ಭುವನೇಶ್ವರ್: ದೇಶದಲ್ಲಿ ಅತ್ಯಂತ ದೊಡ್ಡಮಟ್ಟದಲ್ಲಿ ನಡೆಯುತ್ತಿದ್ದ ಉದ್ಯೋಗ ವಂಚನೆ ಜಾಲವೊಂದನ್ನು ಒಡಿಶಾ ಪೊಲೀಸರು ಭೇದಿಸಿದ್ದಾರೆ. ಇದರ ಮಾಸ್ಟರ್ಮೈಂಡ್ ಆಗಿರುವ ಆರೋಪಿಯನ್ನು ಉತ್ತರ ಪ್ರದೇಶದಲ್ಲಿ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಅಲಿಗಢ್ ಈ ಉದ್ಯೋಗ ವಂಚನೆಯ ಮೂಲ. ಆರೋಪಿಗಳು ಅಲ್ಲಿದ್ದುಕೊಂಡೇ ವಿವಿಧ ರಾಜ್ಯಗಳ ಯುವಕರಿಗೆ ಉದ್ಯೋಗ ಆಮಿಷ ತೋರಿಸಿ, ವಂಚಿಸುತ್ತಿದ್ದಾರೆ. ಅದರಲ್ಲೂ ಗುಜರಾತ್, ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಒಡಿಶಾದ ನಿರುದ್ಯೋಗಿ ಯುವಕರನ್ನೇ ಇವರು ಟಾರ್ಗೆಟ್ ಮಾಡುತ್ತಿದ್ದರು ಎಂದು ಒಡಿಶಾ ಪೊಲೀಸ್ ಇಲಾಖೆ ಆರ್ಥಿಕ ಅಪರಾಧ ವಿಭಾಗ (EOW)ದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಉದ್ಯೋಗ ವಂಚನೆ ಹಗರಣದ ಪ್ರಮುಖ ಆರೋಪಿ ಹೆಸರು ಜಾಫರ್ ಅಹ್ಮದ್ (25). ಈತ ಅಲಿಗಢ್ನವನು. ಬಿಟೆಕ್ ಓದಿದ್ದ ಈತ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದಾನೆ. ನ್ಯಾಯವಾಗಿ ದುಡಿದು ಸಂಪಾದನೆ ಮಾಡಲಾಗದ ಈತ ತನ್ನದೇ ಒಂದು ಗ್ಯಾಂಗ್ ಸೃಷ್ಟಿಸಿಕೊಂಡು ಇಡೀ ದೇಶಾದ್ಯಂತ ಈಗಾಗಲೇ 50 ಸಾವಿರ ಯುವಕರು/ಯುವತಿಯರಿಗೆ ವಂಚಿಸಿದ್ದಾನೆ. ಈತನೊಂದಿಗೆ ಯಾರೆಲ್ಲ ಶಾಮೀಲಾಗಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು EOW ವಿಭಾಗದ ಪೊಲೀಸ್ ಅಧಿಕಾರಿ ಜೆ.ಎನ್.ಪಂಕಜ್ ತಿಳಿಸಿದ್ದಾರೆ. ಸದ್ಯ ಅವನನ್ನು ಬಂಧಿಸಿ, ಅಲಿಗಢ್ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇನ್ನು ಐದು ದಿನಗಳಲ್ಲಿ ಆತನನ್ನು ಭುವನೇಶ್ವರ ಕೋರ್ಟ್ಗೆ ಹಾಜರುಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಜಾಲ ಕೋಟ್ಯಂತರ ರೂಪಾಯಿ ಲೆಕ್ಕದಲ್ಲಿ ವಂಚನೆ ಮಾಡಿದೆ ಎಂದು ಒಡಿಶಾ ಪೊಲೀಸರು ಹೇಳಿದ್ದಾರೆ. ಇನ್ನು ವಂಚಕ ಗುಂಪಿಗೆ ವಿವಿಧ ಕಾಲ್ಸೆಂಟರ್ಗಳಲ್ಲಿ ಕೆಲಸ ಮಾಡುವ ಸುಮಾರು 50 ಉದ್ಯೋಗಿಗಳು ಸಹಾಯ ಮಾಡಿದ್ದಾರೆ. ಇವರೂ ಸಹ ಉತ್ತರ ಪ್ರದೇಶದ ಅಲಿಗಢ್ನವರೇ ಆಗಿದ್ದು, ತಿಂಗಳಿಗೆ 15 ಸಾವಿರ ರೂಪಾಯಿ ಸಂಬಳ ಪಡೆಯುವವರು ಆಗಿದ್ದಾರೆ. ಇವರೆಲ್ಲ ತಾವು ವಂಚಕ ಕಂಪನಿಯ ಉದ್ಯೋಗಿಗಳು ಎಂದು ಬಿಂಬಿಸಿಕೊಂಡು, ಜನರಲ್ಲಿ ನಂಬಿಕೆ ಹುಟ್ಟಿಸುತ್ತಿದ್ದರು. ಇನ್ನು ಈ ಜಾಬ್ ಸ್ಕ್ಯಾಮ್ನಲ್ಲಿ 1000 ಫೇಕ್ ಸಿಮ್ಗಳು, 530 ವಿವಿಧ ಮಾದರಿಯ ಫೋನ್ಗಳು ಬಳಕೆಯಾಗಿವೆ ಎಂದೂ ಒಡಿಶಾ ಪೊಲೀಸರು ಮಾಹಿತಿ ನೀಡಿದ್ದಾರೆ. ಒಟ್ಟಾರೆ ವಂಚನೆಯ ನೈಜಮೊತ್ತವೆಷ್ಟು ಎಂಬುದು ತನಿಖೆ ಬಳಿಕವೇ ಗೊತ್ತಾಗಲಿದೆ ಎಂದೂ ತಿಳಿಸಿದ್ದಾರೆ.
