ನವದೆಹಲಿ: ಜನಪ್ರಿಯ ಪಂಜಾಬಿ ಹಾಡುಗಾರ, ಸಂಗೀತ ನಿರ್ದೇಶಕ, ರಾಜಕಾರಣಿ ಸಿಧು ಮೂಸೆ ವಾಲಾ ಅವರನ್ನು ಹಾಡಹಗಲೇ ನಡುಬೀದಿಯಲ್ಲಿ ಯರ‍್ರಾಬಿರ‍್ರಿ ಗುಂಡು ಹಾರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗ್ಯಾಂಗ್‌ಸ್ಟರ್ ಸತೀಂದರ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಈತ ಕೆನಡಾದಲ್ಲಿ ನೆಲೆಸಿದ್ದು, ಸಿಧು ಮೂಸೆ ವಾಲಾ ಹತ್ಯೆಯ ಕೆಲ ಗಂಟೆಗಳಲ್ಲಿಯೇ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದ.
ಹತ್ಯೆಯ ತನಿಖೆ ನಡೆಸುತ್ತಿರುವ ಸಿಬಿಐಗೆ ಪಂಜಾಬ್ ಪೊಲೀಸರು ಮಾಡಿರುವ ಮನವಿ ಮೇರೆಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಗೋಲ್ಡಿ ಬ್ರಾರ್ ಮತ್ತು ಜೈಲಿನಲ್ಲಿರುವ ಮತ್ತೊಬ್ಬ ಗ್ಯಾಂಗ್‌ಸ್ಟರ್ ಲಾವ್ರೆನ್ಸ್ ಬಿಷ್ಣೋಯ್ ಈ ಕೊಲೆಯ ಪ್ರಮುಖ ಶಂಕಿತ ಆರೋಪಿಗಳಾಗಿದ್ದಾರೆ. ಇಬ್ಬರ ವಿರುದ್ಧ ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಕಳೆದ ಮೇ 29ರಂದು ಸಿಧು ಮೂಸೆವಾಲಾ ಹತ್ಯೆಗೀಡಾಗಿದ್ದರು. ಗೋಲ್ಡಿ ಬ್ರಾರ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹೊರಡಿಸುವ ಬಗ್ಗೆ ಪಂಜಾಬ್ ಪೊಲೀಸರು ಸಿಬಿಐ ಅನ್ನು ಸಂಪರ್ಕಿಸಿದ್ದರು.