ಮುಂಬೈ: ದಕ್ಷಿಣ ಮುಂಬೈನ ಚರ್ಚ್‌ಗೇಟ್‌ನಲ್ಲಿ ನೈಜೀರಿಯಾ ಮೂಲದ ವ್ಯಕ್ತಿಯೊಬ್ಬ (Nigerian Man) ಸಿಕ್ಕಸಿಕ್ಕವರಿಗೆ ಚಾಕುವಿನಲ್ಲಿ ಇರಿದಿದ್ದಾನೆ. ಆತನ ಚಾಕು ದಾಳಿಯಿಂದ 8 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ದಕ್ಷಿಣ ಮುಂಬೈನ ಹೆಚ್ಚುವರಿ ಪೊಲೀಸ್ ಆಯುಕ್ತ ದಿಲೀಪ್ ಸಾವಂತ್ ಮಾಹಿತಿ ನೀಡಿದ್ದಾರೆ. ಇದು ನಡೆದದ್ದು ದಕ್ಷಿಣ ಮುಂಬೈನ ಪಾರ್ಸಿ ಬಾವಿ ಸಮೀಪದ ಟಾಟಾ ಗಾರ್ಡನ್‌ನಲ್ಲಿ. ಚಾಕುವಿನಿಂದ ದಾಳಿ ಮಾಡಿದವನ ಹೆಸರು ಜಾನ್ ಎಂದಾಗಿದ್ದು, 50ವರ್ಷ. ರಸ್ತೆ ಬದಿಯಲ್ಲಿ ಮಹಿಳೆಯೊಬ್ಬಳ ಜತೆ ಕುಳಿತಿದ್ದ. ಅದೇನಾಯ್ತೋ ಗೊತ್ತಿಲ್ಲ, ಎದ್ದು ದಾರಿಹೋಕರಿಗೆಲ್ಲ ಚಾಕುವಿನಿಂದ ಚುಚ್ಚಿದ್ದಾನೆ.
ಎಂಟು ಜನರು ಗಾಯಗೊಂಡಿದ್ದು, ಒಬ್ಬಾತನ ಸ್ಥಿತಿ ಗಂಭೀರವಾಗಿದೆ. ನೈಜೀರಿಯಾ ಪ್ರಜೆಯ ಕೃತ್ಯ ನೋಡಿದ ಸ್ಥಳೀಯರೊಬ್ಬರು ಪೊಲೀಸರಿಗೆ ಕರೆ ಮಾಡಿದ್ದರೆ. ನಂತರ ಪೊಲೀಸರು ಅಲ್ಲಿಗೆ ತೆರಳಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಗಾಯಗೊಂಡ ಎಲ್ಲರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಆತ ಜನರಿಗೆ ಇರಿದ ಜಾಗವೆಲ್ಲ ರಕ್ತಸಿಕ್ತವಾಗಿದೆ. ಅವನು ಚಾಕುವಿನಿಂದ ದಾಳಿ ಮಾಡಲು ಕಾರಣವೇನು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ಕುಡುಕನ ಕಾಟ: ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಮುಂಬೈಲಿ ಇಳಿಸಿದ ಪೈಲಟ್