಿದ್ದಾರೆ. ಅಷ್ಟರಲ್ಲಿ ಅವರ ದೇಹ ಕೂಡ ಸುಟ್ಟುಹೋಗಿತ್ತು.

ಹೀಗೆ ಕಾರು ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ನೋಡಿದ ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕದಳದವರಿಗೆ ಕರೆ ಮಾಡಿದ್ದರು. ಹಾಗೇ, ರಾಮರಾವ್‌, ಸಂಗೀತಾ ಮತ್ತು ನಂದನ್‌ ಮೂವರನ್ನೂ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ರಾಮರಾವ್‌ ಜೀವ ಅಷ್ಟರಲ್ಲೇ ಹೋಗಿತ್ತು. ಅಂದಹಾಗೇ, ರಾಮರಾವ್‌ ಭಟ್‌ ನಾಗ್ಪುರದ ಜೈತಾಲಾ ನಿವಾಸಿಯಾಗಿದ್ದು, ವೆಲ್ಡಿಂಗ್‌ ಉದ್ಯಮ ಮಾಡಿಕೊಂಡಿದ್ದರು. ಇನ್ನು ತಾವು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿಶ್ಚಯ ಮಾಡಿದ್ದ ಭಟ್‌, ಸೂಸೈಡ್‌ ನೋಟ್‌ ಕೂಡ ಬರೆದು ಕಾರಿನಲ್ಲಿ ಇಟ್ಟುಕೊಂಡಿದ್ದರು. ಅದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹಣಕಾಸಿನ ಸಮಸ್ಯೆಯಿಂದಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಅದರಲ್ಲಿ ಉಲ್ಲೇಖವಾಗಿದೆ. ಬೆಲ್ಟಾರೋಡಿ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

ಇದನ್ನೂ ಓದಿ: Neetu Chandra | ಸಂಬಳ ಕೊಡುವೆ, ಹೆಂಡತಿಯಾಗು ಎಂದು ನಟಿಗೆ ಉದ್ಯಮಿಯಿಂದ ಆಫರ್‌!

Exit mobile version