ವಂಚಕರು ತೀಕ್ಷ್ಣಮತಿಗಳು ಎಂಬುದು ಗೊತ್ತಾಗಿದೆ. ಅವರು ಉದ್ಯೋಗಾಕಾಂಕ್ಷಿಗಳೊಂದಿಗೆ ಮಾತನಾಡಲು ಫೇಕ್ ಸಿಮ್ ಬಳಸುತ್ತಿದ್ದರು. ಹಾಗೇ, ವಾಟ್ಸ್ಆ್ಯಪ್ ಧ್ವನಿ ಕರೆ ಮಾಡುತ್ತಿದ್ದರು. ಸಿಮ್ಗೆ ಯಾರ ಹೆಸರನ್ನೂ ಹಾಕುತ್ತಿರಲಿಲ್ಲ. ತಮ್ಮ ಉದ್ಯೋಗಕ್ಕೆ ಸಂಬಂಧಪಟ್ಟ ಸ್ಕೀಮ್ನೆ ಹೆಸರನ್ನೇ ಇಡುತ್ತಿದ್ದರು. ಟ್ರ್ಯೂಕಾಲರ್ನಲ್ಲಿ ಯಾರಾದರೂ ನೋಡಿದರೆ ಅವರಿಗೆ ತಮಗೆ ಕರೆ ಮಾಡಿದ್ಯಾರು ಎಂಬುದು ಗೊತ್ತಾಗದಂತೆ ಮಾಡಿಕೊಂಡಿದ್ದರು. ಹಾಗೇ, ಉದ್ಯೋಗಾಕಾಂಕ್ಷಿಗಳಾಗಿ ಬರುವ ಅಭ್ಯರ್ಥಿಗಳಿಗೆ ನೋಂದಣಿ, ಸಂದರ್ಶನ, ತರಬೇತಿ ಕಾರಣವೊಡ್ಡಿ 3000 ರೂಪಾಯಿಯಿಂದ 50 ಸಾವಿರ ರೂಪಾಯಿವರೆಗೆ ಶುಲ್ಕ ವಿಧಿಸುತ್ತಿದ್ದರು. ಹೀಗೆ ಸಂದರ್ಶನಕ್ಕೆ ಬರುವವರಲ್ಲಿ ನಂಬಿಕೆ ಹುಟ್ಟಿಸುವಂತೆ ಮಾತನಾಡುತ್ತಿದ್ದರು-ಕೃತಿಯೂ ಇರುತ್ತಿತ್ತು. ಇನ್ನು ಸುಮಾರು 100ಕ್ಕೂ ಹೆಚ್ಚು ಫೇಕ್ ಬ್ಯಾಂಕ್ ಅಕೌಂಟ್ಗಳನ್ನು ಹೊಂದಿ, ಉದ್ಯೋಗಾಕಾಂಕ್ಷಿಗಳ ಬಳಿ ಹಣವನ್ನು ಅಲ್ಲೇ ವರ್ಗಾವಣೆ ಮಾಡುವಂತೆ ಹೇಳುತ್ತಿದ್ದರು. ಈ ಬಗ್ಗೆ ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಒಡಿಶಾ ಪೊಲೀಸ್ ಮಾಹಿತಿ ನೀಡುತ್ತಿದ್ದಾರೆ.
ಇದನ್ನೂ ಓದಿ: Online Fraud | ಆನ್ ಲೈನ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್!