ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ನರಸಿಂಹ ದೇವಸ್ಥಾನದ 28ವರ್ಷದ ಅರ್ಚಕ ರಾಮ್ ಶಂಕರ್ ದಾಸ್ (28) ಎಂಬುವರು ಫೇಸ್ಬುಕ್ ಲೈವ್ (Facebook Live) ಮಾಡುತ್ತಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ಕಿರಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದವರು ಹೇಳಿದ್ದಾರೆ. ರಾಯ್ಗಂಜ್ ಪೊಲೀಸ್ ಔಟ್ಪೋಸ್ಟ್ ಠಾಣೆಯ ಮುಖ್ಯ ಅಧಿಕಾರಿ ಮತ್ತು ಕಾನ್ಸ್ಟೆಬಲ್ವೊಬ್ಬರ ವಿರುದ್ಧ ರಾಮಶಂಕರ್ ದಾಸ್ ಗಂಭೀರ ಆರೋಪ ಮಾಡಿದ್ದಾರೆ.
ಇದೇ ವರ್ಷ ಜನವರಿಯಲ್ಲಿ ನರಸಿಂಹ ದೇವಸ್ಥಾನದ ಹಿರಿಯ ಅರ್ಚಕ ರಾಮ್ ಶರಣ್ ದಾಸ್ (80) ನಾಪತ್ತೆಯಾಗಿದ್ದಾರೆ. ಅವರ ಕಣ್ಮರೆಗೆ ಕೇಸ್ಗೆ ಸಂಬಂಧಿಸಿದಂತೆ ರಾಮ್ ಶಂಕರ್ ದಾಸ್ ವಿರುದ್ಧ ಕೆಲವೇ ದಿನಗಳ ಹಿಂದೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಆ ಅರ್ಚಕ ರಾಮ್ ಶಂಕರ್ ದಾಸ್ ಇದೇ ವಿಷಯ ಇಟ್ಟುಕೊಂಡು ಫೇಸ್ಬುಕ್ ಲೈವ್ನಲ್ಲಿ ಪೊಲೀಸರ ವಿರುದ್ಧ ಆರೋಪ ಮಾಡಿದ್ದಾನೆ. ದೇವಸ್ಥಾನದ ಆವರಣದಲ್ಲಿಯೇ ಕೋಣೆಯೊಂದರಲ್ಲಿ ವಾಸವಾಗಿದ್ದ ರಾಮ ಶಂಕರ್ ದಾಸ್ ಎರಡು ದಿನಗಳಾದರೂ ರೂಮಿನ ಬಾಗಿಲು ತೆಗೆಯದೆ ಇದ್ದಾಗ, ಪೊಲೀಸರೇ ಕೋಣೆಯ ಬಾಗಿಲು ಒಡೆದು ಒಳಹೋಗಿದ್ದಾರೆ. ಬಟ್ಟೆಯಿಂದಲೇ ಆತ ನೇಣು ಬಿಗಿದುಕೊಂಡಿದ್ದಾನೆಂದು ಅವರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Nepal plane crash | ವೈರಲ್ ವಿಡಿಯೊ| ಯೇತಿ ಏರ್‌ಲೈನ್ಸ್‌ನ ಕೊನೆಯ ಕ್ಷಣಗಳು ಫೇಸ್‌ಬುಕ್‌ನಲ್ಲಿ ದಾಖಲು!
ಮೃತ ರಾಮ್ ಶಂಕರ್ ದಾಸ್ ಆರೋಪವನ್ನು ಕೊತ್ವಾಲಿ ಪೊಲೀಸ್ ಠಾಣೆ ಅಧಿಕಾರಿ ಮನೋಜ್ ಶರ್ಮಾ ಅಲ್ಲಗಳೆದಿದ್ದಾರೆ. ರಾಮ್ ಶಂಕರ್ ದಾಸ್ ಮಾದಕ ವಸ್ತು ವ್ಯಸನಿಯಾಗಿದ್ದ. ಡ್ರಗ್ಸ್ ಸೇವಿಸಿ, ಅದರ ಅಮಲಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರ ವಿರುದ್ಧ ಅವನು ಮಾಡಿರುವ ಆರೋಪ ಅಪ್ಪಟ ಸುಳ್ಳು ಎಂದಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.