ಜೈಪುರ: ರಾಜಸ್ಥಾನ ಜಾಲೋರ್ ಜಿಲ್ಲೆಯ ಖಾಸಗಿ ಶಾಲೆಯ 9 ವರ್ಷದ ವಿದ್ಯಾರ್ಥಿಯೊಬ್ಬ ಆಗಸ್ಟ್ 13ರಂದು ಮೃತಪಟ್ಟಿದ್ದ (Rajasthan Dalit Child Death). ಈತನ ಸಾವು ದೇಶಾದ್ಯಂತ ಸುದ್ದಿಯಾಗಿದೆ. ಇವನೊಬ್ಬ ದಲಿತ ವಿದ್ಯಾರ್ಥಿಯಾಗಿದ್ದು, ಶಾಲೆಯಲ್ಲಿ ಮೇಲ್ಜಾತಿ ಶಿಕ್ಷಕರು, ವಿದ್ಯಾರ್ಥಿಗಳಿಗಾಗಿ ಕುಡಿಯುವ ನೀರನ್ನಿಟ್ಟಿದ್ದ ಮಣ್ಣಿನ ಮಡಕೆಯನ್ನು ಮುಟ್ಟಿ, ಅದರಿಂದ ನೀರು ಕುಡಿದ ಎಂಬ ಕಾರಣಕ್ಕೆ ಆತನಿಗೆ ಶಿಕ್ಷಕರೊಬ್ಬರು ಥಳಿಸಿದ್ದರು. ಗಾಯಗೊಂಡಿದ್ದ ಹುಡುಗನನ್ನು ಅಹ್ಮದಾಬಾದ್ನ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ ಎಂದೇ ಹೇಳಲಾಗುತ್ತದೆ. ಶಿಕ್ಷಕ ಹೊಡೆದಿದ್ದಕ್ಕೇ ಬಾಲಕ ಸತ್ತಿದ್ದಾನೆ ಎಂದು ಪಾಲಕರೂ ಆರೋಪ ಮಾಡಿದ್ದಾರೆ. ಈ ಘಟನೆಯನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಇತರರು ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಂತೂ ಕಳೆದ ಮೂರ್ನಾಲ್ಕು ದಿನಗಳಿಂದಲೂ ಇದೇ ವಿಷಯ ಚರ್ಚೆಯಾಗುತ್ತಿದ್ದು, ಅನೇಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನೀರು ಕುಡಿದಿದ್ದಕ್ಕೆ ಥಳಿಸಿದಂತೆ ಕಾಣುತ್ತಿಲ್ಲ ಎಂದ ಪೊಲೀಸ್!
ಹುಡುಗನಿಗೆ ಥಳಿಸಿದ ಶಿಕ್ಷಕ ಚೈಲ್ ಸಿಂಗ್ (40)ನನ್ನು ಪೊಲೀಸರು ಬಂಧಿಸಿದ್ದು, ಕೇಸ್ ದಾಖಲಿಸಿದ್ದಾರೆ. ವಿಚಾರಣೆಗೂ ಒಳಪಡಿಸಿದ್ದಾರೆ. ಕಳೆದೆರಡು ದಿನಗಳ ಪ್ರಾಥಮಿಕ ತನಿಖೆ ಬಳಿಕ ಮಾಹಿತಿ ನೀಡಿದ ಜಾಲೋರ್ ಪೊಲೀಸ್ ಅಧೀಕ್ಷಕ ಹರ್ಷವರ್ಧನ್ ಅಗರ್ವಾಲಾ, ‘ಈ 9 ವರ್ಷದ ವಿದ್ಯಾರ್ಥಿ ನೀರಿನ ಮಡಕೆ ಮುಟ್ಟಿದ್ದಕ್ಕೆ ಶಿಕ್ಷಕರು ಥಳಿಸಿದಂತೆ ಕಾಣುತ್ತಿಲ್ಲ. ಈ ಶಾಲೆಯಲ್ಲಿ ಬಹುತೇಕ ಶಿಕ್ಷಕರು, ವಿದ್ಯಾರ್ಥಿಗಳೆಲ್ಲ ದಲಿತರೇ ಆಗಿದ್ದಾರೆ. ಈಗ ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕ ಕೂಡ ಮೇಘ್ವಾಲ್ ಸಮುದಾಯ (ದಲಿತ)ಕ್ಕೆ ಸೇರಿದವರೇ ಆಗಿದ್ದಾರೆ. ಶಾಲೆಯಲ್ಲಿ ಎಲ್ಲರಿಗಾಗಿಯೇ ದೊಡ್ಡ ನೀರಿನ ಟ್ಯಾಂಕ್ ಇದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ, ಹುಡುಗನ ಸಾವಿಗೆ ನಿಖರ ಕಾರಣ ಏನೆಂಬುದು ಗೊತ್ತಾಗುತ್ತದೆ’ ಎಂದು ತಿಳಿಸಿದ್ದಾರೆ.
