ನವ ದೆಹಲಿ: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಆಪ್ತ ಸಹಾಯಕ ಪಿ.ಪಿ.ಮಾಧವನ್ ವಿರುದ್ಧ ದೆಹಲಿ ಪೋಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. 26 ವರ್ಷದ ದಲಿತ ಮಹಿಳೆಯೊಬ್ಬರು ದೂರು ನೀಡಿದ್ದು, ʼಮಾಧವನ್ ನನ್ನನ್ನು ಬೆದರಿಸಿ, ಅತ್ಯಾಚಾರ ಮಾಡಿದ್ದಾರೆʼ ಎಂದು ಉಲ್ಲೇಖಿಸಿದ್ದಾರೆ. ಈ ಮಾಧವನ್‌ಗೆ 71 ವರ್ಷವಾಗಿದ್ದು, ʼನನ್ನ ಮೇಲಿನ ಆರೋಪದಲ್ಲಿ ಹುರುಳಿಲ್ಲ. ರಾಜಕೀಯ ದ್ವೇಷಕ್ಕೆ ನಾನು ಬಲಿಪಶು ಆಗುತ್ತಿದ್ದೇನೆʼ ಎಂದು ಹೇಳಿಕೊಂಡಿದ್ದಾರೆ.
ಮಹಿಳೆಯ ಆರೋಪವೇನು?
ʼನನ್ನ ಪತಿ ಕಾಂಗ್ರೆಸ್ ಕಚೇರಿಯಲ್ಲೇ ಕೆಲಸ ಮಾಡುತ್ತಿದ್ದರು. 2020ರಲ್ಲಿ ತೀರಿಕೊಂಡಿದ್ದಾರೆ. ಅವರು ಮೃತಪಟ್ಟ ಬಳಿಕ ನಾನು ಕೆಲಸ ಹುಡುಕುತ್ತಿದ್ದೆ. ನನ್ನ ಪತಿ ಕಾಂಗ್ರೆಸ್ ಕಚೇರಿಯಲ್ಲಿ ಇದ್ದಿದ್ದರಿಂದ ನಾನೂ ಅಲ್ಲಿಯಾದರೂ ಕೆಲಸ ಸಿಗಬಹುದಾ ಎಂದು ಹೋಗಿದ್ದೆ. ಆಗ ಮಾಧವನ್ ಪರಿಚಯವಾಯಿತು. ನನಗೆ ಒಂದು ಉದ್ಯೋಗ ಬೇಕು ಎಂದು ಅವನಲ್ಲಿ ಹೇಳಿಕೊಂಡೆ. ಮೊದಲು ಸಂದರ್ಶನಕ್ಕಾಗಿ ಕರೆದು. ನನ್ನ ಫೋನ್ ನಂಬರ್ ಕೂಡ ತೆಗೆದುಕೊಂಡ. ಅದಾದ ಮೇಲೆ ವಾಟ್ಸ್‌ಆ್ಯಪ್‌ನಲ್ಲಿ ನನ್ನೊಂದಿಗೆ ಚಾಟ್-ವಿಡಿಯೋ ಕಾಲ್ ಮಾಡುತ್ತಿದ್ದ. ಸ್ವಲ್ಪ ದಿನ ಆದ ಮೇಲೆ ನನ್ನನ್ನು ಪ್ರೀತಿಸುವುದಾಗಿ, ಮದುವೆಯಾಗುವುದಾಗಿ ಹೇಳಿಕೊಂಡ. ಅಷ್ಟಕ್ಕೂ ಬಿಡದೆ, ಒಂದು ದಿನ ನನ್ನನ್ನು ಉತ್ತಮನಗರ ಮೆಟ್ರೋ ಸ್ಟೇಶನ್ ಬಳಿ ಅವನ ಕಾರಿನಲ್ಲಿ ರೇಪ್ ಮಾಡಿದ. ಮತ್ತೊಂದು ದಿನ ಸುಂದರ್‌ನಗರದ ಫ್ಲ್ಯಾಟ್‌ವೊಂದರಲ್ಲಿ ದೌರ್ಜನ್ಯ ಎಸಗಿದ. ನನಗೆ ಒಪ್ಪಿಗೆ ಇಲ್ಲವೆಂದು ಎಷ್ಟೇ ಹೇಳಿದರೂ ಆತ ಕೇಳಲೇ ಇಲ್ಲʼ ಎಂದು ಮಹಿಳೆ ಪೊಲೀಸರಿಗೆ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದನ್ನು ದೆಹಲಿ ಡೆಪ್ಯೂಟಿ ಕಮಿಷನರ್ ಎಂ.ಹರ್ಷವರ್ಧನ್ ದೃಢಪಡಿಸಿದ್ದಾರೆ.
ಮಾಧವನ್ ಹೇಳೋದೇನು?
ಸೋನಿಯಾ ಗಾಂಧಿ ಆಪ್ತ ಪಿ.ಪಿ.ಮಾಧವನ್, ತಮ್ಮ ಮೇಲಿನ ಆರೋಪವನ್ನು ತಳ್ಳಿ ಹಾಕಿದ್ದಾರೆ. ʼನನ್ನ ವಿರುದ್ಧ ಮಾಡಿರುವ ರೇಪ್ ಆಪಾದನೆ ಸುಳ್ಳು. ಅದರ ವಿರುದ್ಧ ನಾನು ಕಾನೂನು ಬದ್ಧವಾಗಿ ಹೋರಾಡುತ್ತೇನೆ. ಅದಕ್ಕೆ ಅಗತ್ಯವಿರುವ ಸಂಪೂರ್ಣ ದಾಖಲೆಗಳು ನನ್ನ ಬಳಿ ಇವೆ. ಯಾರದ್ದೋ ರಾಜಕೀಯ ದ್ವೇಷವನ್ನು ಹೀಗೆ ತೀರಿಸಿಕೊಳ್ಳುತ್ತಿದ್ದಾರೆ. ನನ್ನ 47ವರ್ಷದ ವೃತ್ತಿ ಜೀವನಕ್ಕೆ ಇದೊಂದು ಕಪ್ಪು ಚುಕ್ಕೆ ತರುವ ಪ್ರಯತ್ನ ನಡೆದಿದೆʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಮೋದಿ ಆಗಮನ ಬೆನ್ನಲೇ ಕಾಂಗ್ರೆಸ್ ಪ್ರತಿತಂತ್ರ, ದೆಹಲಿಗೆ ತೆರಳಲಿರುವ ಡಿಕೆಶಿ