Site icon Vistara News

Punjab MMS Scandal | ಲೀಕ್ ಆಗಿದ್ದು ಆರೋಪಿ ಹುಡುಗಿಯ ವಿಡಿಯೋ ಮಾತ್ರ; ಆತ್ಮಹತ್ಯೆ ಯತ್ನವೂ ನಡೆದಿಲ್ಲ

Punjab MMS

ಚಂಡೀಗಢ​: ಪಂಜಾಬ್​​ನ ಮೊಹಾಲಿಯಲ್ಲಿರುವ ಚಂಡೀಗಢ ವಿಶ್ವವಿದ್ಯಾಲಯದ ಬಳಿ ಬೃಹತ್​ ಪ್ರತಿಭಟನೆ ನಡೆಯುತ್ತಿದೆ. ಈ ಯೂನಿವರ್ಸಿಟಿ ಕ್ಯಾಂಪಸ್​​ನಲ್ಲಿರುವ ಹಾಸ್ಟೆಲ್​​ನ ವಿದ್ಯಾರ್ಥಿಯೊಬ್ಬಳು ತನ್ನ ಸಹಪಾಠಿಗಳ ಅಂದರೆ ಅದೇ ಹಾಸ್ಟೆಲ್​​ನಲ್ಲಿ ಇರುವ ಬೇರೆ ಹುಡುಗಿಯರು ಸ್ನಾನ ಮಾಡುತ್ತಿದ್ದ ವಿಡಿಯೋವನ್ನು ಚಿತ್ರೀಕರಿಸಿ ಅದನ್ನು ಎಂಎಂಎಸ್ (ಮಲ್ಟಿಮೀಡಿಯಾ ಸಂದೇಶ ಸೇವೆ)​​ ಮೂಲಕ ವೈರಲ್​ ಮಾಡಿದ್ದಳು. ಆಕೆ ವಿಡಿಯೋವನ್ನು ತನ್ನ ಬಾಯ್​ಫ್ರೆಂಡ್​ಗೆ ಕಳಿಸಿದ್ದಳು. ಆತ ಅದನ್ನು ಅಡಲ್ಟ್​ ವೆಬ್​ಸೈಟ್​ಗೆ ಹಾಕಿ ಲೀಕ್​ ಮಾಡಿದ್ದ ಎಂದು ವರದಿಯಾಗಿದೆ. ಸದ್ಯ ಆ ಹುಡುಗಿಯನ್ನು ಪೊಲೀಸರು ಅರೆಸ್ಟ್ ಮಾಡಿ, ಕೇಸ್​ ದಾಖಲಿಸಿದ್ದಾರೆ.

