Site icon Vistara News

Road Accident : ಲಾರಿ ಹರಿದು ಸವಾರ ಸಾವು; ಆಂಧ್ರಪ್ರದೇಶದ ಎಂಪಿ ಕಾರು ಅಪಘಾತ

lorry and bike accident

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ತಾಲೂಕಿನ ಯಣ್ಣಂಗೂರು ಗೇಟ್ ಬಳಿ ಲಾರಿ ಹರಿದು ಸವಾರನೊಬ್ಬ ದಾರುಣವಾಗಿ (Road Accident) ಮೃತಪಟ್ಟಿದ್ದಾರೆ. ಲಾರಿ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿದ್ದು, ಮೋಹನ್‌ (21) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಲಾರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮರಕ್ಕೆ ಡಿಕ್ಕಿ ಹೊಡೆದ ಸಂಸದರ ಹೊಸ ಕಾರು

ದೇವನಹಳ್ಳಿ ತಾಲ್ಲೂಕಿನ ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಫಿಶ್ ಲ್ಯಾಂಡ್ ಡಾಬಾ ಬಳಿ ಮರಕ್ಕೆ ಆಂಧ್ರಪ್ರದೇಶ ಸಂಸದರ ಕಾರು ಡಿಕ್ಕಿ ಹೊಡೆದಿದೆ.

ಡಾಬಾದಿಂದ ಏಕಾಏಕಿ ಕಾರು ರಸ್ತೆಗೆ ಬಂದಿರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆಂಧ್ರಪ್ರದೇಶದ ಗೋರಂಟ್ಲ ಲೋಕಸಭಾ ಕ್ಷೇತ್ರದ ಸಂಸದ ಮಹದೇವ್‌ರವರ ಫಾರ್ಚುನರ್‌ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಇನ್ನು ನೊಂದಾಣಿಯಾಗದ ಹೊಸ ಕಾರು ಪೂರ್ತಿ ನಜ್ಜುಗುಜ್ಜಾಗಿದೆ.

ಆಂಧ್ರಪ್ರದೇಶದಿಂದ ಕೆಂಪೇಗೌಡ ಏರ್‌ಪೋಟ್‌ನತ್ತ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕಾರಿನಲ್ಲಿ ಸಂಸದ ಮಹದೇವ್‌ ಇರಲಿಲ್ಲ. ಕಾರಿನ ಚಾಲಕ ಮತ್ತು ಗನ್ ಮ್ಯಾನ್ ಮಾತ್ರ ಇದ್ದರು. ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಇಬ್ಬರು ಪಾರಾಗಿದ್ದಾರೆ. ದೇವನಹಳ್ಳಿ ತಾಲೂಕಿನ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ

ಓಮಿನಿ ಕಾರಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ-ಹರೀಶಿ ರಸ್ತೆಯಲ್ಲಿ ಘಟನೆ ನಡೆದಿದೆ. ಚಿದಾನಂದ ಗಣಪತಿ ನಾಯ್ಕ ಎಂಬುವವರಿಗೆ ಸೇರಿದ ಓಮಿನಿ ಕಾರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹತ್ತಿದ ಕೂಡಲೇ ಓಮಿನಿ ಚಾಲಕ ಕಾರಿನಿಂದ ಕೆಳಗಿಳಿದಿದ್ದಾರೆ. ಅದೃಷ್ವವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಬೆಂಕಿಗೆ ಸಂಪೂರ್ಣ ಕಾರು ಭಸ್ಮವಾಗಿದೆ. ಬನವಾಸಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೈಕ್‌ನಿಂದ ಸ್ಕಿಡ್‌ ಆಗಿ ಬಿದ್ದ ಶಿಕ್ಷಕ; ಲಾರಿ ಹರಿದು ಸಾವು

ಕಾರವಾರ: ಬೈಕ್‌ನಿಂದ ಸ್ಕಿಡ್‌ ಆಗಿ ಕೆಳಗೆ ಬಿದ್ದ ಶಿಕ್ಷಕನ ಮೇಲೆ ಲಾರಿ ಹರಿದು (Road Accident) ಮೃತಪಟ್ಟಿರುವ ದಾರುಣ ಘಟನೆ ಉತ್ತರಕನ್ನಡದ ಕಾರವಾರದ ಹಬ್ಬುವಾಡದಲ್ಲಿ ನಡೆದಿದೆ. ಉಮೇಶ ಗುನಗಿ (50) ಮೃತ ದುರ್ದೈವಿ.

