ಪಾಟ್ನಾ: ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸಬೇಕು, ಅವರಿಗೆ ಕಠಿಣ ಶಿಕ್ಷೆ ನೀಡಬೇಕು, ಲೈಂಗಿಕ ದೌರ್ಜನ್ಯ ಎಸಗುವವರಿಗೆ ಜೀವಾವಧಿಯಲ್ಲಿ ಅವರು ಕಾರಾಗೃಹ ಬಿಟ್ಟು ಬರುವಂತಾಗಬಾರದು ಎಂಬಿತ್ಯಾದಿ ಆಗ್ರಹ ಒಂದೆಡೆ ಕೇಳಿಬರುತ್ತಿದೆ. ಆದರೆ ಇಲ್ಲಿ ನೋಡಿ, ಬಿಹಾರದ ನಾವಡಾ ಜಿಲ್ಲೆಯಲ್ಲಿ ಅಪ್ತಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ನೀಡಿದವನಿಗೆ ಶಿಕ್ಷೆಯಾಗಿ ಐದು ಬಸ್ಕಿ ಹೊಡೆಸಿ, ಬಿಟ್ಟುಬಿಡಲಾಗಿದೆ !
ಈ ವ್ಯಕ್ತಿ ಐದು ವರ್ಷದ ಬಾಲಕಿಗೆ ಚಾಕಲೇಟ್ ಆಸೆ ತೋರಿಸಿ, ಪೌಲ್ಟ್ರಿ ಫಾರ್ಮ್ಗೆ ಕರೆದುಕೊಂಡು ಹೋಗಿ, ಅಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಆತನ ವಿರುದ್ಧ ಹುಡುಗಿಯ ಕುಟುಂಬದವರು ಸ್ಥಳೀಯ ಪಂಚಾಯಿತಿಗೆ ದೂರು ನೀಡಿದ್ದರು. ಅಲ್ಲಿನ ಪಂಚಾಯಿತಿ ಮುಖಂಡರೆಲ್ಲ ಸೇರಿ ಅವನಿಗೆ ಐದು ಬಸ್ಕಿ ಹೊಡೆಸಿ ಬಿಟ್ಟಿದ್ದಾರೆ. ಆ ಹುಡುಗ ಬಾಲಕಿ ಮೇಲೆ ಅತ್ಯಾಚಾರ ಮಾಡಿಲ್ಲ. ಆದರೆ ಅವಳನ್ನು ಹಾಗೇ ಪ್ರತ್ಯೇಕ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದು ತಪ್ಪು. ಅದಕ್ಕಾಗಿ ಐದು ಬಸ್ಕಿ ಹೊಡೆಸಲಾಗುವುದು’ ಎಂದು ಪಂಚಾಯಿತಿ ಮುಖಂಡರು ಹೇಳಿದ್ದಾಗಿ ವರದಿಯಾಗಿದೆ.