ಯೂನಿವರ್ಸಿಟಿ ಹಾಸ್ಟೆಲ್​​ನಲ್ಲಿನ ಸುಮಾರು 60 ವಿದ್ಯಾರ್ಥಿನಿಯರ ಸ್ನಾನದ ವಿಡಿಯೋವನ್ನು ಈ ಹುಡುಗಿ ಚಿತ್ರೀಕರಿಸಿದ್ದಳು. ಇವರೆಲ್ಲರ ಮಾನ ಹೋಗುವ ದೃಶ್ಯಗಳು ಪೋರ್ನ್​ ವೆಬ್​​ಸೈಟ್​​ನಲ್ಲಿವೆ ಎಂದು ಪ್ರಾರಂಭದಲ್ಲಿ ವರದಿಯಾಗಿತ್ತು. ಆದರೆ ವಾಸ್ತವ ಬೇರೆ ಇದೆ. ‘ನಾವು ತನಿಖೆ ಮಾಡಿದ್ದೇವೆ. ವಿದ್ಯಾರ್ಥಿನಿಯ ಬಳಿಯಿದ್ದ ಮೊಬೈಲ್​ ಸೇರಿ ಎಲ್ಲ ಎಲೆಕ್ಟ್ರಾನಿಕ್​ ಡಿವೈಸ್​ಗಳನ್ನೂ ವಶಪಡಿಸಿಕೊಂಡಿದ್ದೇವೆ. ಅವುಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳಿಸಲಾಗುವುದು. ಒಂದೇ ಒಂದು ಅಶ್ಲೀಲ ವಿಡಿಯೋ ಪತ್ತೆಯಾಗಿದೆ. ಅದೂ ಕೂಡ ಅದೇ ಆರೋಪಿ ಹುಡುಗಿಯದ್ದೇ ಹೊರತು, ಹಾಸ್ಟೆಲ್​​ನಲ್ಲಿರುವ ಇನ್ಯಾರ ವಿಡಿಯೋಗಳೂ ಅಲ್ಲಿಲ್ಲ. ಆಕೆ ಬೇರೆ ಯಾರದ್ದೂ ವಿಡಿಯೋ ಚಿತ್ರೀಕರಿಸಿಲ್ಲ’ ಎಂದು ಮೊಹಾಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಹಾಗೇ, ಇನ್ನೊಂದು ವಿಚಾರವನ್ನೂ ಅವರು ತಿಳಿಸಿದ್ದಾರೆ. ‘ಈ ಸುದ್ದಿ ಬಿತ್ತರವಾಗುತ್ತಿದ್ದಂತೆ ಹಾಸ್ಟೆಲ್​​ನಲ್ಲಿ ಹಲವು ಹುಡುಗಿಯರು ಆತ್ಮಹತ್ಯೆ ಯತ್ನ ಮಾಡಿದರು ಎಂದು ಹೇಳಲಾಗಿತ್ತು. ಅದೂ ಕೂಡ ತಪ್ಪು ಮಾಹಿತಿ. ಯಾವೊಬ್ಬ ವಿದ್ಯಾರ್ಥಿನಿಯೂ ಸೂಸೈಡ್​ ಮಾಡಿಕೊಳ್ಳಲು ಪ್ರಯತ್ನ ಮಾಡಿಲ್ಲ. ಆದರೆ ಈ ವಿಷಯ ಗೊತ್ತಾಗಿ ಒಬ್ಬಾಕೆ ಗಾಬರಿಯಿಂದ ಎಚ್ಚರ ತಪ್ಪಿ ಬಿದ್ದಳು. ಅವಳನ್ನು ಆ್ಯಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಆರೋಗ್ಯದಲ್ಲಿ ಅಂಥ ಗಂಭೀರ ಸಮಸ್ಯೆ ಇಲ್ಲ. ನಾವು ಅವಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದೇವೆ’ ಎಂದೂ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ಈ ಘಟನೆಯನ್ನು ಪಂಜಾಬ್​ ರಾಜ್ಯ ಮಹಿಳಾ ಆಯೋಗ ಕೂಡ ಗಂಭೀರವಾಗಿ ಪರಿಗಣಿಸಿದೆ. ‘ಇದೊಂದು ಸೂಕ್ಷ್ಮ ಮತ್ತು ಗಂಭೀರ ಪ್ರಕರಣ. ವಿಡಿಯೋ ಲೀಕ್​​ಗೆ ಸಂಬಂಧಪಟ್ಟ ಆರೋಪಿಗಳನ್ನು ಯಾವ ಕಾರಣಕ್ಕೂ ಬಿಡುವುದಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಮನೀಶಾ ಗುಲಾಟಿ ತಿಳಿಸಿದ್ದಾರೆ. ಕಳೆದ ರಾತ್ರಿಯಿಂದಲೂ ಯೂನಿವರ್ಸಿಟಿ ಕ್ಯಾಂಪಸ್​​ನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಲ್ಲಿ ಕೆಲವರು ಉದ್ವೇಗಕ್ಕೆ ಒಳಗಾಗಿ ಅಸ್ವಸ್ಥರಾಗುತ್ತಿದ್ದಾರೆ. ಹಾಗಾಗಿ ಸ್ಥಳದಲ್ಲಿ ಒಂದು ಆ್ಯಂಬುಲೆನ್ಸ್ ನಿಯೋಜಿಸಲಾಗಿದೆ ಎಂದು ಗುಲಾಟಿ ಮಾಹಿತಿ ನೀಡಿದ್ದಾರೆ.

ನಾಚಿಕೆಗೇಡು ಎಂದು ಅರವಿಂದ್ ಕೇಜ್ರಿವಾಲ್​
ಘಟನೆಯ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಚಂಡೀಗಢ ಯೂನಿವರ್ಸಿಟಿಯಲ್ಲಿ ನಡೆದ ಘಟನೆ ನಿಜಕ್ಕೂ ನಾಚಿಕೆಗೇಡು ಮತ್ತು ಗಂಭೀರವಾಗಿದೆ. ದೋಷಿಗಳನ್ನು ಸುಮ್ಮನೆ ಬಿಡುವ ಮಾತೇ ಇಲ್ಲ. ಉಳಿದ ವಿದ್ಯಾರ್ಥಿನಿಯರು, ಪಾಲಕರು ತಾಳ್ಮೆಯಿಂದ ಇರಬೇಕು ಎಂದು ಹೇಳಿದ್ದಾರೆ.

ಹಾಗೇ, ಕಾಂಗ್ರೆಸ್​ ಹಿರಿಯ ನಾಯಕ ಪವನ್​ ಖೇರಾ ಟ್ವೀಟ್​ ಮಾಡಿ ‘ಚಂಡಿಗಢ ಯೂನಿವರ್ಸಿಟಿ ವಿದ್ಯಾರ್ಥಿನಿಯರ ವಿಡಿಯೋಗಳು ವೈರಲ್ ಆಗುತ್ತಿವೆ ಎಂದು ಹೇಳಲಾಗಿದೆ. ಅದನ್ನು ಯಾರೂ ರೀಪೋಸ್ಟ್ ಮಾಡಿಕೊಳ್ಳಬೇಡಿ. ನಿಮ್ಮ ವಾಟ್ಸ್​​ಆ್ಯಪ್​​ಗೆ ವಿಡಿಯೋ ಬಂದರೆ ಶೇರ್ ಮಾಡಬೇಡಿ. ಈ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳೋಣ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Punjab protest | ಚಂಡೀಗಢ ವಿವಿಯಲ್ಲಿ 60 ಹುಡುಗಿಯರ ವಿಡಿಯೊ ಲೀಕ್‌, ವ್ಯಾಪಕ ಪ್ರತಿಭಟನೆ

Exit mobile version