Site icon Vistara News

Road Accident: ಟ್ರ್ಯಾಕ್ಟರ್‌ಗೆ ಹಿಂದಿನಿಂದ ಗುದ್ದಿ ಪಲ್ಟಿ ಹೊಡೆದ ರಾಜಹಂಸ; 10ಕ್ಕೂ ಹೆಚ್ಚು ಮಂದಿಗೆ ಗಾಯ

Rajahamsa bus Road accident in Chitradurga

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೀರೆಹಳ್ಳಿ ಬಳಿ ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ರಾಜಹಂಸ ಬಸ್ ಡಿಕ್ಕಿ (Road Accident) ಹೊಡೆದ ಪರಿಣಾಮ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಇದರಿಂದ ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೀರೆಹಳ್ಳಿ ಬಳಿ ವೇಗವಾಗಿ ಹೋಗುತ್ತಿದ್ದ ಬಸ್‌ ನಿಯಂತ್ರಣ ತಪ್ಪಿದೆ. ಹೀಗಾಗಿ ಮುಂಬದಿ ಇಟ್ಟಿಗೆ ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಬೆಂಗಳೂರಿನಿಂದ ಗುಲ್ಬರ್ಗಕ್ಕೆ ಮದುವೆ ಟ್ರಿಪ್ ಹೋಗಿದ್ದ ಬಸ್ ಇದಾಗಿತ್ತು. ಮದುವೆ ಮುಗಿಸಿ ವಾಪಸ್ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಬಸ್ಸಿನಲ್ಲಿದ್ದ ಎಲ್ಲರೂ ಒಂದೇ ಕುಟುಂಬದವರಾಗಿದ್ದು, ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ನಡೆದಿದೆ ಎಂದು ಆರೋಪಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರನ್ನ ಚಳ್ಳಕೆರೆ ಮತ್ತು ಚಿತ್ರದುರ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪಿಎಸ್ಐ ಗಾದಿಲಿಂಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎತ್ತಿನ ಗಾಡಿಗೆ ಗುದ್ದಿದ ತರಕಾರಿ ವಾಹನ; ಮಹಿಳೆ ಸ್ಥಳದಲ್ಲೇ ಸಾವು, ನಾಲ್ವರು ಗಂಭೀರ

ಬೆಳಗಾವಿ: ಜಿಲ್ಲೆಯ ರಾಮದುರ್ಗ ‌ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ‌ತರಕಾರಿ ‌ವಾಹನ ಹಾಗೂ ಎತ್ತಿನ ಗಾಡಿ ‌ಮಧ್ಯೆ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಎತ್ತಿನ ಬಂಡಿಗೆ ತರಕಾರಿ ವಾಹನವು ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಎತ್ತಿನ ಗಾಡಿಯಲ್ಲಿ ಹೊಲಕ್ಕೆ ಹೊರಟಿದ್ದ ರೈತ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರಾಮದುರ್ಗ ‌ತಾಲೂಕಿನ ಕಾಮನಕೊಪ್ಪ ಗ್ರಾಮದ ಯಮನವ್ವ ಮಡ್ಡಿ (42) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಸುರೇಶ್‌ ಮಡ್ಡಿ, ಅಡಿವೆಪ್ಪ ಜೀರಗಾಳ, ಮಂಜುಳಾ ಜೀರಗಾಳ, ಶಿವಕ್ಕ ಜೀರಗಾಳ ಎಂಬುವವರಿಗೆ ಗಾಯಗಳಾಗಿವೆ.

ಬಸವನಬಾಗೇವಾಡಿಯಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ತರಕಾರಿ ವಾಹನವು ಡಿಕ್ಕಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಎತ್ತಿನ ಬಂಡಿಗೆ ಬಂದು ಗುದ್ದಿದೆ ಎನ್ನಲಾಗಿದೆ. ಸ್ಥಳಕ್ಕೆ ‌ಕಡಕೋಳ ಠಾಣೆ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಕೈಗೊಳ್ಳಲಾಗಿದೆ.

BMTC Accident: ಕಿಲ್ಲರ್ ಬಿಎಂಟಿಸಿಗೆ ವಿದ್ಯಾರ್ಥಿನಿ ಬಲಿ; ಹರಿಶ್ಚಂದ್ರ ಘಾಟ್‌ ಬಳಿ ಅಪಘಾತ

ಬೆಂಗಳೂರು: ಕಿಲ್ಲರ್‌ ಬಿಎಂಟಿಸಿ ಎಂಬುದು ಪದೇ ಪದೆ ಸಾಬೀತಾಗುತ್ತಲೇ ಇದೆ. ರಾಜಾಜಿನಗರದ ಹರಿಶ್ಚಂದ್ರ ಘಾಟ್ (Harishchandra Ghat) ಬಳಿ ಬಿಎಂಟಿಸಿ ಡಿಕ್ಕಿ ಹೊಡೆದ (BMTC Accident) ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಕುಸುಮಿತಾ (21) ಅಪಘಾತಕ್ಕೆ ಬಲಿಯಾದ ವಿದ್ಯಾರ್ಥಿನಿಯಾಗಿದ್ದಾಳೆ. ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕುಸುಮಿತಾ ಕಾಲೇಜಿಗೆ ಹೋಗುವ ವೇಳೆ ಅಪಘಾತಕ್ಕೆ ಬಲಿಯಾಗಿದ್ದಾಳೆ. ಮಲ್ಲೇಶ್ವರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Missing Case: ಮೂವರು ಮಕ್ಕಳೊಂದಿಗೆ ಬೆಂಗಳೂರಿಗೆ ಹೊರಟ ಮಹಿಳೆ ನಾಪತ್ತೆ

