ಚಂಡಿಗಢ: 50ಕ್ಕೂ ಹೆಚ್ಚು ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ (Physical Abuse) ಆರೋಪದಲ್ಲಿ ಕಾಮುಕ ಪ್ರಾಂಶುಪಾಲರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಹರಿಯಾಣದ ಜಿಂದ್ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತರೆಲ್ಲರೂ ಅಪ್ರಾಪ್ತ ವಯಸ್ಸಿನ ಬಾಲಕಿಯರಾಗಿದ್ದು, ಪ್ರಕರಣದ ಬಗ್ಗೆ ಈಗಾಗಲೇ ಕೆಲವರು ರಾಷ್ಪ್ರಪತಿ, ಪ್ರಧಾನ ಮಂತ್ರಿಗಳ ಕಾರ್ಯಾಲಯ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಪೋಕ್ಸೊ ಪ್ರಕರಣದಲ್ಲಿ ಪ್ರಾಂಶುಪಾಲ ಕರ್ತಾರ್ ಸಿಂಗ್ (55) ಎಂಬಾತನನ್ನು ಹರಿಯಾಣದ ಪೋಲಿಸ್ ಇಲಾಖೆಯ ವಿಶೇಷ ತನಿಖಾ ತಂಡವು ಶನಿವಾರ ಬಂಧಿಸಿದೆ. ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ್ದು, ಭಾನುವಾರ ಜಿಂದ್‌ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಮುಂದಿನ ವಿಚಾರಣೆ ನಡೆಸಲು ಅವರನ್ನು ಪೊಲೀಸ್ ವಶಕ್ಕೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯು ಜಿಂದ್ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲನಾಗಿದ್ದು, ಕಚೇರಿಯೊಳಗೆ ಬಾಲಕಿಯರನ್ನು ಕರೆಸಿಕೊಂಡು ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದ. ಪ್ರಕರಣದಲ್ಲಿ ಶಾಲೆಯ ಶಿಕ್ಷಕಿಯರ ಪಾತ್ರವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಾನು ಹೇಳಿದಂತೆ ಕೇಳದಿದ್ದರೆ ಪ್ರಾಕ್ಟಿಕಲ್ ಎಕ್ಸಾಂನಲ್ಲಿ ಫೇಲ್ ಮಾಡುವುದಾಗಿ ಬಾಲಕಿಯರಿಗೆ ಪ್ರಿನ್ಸಿಪಾಲ್ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ.
ಇದನ್ನೂ ಓದಿ | GPS Tracker: ಉಗ್ರರ ಮೇಲೆ ನಿಗಾ ಇಡಲು ಜಿಪಿಎಸ್ ಟ್ರ್ಯಾಕರ್; ದಾಖಲೆ ಬರೆದ ಕಾಶ್ಮೀರ ಪೊಲೀಸರು!
ಪ್ರಕರಣ ಸಂಬಂಧ ಹರಿಯಾಣ ರಾಜ್ಯ ಮಹಿಳಾ ಆಯೋಗವು, ಪೊಲೀಸರು ಹಾಗೂ ಬಾಲಕಿಯರಿಗೆ ನೋಟಿಸ್ ನೀಡಿದ್ದು, ಹೆಚ್ಚಿನ ವಿಚಾರಣೆಗಾಗಿ ಮಾಹಿತಿ ಪಡೆಯಲು ಮುಂದಾಗಿದೆ. ಇನ್ನು ಪ್ರಾಂಶುಪಾಲ ಕರ್ತಾರ್ ಸಿಂಗ್ ಅವರನ್ನು ಅಕ್ಟೋಬರ್ 27 ರಂದು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಸೆಪ್ಟೆಂಬರ್ 14 ರಂದು ನೀಡಿದ ಬಾಲಕಿಯರ ದೂರಿನ ಬಗ್ಗೆ ಕ್ರಮ ಕೈಗೊಳ್ಳದಿದ್ದ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗವು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತ್ತು.
ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಮಹಿಳಾ ಆಯೋಗ ಅಸಮಾಧಾನ ಹೊರಹಾಕಿತ್ತು. ನಂತರ ಪ್ರಾಂಶುಪಾಲನ ವಿರುದ್ಧ ಐಪಿಸಿ ಸೆಕ್ಷನ್ 354- A, 341, 342 ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ನಿಯಮಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ | AIIMS Delhi: ಅಯಸ್ಕಾಂತದಿಂದ ಬಾಲಕನ ಶ್ವಾಸಕೋಶದಲ್ಲಿ ಸಿಲುಕಿದ್ದ ಸೂಜಿ ಹೊರ ತೆಗೆದ ವೈದ್ಯರು
ಶಾಲಾ ಬಾಲಕಿಯರಿಂದ ಪ್ರಾಂಶುಪಾಲರ ವಿರುದ್ಧ ನಮಗೆ 60 ಲಿಖಿತ ದೂರುಗಳು ಬಂದಿವೆ. ಇವುಗಳಲ್ಲಿ 50 ದೂರುಗಳಲ್ಲಿ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ತಿಳಿಸಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೇಣು ಭಾಟಿಯಾ ತಿಳಿಸಿದ್ದಾರೆ.
ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಸಂತ್ರಸ್ತ ಬಾಲಕಿಯರು, ರಾಷ್ಪ್ರಪತಿ, ಪ್ರಧಾನ ಮಂತ್ರಿಗಳ ಕಾರ್ಯಾಲಯ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು, ಹರಿಯಾಣ ಶಿಕ್ಷಣ ಸಚಿವರಿಗೆ ದೂರು ನೀಡಿದ್ದಾರೆ.