ಭುವನೇಶ್ವರ: ಗೆಳೆಯರ ಜತೆ ಪಾರ್ಟಿ ಮಾಡುವುದು, ಅವರ ಜತೆ ಕುಳಿತು ಕಂಠಪೂರ್ತಿ ಕುಡಿದಾಗ ಸಣ್ಣ-ಪುಟ್ಟ ಜಗಳಗಳು ಆಗುವುದು ಸಹಜ. ಅವನು ಇವನಿಗೆ ಬೈಯುವುದು, ಇವನು ಅವನಿಗೆ ಬೈಯುವುದು, ಕೊನೆಗೆ ಇಬ್ಬರೂ ಕೂಡಿ ಮನೆಗೆ ಹೋಗುವುದು ಕುಡಿತದ ಗಮ್ಮತ್ತೇ ಆಗಿದೆ. ಆದರೆ, ಒಡಿಶಾದಲ್ಲಿ ಗೆಳೆಯನ ಜತೆ ಕುಳಿತು ಕುಡಿದ ವ್ಯಕ್ತಿಯೊಬ್ಬ ಪಾರ್ಟಿ ಮುಗಿದ ಬಳಿಕ ಆತನ ಮರ್ಮಾಂಗವನ್ನೇ ಕತ್ತರಿಸಿದ್ದಾನೆ.
ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿ ಭಾನುವಾರ (ಮಾರ್ಚ್ 2) ಘಟನೆ ನಡೆದಿದೆ. ರಾಜ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೆಂಥ ಬೀಚ್‌ನಲ್ಲಿ ಗೆಳೆಯರಾದ ಅಕ್ಷಯ ರಾವತ್ (32) ಹಾಗೂ ಭಾಗವತ್ ದಾಸ್ (30) ಪಾರ್ಟಿ ಮಾಡಿದ್ದಾರೆ. ಇಬ್ಬರೂ ಕಂಠಮಟ್ಟ ಮದ್ಯ ಸೇವಿಸಿದ ಬಳಿಕ ವಾಗ್ವಾದ ಆರಂಭಿಸಿದ್ದಾರೆ. ಇಬ್ಬರ ನಡುವಿನ ಗಲಾಟೆ ಜೋರಾಗಿದೆ. ಇದೇ ವೇಳೆ ಕುಪಿತಗೊಂಡ ಅಕ್ಷಯ ರಾವತ್, ಚೂಪಾದ ಅಸ್ತ್ರದಿಂದ ಭಾಗವತ್ ದಾಸ್‌ನ ಗುಪ್ತಾಂತವನ್ನೇ ಕತ್ತರಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪರಾರಿಯಾದ ರಾವತ್‌ಗೆ ಶೋಧ
ಗೆಳೆಯನ ಜತೆ ಕುಡಿದು, ಆತನ ಮರ್ಮಾಂಗವನ್ನೇ ಕತ್ತರಿಸಿದ ಬಳಿಕ ಅಕ್ಷಯ ರಾವತ್ ಪರಾರಿಯಾಗಿದ್ದಾನೆ. ಬೀಚ್‌ನಲ್ಲಿಯೇ ಬಿದ್ದ ವ್ಯಕ್ತಿಯ ಕುರಿತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಆರಂಭಿಸಿ, ಇಬ್ಬರೂ ಆಟೋದಲ್ಲಿ ಬೀಚ್‌ಗೆ ತೆರಳಿದ ಮಾಹಿತಿ ಪಡೆದು ಆಟೋ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಆಟೋ ಚಾಲಕ ನೀಡಿದ ಮಾಹಿತಿ ಆಧರಿಸಿ ಅಕ್ಷಯ ರಾವತ್‌ಗೆ ಬಲೆ ಬೀಸಲಾಗಿದೆ.
ಭಾಗವತ್ ದಾಸ್‌ನನ್ನು ಮೊದಲು ರಾಜ್‌ನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಆದರೆ, ಆತನ ಪರಿಸ್ಥಿತಿ ಸುಧಾರಿಸದ ಕಾರಣ ಕಟಕ್‌ನಲ್ಲಿರುವ ಎಸ್‌ಸಿಬಿ ಮೆಡಿಕಲ್ ಕಾಲೇಜ್ ಹಾಗೂ ಆಸ್ಪಿಟಲ್‌ಗೆ ಸಾಗಿಸಿದ್ದು, ಈಗಲೂ ಚಿಕಿತ್ಸೆ ಮುಂದುವರಿದಿದೆ. ಭಾರತೀಯ ದಂಡ ಸಂಹಿತೆ (IPC)ಯ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಅಕ್ಷಯ ರಾವತ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಆತನಿಗಾಗಿ ಶೋಧ ನಡೆಸಿದ್ದಾರೆ.
ಮದುವೆಯಾಗಿ 6 ವರ್ಷಗಳೇ ಕಳೆದರೂ ಒಂದು ಮಗುವನ್ನು ಹೆತ್ತುಕೊಡಲಿಲ್ಲ ಎಂದು ಹೆಂಡತಿಯನ್ನು ಸದಾ ಮೂದಲಿಸುತ್ತ, ಜಗಳವಾಡುತ್ತಿದ್ದ ಪತಿಯು ಕೆಲ ತಿಂಗಳ ಹಿಂದೆ ತನ್ನ ಹೆಂಡತಿಯ ಗುಪ್ತಾಂಗವನ್ನು ಬ್ಲೇಡ್ ನಿಂದ ಕೊಯ್ದು ಗಾಯಗೊಳಿಸಿದ್ದ ಪ್ರಕರಣ ಉತ್ತರ ಪ್ರದೇಶದಲ್ಲಿ ಸುದ್ದಿಯಾಗಿತ್ತು. ಉತ್ತರ ಪ್ರದೇಶದ ಲಖನೌದ ರವೀಂದ್ರ ಎಂಬಾತ ತನ್ನ ಪತ್ನಿ ಬಸುರಾಗಲಿಲ್ಲ ಎಂಬ ಕಾರಣಕ್ಕೆ ಕ್ರೋಧಗೊಂಡು ಈ ಕೃತ್ಯ ಎಸಗಿದ್ದ. ಮದುವೆಯಾಗಿ ಆರು ವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಇದೇ ವಿಚಾರಕ್ಕೆ ಇತ್ತೀಚೆಗೆ ದಂಪತಿ ಮಧ್ಯೆ ಜಗಳವಾಗುತ್ತಿತ್ತು.