ಬೆಂಗಳೂರು: ಆನ್‌ಲೈನ್‌ನಲ್ಲಿ ವಂಚನೆ (Online Fraud) ಇತ್ತೀಚೆಗೆ ಸಾಮಾನ್ಯವಾಗಿರುವ ವಿಚಾರ. ಏನೇನೋ ಆಸೆ ತೋರಿಸಿ, ಜನರಿಂದ ಹಣ ಕೀಳುವ ಸಾಕಷ್ಟು ಸುದ್ದಿಗಳು ಈಗಾಗಲೇ ವರದಿಯಾಗಿವೆ. ಇದೀಗ ಅದೇ ರೀತಿಯಲ್ಲಿ ಬೆಂಗಳೂರಿನ ಮೂರು ಮಂದಿಗೆ ವರ್ಕ್ ಫ್ರಂ ಹೋಮ್ ಕೆಲಸ ಕೊಡಿಸುವ ಸುಳ್ಳು ಆಶ್ವಾಸನೆ ಕೊಟ್ಟು 26 ಲಕ್ಷ ರೂ. ವಂಚನೆ ಮಾಡಿರುವುದು ವರದಿಯಾಗಿದೆ.
ಕೆಆರ್ ಪುರಂನ ನಿವಾಸಿಯಾಗಿರುವ 32 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ಗೆ ಏಪ್ರಿಲ್ 1ರಂದು ಟೆಲಿಗ್ರಾಂ ಆಪ್‌ನಲ್ಲಿ ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿದೆ. ಅಂಜಲಿ ಎಂದು ಪರಿಚಯಿಸಿಕೊಂಡ ಅವರು, ಟೆಕ್ಕಿಗೆ ಮನೆಯಿಂದಲೇ ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಪಡೆಯುವ ಕೆಲಸ ಕೊಡಿಸುವುದಾಗಿ ಹೇಳಿದ್ದಾರೆ. ಅದನ್ನು ನಂಬಿದ ಟೆಕ್ಕಿ ಬಳಿ ಹತ್ತು ಸಾವಿರ ರೂ. ಅನ್ನು ನೋಂದಣಿ ಶುಲ್ಕ ಎಂದು ಪಡೆಯಲಾಗಿದೆ. ನಂತರ 15 ಲಕ್ಷ ರೂ. ಪಾವತಿಸಿ, ಆ ಹಣ ನಿಮಗೆ ಲಾಭದೊಂದಿಗೆ ವಾಪಸಾಗುತ್ತದೆ ಎಂದು ಹೇಳಿದ್ದಾರೆ. ಅದರಂತೆ ಟೆಕ್ಕಿ 15 ಲಕ್ಷ ರೂ. ಅನ್ನು ಪಾವತಿಸಿದ್ದಾನೆ ಕೂಡ. ಅದಾದ ನಂತರ ಟೆಕ್ಕಿಯೊಂದಿಗಿನ ಸಂಪರ್ಕವನ್ನು ವಂಚನೆಯ ಗ್ಯಾಂಗ್ ಕಡಿತ ಮಾಡಿಕೊಂಡಿದೆ.
ಇದನ್ನೂ ಓದಿ: Triple Talaq: ಆನ್‌ಲೈನ್‌ನಲ್ಲಿ 1.5 ಲಕ್ಷ ರೂ. ಕಳೆದುಕೊಂಡ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ
ಹಾಗೆಯೇ ಕೆಆರ್ ಪುರಂನ ವಾಸಿಯಾಗಿರುವ ಇನ್ನೊಬ್ಬ ವ್ಯಕ್ತಿಗೂ ಮೋಸ ಮಾಡಲಾಗಿದೆ. ಎಚ್‌ಆರ್ ಮ್ಯಾನೇಜರ್ ಆಗಿರುವ ಅವರಿಗೆ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಟೆಲಿಗ್ರಾಂನಲ್ಲಿ ಮಹಿಳೆಯೊಬ್ಬಳು ಸಂಪರ್ಕ ಮಾಡಿದ್ದಾಳೆ. ವರ್ಕ್ ಫ್ರಮ್ ಹೋಮ್ ಕೆಲಸ ಕೊಡಿಸುವ ಭರವಸೆ ನೀಡಿ ಆಕೆ ಆತನಿಂದ 8.5 ಲಕ್ಷ ರೂ. ಪಡೆದುಕೊಂಡಿದ್ದಾಳೆ. ಎಷ್ಟು ದಿನವಾದರೂ ಆಫರ್ ಲೆಟರ್ ಬರದಿದ್ದಾಗ ತಾನು ಮೋಸ ಹೋಗಿದ್ದೇನೆ ಎನ್ನುವ ವಿಚಾರ ಆತನಿಗೆ ಗೊತ್ತಾಗಿದೆ.
ಮೂರನೇ ಪ್ರಕರಣದಲ್ಲಿ 32 ವರ್ಷದ ಗೃಹಿಣಿಗೆ ಮೋಸ ಮಾಡಲಾಗಿದೆ. ಆಕೆಗೆ ಟೆಲಿಗ್ರಾಂ ಮೂಲಕ ಸಂಪರ್ಕ ಮಾಡಿದ ವಂಚಕರು ಮನೆಯಿಂದಲೇ ಮಾಡುವ ಕೆಲಸ ಕೊಡಿಸುವ ಭರವಸೆ ಕೊಟ್ಟು 3 ಲಕ್ಷ ರೂ. ಪಡೆದುಕೊಂಡಿದ್ದಾರೆ. ಆಕೆ ಹಣ ವರ್ಗಾವಣೆ ಮಾಡಿದ ನಂತರ ಮೋಸ ಮಾಡಿದ್ದಾರೆ.