ಲಖನೌ: 2 ವರ್ಷದ ಮಗುವಿನೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಮಧ್ಯವಯಸ್ಸಿನ ಮೇಲೆ ಟಿಕೆಟ್ ಪರಿವೀಕ್ಷಕ (TTE) ಮತ್ತು ಇನ್ನೊಬ್ಬಾತ ಸೇರಿಕೊಂಡು ಅತ್ಯಾಚಾರ ಮಾಡಿದ್ದಾರೆ. ಚಲಿಸುತ್ತಿರುವ ರೈಲಿನಲ್ಲಿಯೇ ಈ ಕೃತ್ಯವನ್ನು ಎಸಗಿದ್ದಾರೆ. ಉತ್ತರ ಪ್ರದೇಶದ ಸಂಭಾಲ್ನಲ್ಲಿ ಘಟನೆ ನಡೆದಿದ್ದು, ಅತ್ಯಾಚಾರ ಎಸಗಿರುವ ಟಿಕೆಟ್ ಪರಿವೀಕ್ಷಕನನ್ನು ಅಮಾನತು ಮಾಡಲಾಗಿದೆ. ಹಾಗೇ, ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ಆದರೆ ಇನ್ನೊಬ್ಬ ಆರೋಪಿ ನಾಪತ್ತೆಯಾಗಿದ್ದು, ಆತನ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ.
ಮಹಿಳೆ ರೈಲಿನ ಎಸಿ ಕೋಚ್ನಲ್ಲಿ ಚಂಡೌಸಿಯಿಂದ ಪ್ರಯಾಗ್ರಾಜ್ ಬಳಿಯ ಸುಬೇದರ್ಗಂಜ್ಗೆ ತನ್ನ 2 ವರ್ಷದ ಮಗುವಿನೊಟ್ಟಿಗೆ ಪ್ರಯಾಣ ಮಾಡುತ್ತಿದ್ದಳು. ಆ ರೈಲಿನ ಟಿಟಿಇ ಹೆಸರು ರಾಜು ಸಿಂಗ್. ಈತ ತನಗೆ 4 ವರ್ಷದಿಂದ ಪರಿಚಯ ಇರುವವನೇ ಆಗಿದ್ದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ ಎಂದು ಚಂಡೌಸಿ ಎಸ್ಎಚ್ಒ ಕೆ.ಬಿ.ಸಿಂಗ್ ತಿಳಿಸಿದ್ದಾರೆ.
ಜನವರಿ 16ರಂದು ರಾತ್ರಿ ನಾನು ನನ್ನ ಮಗುವಿನೊಂದಿಗೆ ರೈಲಿಗೆ ಕಾಯುತ್ತಿದ್ದೆ. ಸಾಮಾನ್ಯ ಬೋಗಿಯಲ್ಲೇ ಹೋಗುವುದೆಂದು ನಿರ್ಧರಿಸಿದ್ದೆ. ನಾನು ಕಾಯುತ್ತಿದ್ದ ಪ್ಲಾಟ್ಫಾರ್ಮ್ಗೆ ಬಂದ ರಾಜು ಸಿಂಗ್, ಈ ಬೋಗಿಯಲ್ಲಿ ಬೇಡ. ತುಂಬ ಜನ ಇರುತ್ತಾರೆ. ಮಗು ಬೇರೆ ಇದೆ, ಎಸಿ ಕಂಪಾರ್ಟ್ಮೆಂಟ್ಗೆ ಬನ್ನಿ ಎಂದು ಕರೆದುಕೊಂಡು ಹೋದರು. ಹೇಗೂ ಪರಿಚಯ ಇರುವವನೇ ಅಲ್ಲವಾ ಎಂದು ನಾನು ನಂಬಿ ಹೋದೆ. ರಾತ್ರಿ 9.30ರ ಹೊತ್ತಿಗೆ ರಾಜು ಸಿಂಗ್ ನಾನಿದ್ದಲ್ಲಿಗೆ ಬಂದು, ಸ್ವಲ್ಪ ತಿಂಡಿ ಕೊಟ್ಟ. ನನಗೆ ಬೇಡ ಅಂದೆ, ಆಗ ನೀರು ಕುಡಿಯಿರಿ ಎಂದು ಕೊಟ್ಟ. ಆತ ಕೊಟ್ಟ ನೀರನ್ನು ಕುಡಿದೆ. ಆದರೆ ಅದರಲ್ಲೇನೋ ಅಮಲು ಪದಾರ್ಥ ಇತ್ತು. ನನಗೆ ಎಚ್ಚರ ತಪ್ಪಿತು. ಅವರು ನನ್ನ ಮಗುವನ್ನು ಪಕ್ಕದ ಬರ್ತ್ಗೆ ಕರೆದುಕೊಂಡು ಹೋಗಿದ್ದರು, ಆತ ಗಟ್ಟಿ ನಿದ್ದೆಯಲ್ಲಿದ್ದ. ನನಗೆ ನನ್ನ ಮೇಲೆ ಅತ್ಯಾಚಾರ ಆಗುವಾಗ ಅದು ಗೊತ್ತಾಗುತ್ತಿತ್ತು. ಕೂಗಲು ಪ್ರಯತ್ನಿಸಿ, ಸೋತೆ’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಜನವರಿ 17ರಂದು ಮುಂಜಾನೆ ಆಕೆ ರೈಲು ಇಳಿದಾಗ ಯಾರೊಂದಿಗೂ ವಿಷಯ ತಿಳಿಸಲಿಲ್ಲ. ಜನವರಿ 20ರಂದು ವಾಪಸ್ ಮನೆಗೆ ಬಂದು, ತನ್ನ ಪತಿಯ ಬಳಿ ಹೇಳಿಕೊಂಡಳು. ಕೂಡಲೇ ಅವರಿಬ್ಬರೂ ಠಾಣೆಗೆ ಧಾವಿಸಿ, ಪೊಲೀಸರಿಗೆ ದೂರು ಕೊಟ್ಟಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: Sexual Assault | ಛತ್ತೀಸ್ಗಢ ಬಿಜೆಪಿ ಶಾಸಕನ ಪುತ್ರನ ಮೇಲೆ ಅತ್ಯಾಚಾರ ಕೇಸ್ ದಾಖಲು