ಶಿಕ್ಷಕ ಉಮೇಶ ಕಾರವಾರದಿಂದ ದೇವಳಮಕ್ಕಿ ಶಾಲೆಗೆ ತೆರಳುತ್ತಿದ್ದರು. ಬೈಕ್‌ನಲ್ಲಿ ತೆರಳುತ್ತಿದ್ದಾಗ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಎದುರಿಗೆ ಬಂದ ಲಾರಿಯು ಶಿಕ್ಷಕ ಉಮೇಶ ಮೇಲೆ ಹರಿದಿದೆ. ಪರಿಣಾಮ ಗಂಭೀರ ಗಾಯಗೊಂಡ ಉಮೇಶ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

ಸ್ಥಳೀಯರಿಂದ ಪ್ರತಿಭಟನೆ

ರಸ್ತೆ ಅವ್ಯವಸ್ಥೆಯಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಅವೈಜ್ಞಾನಿಕ ರಸ್ತೆಯಿಂದ ಹಲವರ ಜೀವ ಕಸಿಯುತ್ತಿದೆ ಎಂದು ಪ್ರತಿಭಟನೆ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಇತ್ತ ಅಪಘಾತದಿಂದಾಗಿ ಕಿ.ಮೀ ಗಟ್ಟಲೇ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಇದನ್ನೂ ಓದಿ: Lokayukta Raid : ಹೆರಿಗೆ ಮಾಡಿಸಲು ಕೊಡಬೇಕು ಗರಿ ಗರಿ ನೋಟು; ಲೋಕಾಯುಕ್ತ ಬಲೆಗೆ ಬಿದ್ದ ಡಾಕ್ಟರ್‌

ಬೈಕ್‌ಗೆ ಬಸ್‌ ಡಿಕ್ಕಿ, ಸವಾರ ಗಂಭೀರ

ಮೈಸೂರು-ತಿ.ನರಸೀಪುರ ಮುಖ್ಯರಸ್ತೆಯ ಇಂಡವಾಳು ಗ್ರಾಮದದಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಟಿ ನರಸೀಪುರ ತಾಲ್ಲೂಕಿನ ರಾಯರಹುಂಡಿ ಗ್ರಾಮದ ನಿವಾಸಿ ಜಯಶಂಕರ್ ಎಂಬಾತ ಗಂಭೀರ ಗಾಯಗೊಂಡಿದ್ದಾರೆ.

ಅಪಘಾತದ ದೃಶ್ಯ ಬಸ್‌ನಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ರಸ್ತೆಯ ಎಡ ಬದಿಯಿಂದ ರಸ್ತೆಯ ಬಲ ಭಾಗಕ್ಕೆ ಬೈಕ್ ಸವಾರ ತಿರುವು ಪಡೆಯುವಾಗ, ಹಿಂದಿನಿಂದ ಬಂದ ಬಸ್‌ ಬೈಕ್‌ಗೆ ಗುದ್ದಿದೆ. ನರಸೀಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮುಳುಗಡೆಯಾಗುತ್ತಿರುವ ಬೋಟ್‌

ಬೋಟ್‌ ಮುಳುಗಡೆ, 8 ಮೀನುಗಾರರ ರಕ್ಷಣೆ

ಉಡುಪಿ: ಮಲ್ಪೆಯಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ 8 ಮೀನುಗಾರರ ರಕ್ಷಣೆ ಮಾಡಲಾಗಿದೆ. ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬೋಟ್ ಮುಳುಗಡೆಯಾಗಿದೆ. ಕಡೆಕಾರು ರಕ್ಷಾ ಅವರಿಗೆ ಸೇರಿದ ಮೀನುಗಾರಿಕಾ ಬೋಟ್ ಇದಾಗಿದ್ದು, ಬೋಟ್ ತಳ ಭಾಗಕ್ಕೆ ವಸ್ತುವೊಂದು ತಗುಲಿದೆ. ಪರಿಣಾಮ ಬೋಟ್‌ವೊಳಗೆ ನೀರು ನುಗ್ಗಿ ಮುಳುಗಡೆಯಾಗಿದೆ.

ವಯರ್ ಲೆಸ್ ಮೂಲಕ ರಕ್ಷಣೆ ಕರೆ ಬಂದ ಹಿನ್ನೆಲೆಯಲ್ಲಿ ಶ್ರೀ ಮೂಕಾಂಬಿಕಾ ಅನುಗ್ರಹ ಬೋಟ್‌ನವರಿಂದ ರಕ್ಷಣೆ ಮಾಡಲಾಗಿದೆ. ಬೋಟ್‌ನಲ್ಲಿದ್ದ 8 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಈ ದುರಂತದಲ್ಲಿ ಸುಮಾರು 18 ಲಕ್ಷ ರೂಪಾಯಿ ನಷ್ಟವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version