Site icon Vistara News

ಹುಷಾರ್‌ ! ಬೆಂಗಳೂರಿನಲ್ಲಿ ಮತ್ತೊಮ್ಮೆ ಪತ್ತೆಯಾಯ್ತು ಓಜಿಕುಪ್ಪಂ ಗ್ಯಾಂಗ್

ಬೆಂಗಳೂರು: ಕಳ್ಳರು ಎಂಬ ಅನುಮಾನವೇ ಬಾರದಂತೆ ಬ್ರ್ಯಾಂಡೆಡ್‌ ಬಟ್ಟೆಗಳನ್ನು ಧರಿಸಿಕೊಂಡು ಕಳ್ಳತನ ಮಾಡುವ ಓಜಿಕುಪ್ಪಂ ಗ್ಯಾಂಗ್‌ ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಕಾಣಿಸಿಕೊಂಡಿದೆ. ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಈ ಗ್ಯಾಂಗ್‌ ಭಾಗಿಯಾಗಿತ್ತು. ಇದೀಗ ಓಜಿಕುಪ್ಪಂ ಗ್ಯಾಂಗ್‌ನ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರದೀಪ್‌ ಅಲಿಯಾಸ್‌ ಕಾರ್ತಿಕ್‌ ಮತ್ತು ಗೋಪಿ ಅಲಿಯಾಸ್‌ ಗಡ್ಡ ಇದೀಘ ಬಂಧಿತ ಆರೋಪಿಗಳು. ಶುಕ್ರವಾರ ಮತ್ತು ಸೋಮವಾರ ಈ ಆರೋಪಿಗಳು ಕೆಲಸಕ್ಕೆ ಇಳಿಯುತ್ತಿದ್ದರು. ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಒಟ್ಟು ನಾಲ್ಕು ಆರೋಫಿಗಳು, ಬ್ಯಾಂಕ್‌ಗಳ ಬಳಿಯೇ ಕಾರ್ಯಾಚರಣೆಗೆ ಇಳಿಯುತ್ತಿದ್ದರು. ಬ್ಯಾಂಕ್‌ನಿಂದ ಹಣ ತೆಗೆದುಕೊಂಡುಬರುವವರನ್ನೇ ಟಾರ್ಗೆಟ್‌ ಮಾಡುತ್ತಿದ್ದರು.

ಅವರಿಂದ ಹಣ ದರೋಡೆ ಮಾಡುವುದನ್ನೇ ಕೆಲಸ ಮಾಡಿಕೊಂಡಿದ್ದ ಆರೋಪಿಗಳು, ಕಳ್ಳರು ಎಂಬ ಡೌಟ್ ಬರದಂತೆ ಬ್ರ್ಯಾಂಡೆಡ್‌ ಬಟ್ಟೆ ಹಾಕಿ ಎಚ್ಚರ ವಹಿಸುತ್ತಿದ್ದರು. ಬ್ಯಾಂಕ್‌ನಿಂದ ಹಣ ತರುವವರ ಕಾರನ್ನು ಪಂಚರ್‌ ಮಾಡುತ್ತಿದ್ದರು. ನಂತರ ಅವರನ್ನೇ ಹಿಂಬಾಲಿಸಿಕೊಂಡು ಹೋಗುತ್ತಿದ್ದರು. ನಡುವೆ ಕಾರಿನ ಟಯರ್‌ ಸಂಪೂರ್ಣ ಗಾಳಿ ಹೋಗಿ ನಿಲ್ಲುತ್ತಿತ್ತು. ಚಾಲಕ ಕಾರಿನಿಂದ ಕೆಳಗೆ ಇಳಿದಾಗ ಹಣ ಕದ್ದು ಪರಾರಿ ಆಗುತ್ತಿದ್ದರು. ಒಂದು ದರೋಡೆ ಯಶಸ್ವಿಯಾದರೆ ಚೆನ್ನೈಗೆ ಹಾರುತ್ತಿದ್ದ ಗ್ಯಾಂಗ್‌, ನಂತರ ಬಾಂಬೆ ರೆಡ್ ಲೈಟ್ ಏರಿಯಾದಲ್ಲಿ ಮಜಾ ಮಾಡುತ್ತಿದ್ದರು. ಗೋವಾ ಕೆಸಿನೋಗೆ ಹೋಗಿ ದುಡ್ಡು ಉಡಾಯಿಸುತ್ತಿದ್ದರು. ದುಡ್ಡು ಖಾಲಿ ಆದಮೇಲೆ ಮತ್ತೆ ದರೋಡೆಗೆ ಇಳಿಯುತ್ತಿದ್ದರು.

ಇದನ್ನೂ ಓದಿ | ಆಸ್ತಿ ವಿಚಾರಕ್ಕೆ ಮಗನಿಗೇ ಬೆಂಕಿಯಿಟ್ಟ ಅಪ್ಪ: ವಾರ ನರಳಿ ಪ್ರಾಣ ಬಿಟ್ಟ ಪುತ್ರ

ಆರೋಪಿಗಳು ಎಲೆಕ್ಟ್ರಾನಿಕ್ ಸಿಟಿಯಲ್ಲಿ ತಾತ್ಕಾಲಿಕವಾಗಿ ಮನೆ ಮಾಡಿಕೊಂಡಿದ್ದರು. ತಮಿಳುನಾಡಿನಿಂದ ಆಗಮಿಸಿದಾಗ ಇಲ್ಲಿ ತಂಗುತ್ತಿದ್ದರು. ಐನೂರಕ್ಕೂ ಹೆಚ್ಚು  ಸಿಸಿಟಿವಿ ಚೆಕ್ ಮಾಡಿ ನಂತರ ಆರೋಪಿಗಳನ್ನು ಬಂಧಿಸುವುದಕ್ಕೆ ಪೊಲೀಸರರು ಎಲೆಕ್ಟ್ರಾನಿಕ್ ಸಿಟಿಯಲ್ಲಿಯೇ ಬಾಡಿಗೆ ಮನೆ ಮಾಡಿದ್ದರು. ಶುಕ್ರವಾರ ಮನೆಗೆ ಬಂದಿದ್ದ ವೇಳೆ ಆರೋಪಿಗನ್ನು ಸುತ್ತುವರಿದು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಠಾಣೆಯಲ್ಲಿ ಐದು, ಬಸವೇಶ್ವರನಗರ ಠಾಣೆಯಲ್ಲಿ ಒಂದು. ಚಂದ್ರಾ ಲೇಔಟ್ ಠಾಣೆಯಲ್ಲಿ ಒಂದು ಸೇರಿದಂತೆ 9 ಪ್ರಕರಣ ಇವರ ಮೇಲಿದೆ ಎನ್ನುವುದು ಬಂಧನದ ನಂತರ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version