ಅಕ್ಬರ್ಪುರ ಏರಿಯಾದಲ್ಲಿ ಬುಧವಾರ ನಡೆದ ಘಟನೆ ಇದು. ಊರವರೆಲ್ಲರ ಎದುರು ಆ ವ್ಯಕ್ತಿ, ತನ್ನ ಎರಡೂ ಕಿವಿ ಹಿಡಿದುಕೊಂಡು ಐದು ಸಲ ಎದ್ದು-ಕುಳಿತು ಮಾಡಿದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಜತೆ, ಈ ವಿಚಾರವೂ ಬೆಳಕಿಗೆ ಬಂದಿದೆ. ಇನ್ನು ಬಸ್ಕಿ ಹೊಡೆಯುತ್ತಿದ್ದ ವ್ಯಕ್ತಿಗೆ ಅಲ್ಲಿದ್ದ ಮಹಿಳೆಯರೆಲ್ಲ ನಿಂದಿಸುತ್ತಿರುವುದು ವಿಡಿಯೊದಲ್ಲಿ ಕೇಳಿಸುತ್ತದೆ. ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
‘ಈ ವ್ಯಕ್ತಿ ಐದು ವರ್ಷದ ಬಾಲಕಿಯನ್ನು ಏಕಾಂತಕ್ಕೆ ಕರೆದುಕೊಂಡು ಹೋಗಿ, ತನ್ನ ತೊಡೆಯ ಮೇಲೆ ಕೂರಿಸಿಕೊಂಡು, ಅವಳನ್ನು ಅನುಚಿತವಾಗಿ ಸ್ಪರ್ಶಿಸಿದ್ದಾನೆ ಎಂದು ಆಕೆಯ ಪಾಲಕರು ಪಂಚಾಯಿತಿಗೆ ದೂರು ಕೊಟ್ಟಿದ್ದರು. ಪೊಲೀಸರಿಗೆ ದೂರು ಕೊಟ್ಟರೆ ಎಫ್ಐಆರ್ ದಾಖಲಾಗುತ್ತದೆ. ವಿಷಯ ದೊಡ್ಡದಾಗಿ ಮನೆ ಮರ್ಯಾದಿ ಹಾಳಾಗುತ್ತದೆ ಎಂಬ ಕಾರಣಕ್ಕೆ ಪಂಚಾಯಿತಿಗೆ ಹೋಗಿದ್ದಾರೆ. ಅಷ್ಟೇ ಅಲ್ಲ, ಆರೋಪಿಯ ಕುಟುಂಬದವರನ್ನು ಸಂಪರ್ಕಿಸಿ, ಅವರಿಗೂ ವಿಷಯ ತಿಳಿಸಿದ್ದಾರೆ. ಬಳಿಕ ಎರಡೂ ಕುಟುಂಬಗಳ ಸಮ್ಮುಖದಲ್ಲಿ ಪಂಚಾಯಿತಿ ಮುಖಂಡರು ವಿಚಾರಣೆ ನಡೆಸಿದ್ದಾರೆ. ಕೊನೆಯಲ್ಲಿ ಆರೋಪಿ ಹುಡುಗಿ ಮೇಲೆ ಅತ್ಯಾಚಾರ ಮಾಡಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ ಹಾಗೇ ಆಕೆಯನ್ನು ಪೌಲ್ಟ್ರಿ ಫಾರ್ಮ್ಗೆ ಕರೆದುಕೊಂಡು ಹೋಗಿದ್ದು ತಪ್ಪು ಎಂಬ ಕಾರಣಕ್ಕೆ ಬಸ್ಕಿ ಶಿಕ್ಷೆ ನೀಡಿದ್ದಾರೆ’ ಎಂದು ನಾವಡಾ ಎಸ್ಪಿ ಡಾ. ಗೌರವ್ ಮಂಗಲ್ ತಿಳಿಸಿದ್ದಾರೆ.
ಪಂಚಾಯಿತಿಯಲ್ಲಿದ್ದ ಸದಸ್ಯರೊಬ್ಬರೇ ಈ ವಿಷಯವನ್ನು ಪೊಲೀಸ್ ಗಮನಕ್ಕೆ ತಂದಿದ್ದಾರೆ. ಅದಾದ ಬಳಿಕ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಕೇಸ್ ದಾಖಲಿಸಿಕೊಂಡು ತನಿಖೆಯನ್ನೂ ಪ್ರಾರಂಭ ಮಾಡಿದ್ದಾರೆ. ಬಾಲಕಿಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸುವುದಾಗಿಯೂ ಪೊಲೀಸ್ ತಿಳಿಸಿದ್ದಾರೆ.
ಇದನ್ನೂ ಓದಿ: Danushka Gunathilaka | ಅತ್ಯಾಚಾರ ಆರೋಪಿ ದನುಷ್ಕ ಗುಣತಿಲಕಗೆ ಷರತ್ತುಬದ್ಧ ಜಾಮೀನು