ಬಾಲಕನ ತಂದೆ ಹೇಳಿದ್ದೇನು?
‘ನನ್ನ ಮಗನಿಗೆ ಶಾಲೆಯಲ್ಲಿ ಶಿಕ್ಷಕರು ವಿಪರೀತ ಹೊಡೆದಿದ್ದರು. ಆತನ ಮುಖ, ಕಿವಿ ಎಲ್ಲ ರಕ್ತಸಿಕ್ತವಾಗಿತ್ತು. ಆತ ಎಚ್ಚರ ತಪ್ಪಿದ ಸ್ಥಿತಿಯಲ್ಲಿದ್ದ. ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಸಾಧ್ಯವಿಲ್ಲ ಎಂದು ಉದಯ್ಪುರಕ್ಕೆ ಕರೆದುಕೊಂಡು ಹೋಗಿ ಎಂದರು. ಉದಯ್ಪುರದಲ್ಲಿ ಸುಮಾರು ಒಂದು ವಾರ ಅಡ್ಮಿಟ್ ಮಾಡಿಡಲಾಗಿತ್ತು. ನನ್ನ ಮಗ ಎಚ್ಚರವಾಗಲಿಲ್ಲ. ಆತನ ಆರೋಗ್ಯದಲ್ಲೂ ಸುಧಾರಣೆ ಕಾಣಿಸಲಿಲ್ಲ. ಅಲ್ಲಿಂದ ಅಹ್ಮದಾಬಾದ್ಗೆ ಕರೆದುಕೊಂಡು ಹೋದೆವು. ಏನೆಲ್ಲ ಪ್ರಯತ್ನಗಳನ್ನು ಮಾಡಿದರೂ ಆಗಸ್ಟ್ 13ರಂದು ಅವನು ಮೃತಪಟ್ಟ’ ಎಂದು ಬಾಲಕನ ತಂದೆ ದೇವಾರಾಮ್ ಮೇಘ್ವಾಲ್ ತಿಳಿಸಿದ್ದಾರೆ. ಅಂದಹಾಗೇ, ಈ ಪ್ರಕರಣವನ್ನು ರಾಜಸ್ಥಾನ ಶಿಕ್ಷಣ ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸಿ, ಬ್ಲಾಕ್ ಶಿಕ್ಷಣಾಧಿಕಾರಿ ಬಳಿ ವರದಿ ಕೇಳಿದೆ.
ಇದನ್ನೂ ಓದಿ: ದಿನಗೂಲಿ ಕಾರ್ಮಿಕನ ಮಗನಿಗೆ ಒಲಿದ ಅದೃಷ್ಟ: ಅಮೆರಿಕದಲ್ಲಿ ಕಲಿಯಲು 2.5 ಕೋಟಿ ರೂ. ಸ್ಕಾಲರ್‌ಷಿಪ್