ತುಮಕೂರು: ಮೂವರು ಸಣ್ಣ ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಪ್ರಕರಣ (missing Case) ಕುಣಿಗಲ್‌ನಲ್ಲಿ ನಡೆದಿದೆ. ಕುಣಿಗಲ್ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಯಿ ವಸಂತಕುಮಾರಿ (25) ಅವರು ಮಕ್ಕಳಾದ ತನುಶ್ರೀ (8) ಭೂಮಿಕಾ (6) ಜೊತೆಗೆ ನಾಪತ್ತೆಯಾಗಿದ್ದಾರೆ. ಜನವರಿ 16ರಂದು ಮಕ್ಕಳೊಂದಿಗೆ ಬೆಂಗಳೂರಿಗೆ ಹೋಗಿ ಬರುವುದಾಗಿ ಮನೆ ಬಿಟ್ಟು ಹೋಗಿದ್ದ ತಾಯಿ ವಸಂತಾ ಆಮೇಲೆ ಎಲ್ಲೂ ಕಾಣಿಸಿಕೊಂಡಿಲ್ಲ. ಸಂಬಂಧಿಕರು ಈಕೆಗಾಗಿ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದ್ದು, ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್‌ ದೂರು ದಾಖಲಾಗಿದೆ.

ಮಹಿಳೆ ಜೊತೆಗೆ ಕಿರಿಕ್, ಕರ್ನಾಟಕದ ಐಪಿಎಸ್‌ ಅಧಿಕಾರಿ ತಮಿಳುನಾಡಿನಲ್ಲಿ ಬಂಧನ

ಕಲಬುರಗಿ: ಮಹಿಳಾ ಪೊಲೀಸ್ ಸಿಬ್ಬಂದಿ ಜೊತೆಗೆ ಅನುಚಿತವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಕರ್ನಾಟಕದ ಐಪಿಎಸ್ ಅಧಿಕಾರಿಯೊಬ್ಬರನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ.

ಐಪಿಎಸ್‌ ಅಧಿಕಾರಿ ಅರುಣ್ ರಂಗರಾಜನ್ ಕಿರಿಕ್‌ ಮಾಡಿಕೊಂಡಿದ್ದು, ತಮಿಳುನಾಡಿನ ಗೋಬಿ ಪೊಲೀಸ್ ಠಾಣೆಯಲ್ಲಿ ಅರುಣ್‌ ವಿರುದ್ಧ ಜಿಲ್ಲೆಯ ಮಹಿಳಾ ಪೊಲೀಸ್ ಒಬ್ಬರು ದೂರು‌ ದಾಖಲು ಮಾಡಿದ್ದರಿಂದ ಐಪಿಎಸ್ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದ ಅರುಣ್ ರಂಗರಾಜನ್ ಬಂಧಿತ ಅಧಿಕಾರಿ ಎಂದು ಹೇಳಲಾಗುತ್ತಿದ್ದು, ದೂರು ನೀಡಿದ ಮಹಿಳೆ ಚಿಂಚೋಳಿ ತಾಲೂಕಿನ ಪೊಲೀಸ್ ಠಾಣೆಯೊಂದರಲ್ಲಿ ಕಾರ್ಯ ನಿರ್ವಹಿಸುವವರು ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ಈ ಮಹಿಳೆ ಜತೆ ಐಪಿಎಸ್ ಅಧಿಕಾರಿ ಅರುಣ ರಂಗರಾಜನ್ ತಮಿಳುನಾಡಿನ ತಿರುಚ್ಚಿಗೆ ತೆರಳಿದ್ದರು. ಈ ವೇಳೆ ಅವರಿಬ್ಬರ ಮಧ್ಯೆ ಜಗಳವಾಗಿದೆ. ಸ್ಥಳೀಯ ಪೊಲೀಸರು ರಾಜಿ ಮಾಡಿ ಕಳಿಸಿದ್ದರು.

ಕಲಬುರಗಿ ಮಹಿಳಾ ಪೊಲೀಸ್‌ ದೂರು ಬಳಿಕ ಅರುಣ್ ಅವರು ತಮ್ಮ ಹುಟ್ಟೂರು ತಿರುಚ್ಚಿಯ ಶ್ರೀರಂಗಂಗೆ ತಮ್ಮನ್ನು ಕರೆದೊಯ್ದಿದ್ದು, ಹಲ್ಲೆ ನಡೆಸಿದ್ದಾರೆ ಎಂದ ಮಹಿಳೆ ಗೋಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದರನ್ವಯ ಅರುಣ್ ಅವರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Tiger Dance: ಖ್ಯಾತ ಹುಲಿ ವೇಷಧಾರಿ ಅಶೋಕ್‌ ರಾಜ್‌ ನಿಧನ

ಕಲಬುರಗಿಯಲ್ಲಿ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ತಮ್ಮ ಪತ್ನಿಯನ್ನು ಅಕ್ರಮವಾಗಿ ಬಂಧನಲ್ಲಿಟ್ಟುಕೊಂಡು ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಹಿಳೆಯ ಪತಿ ಕಳೆದ
ಮಾರ್ಚ್‌ನಲ್ಲಿ ದೂರು ದಾಖಲು ಮಾಡಿದ್ದರು. ಈ ಕುರಿತು ಸ್ಟೇಷನ್ ಬಜಾರ್ ಠಾಣೆಯ ಪಿಐ ಚಾರ್ಜಶೀಟ್ ಸಲ್ಲಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Exit mobile version