Site icon Vistara News

Road Accident : ಸ್ಕೂಟರ್‌ಗೆ ಬಸ್‌ ಡಿಕ್ಕಿ; ಪತ್ನಿ-ಮಗುವಿನ ಕಣ್ಣೇದುರಿಗೆ ನರಳಾಡಿ ಪ್ರಾಣಬಿಟ್ಟ ಪತಿ

road Accident in dodbalapura

ದೊಡ್ಡಬಳ್ಳಾಪುರ: ಸ್ಕೂಟರ್‌ನಲ್ಲಿ ಪತ್ನಿ- ಮಗುವನ್ನು ಕೂರಿಸಿಕೊಂಡು ಬರುವಾಗ ಹಿಂದಿನಿಂದ ಬಂದ ಖಾಸಗಿ ಬಸ್‌ವೊಂದು ಡಿಕ್ಕಿ (Road Accident) ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಮೂವರಲ್ಲಿ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಾರನ ಪತ್ನಿ-ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.

ಮೇಲಿನನಾಯಕರಂಡಹಳ್ಳಿ ನಿವಾಸಿ ಪ್ರಕಾಶ್ ನಾಯಕ (38) ಮೃತ ದುರ್ದೈವಿ. ಪ್ರಕಾಶ್‌ ತಮ್ಮ ಪತ್ನಿ ಹಾಗೂ ಮಗು ಜತೆಗೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬಸ್‌ ಹಿಂದಿನಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಪ್ರಕಾಶ್‌ ನಿಯಂತ್ರಣ ತಪ್ಪಿ ಸ್ಕೂಟರ್‌ ಸಮೇತ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡ ಪ್ರಕಾಶ್‌ ನರಳಾಡಿ ಪತ್ನಿ, ಮಗುವಿನ ಎದುರೇ ಜೀವ ಬಿಟ್ಟಿದ್ದಾರೆ.

ಪ್ರಕಾಶ್‌ ಅವರ ಪತ್ನಿ-ಮಗು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮನೆಯ ಆಧಾರ ಸ್ತಂಭವನ್ನೇ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಅಪಘಾತದ ನಂತರ ಬಸ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಪಘಾತದಲ್ಲಿ ಪೀಸ್‌ ಪೀಸ್‌ ಆಗಿದ್ದ ಸ್ಕೂಟರ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:Elephant Attack : ಬೈಕ್‌ನಲ್ಲಿ ಹೋಗುತ್ತಿದ್ದ ಮಹಿಳೆಯನ್ನು ಅಟ್ಟಾಡಿಸಿ ಕೊಂದ ಆನೆ

ಹಾಸನದಲ್ಲಿ ಕಾರು-ಬೈಕ್‌ ಮುಖಾಮುಖಿ ಡಿಕ್ಕಿ; ಸವಾರ ಗಂಭೀರ

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗುಳಗಳಲೆ ಸಮೀಪ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುವಿಗೆ ಸಕಲೇಶಪುರ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

Road Accident in hasana

ಸಕಲೇಶಪುದಿಂದ ಬಾಳ್ಳುಪೇಟೆ ಕಡೆಗೆ ಬರುತ್ತಿದ್ದ ಬೈಕ್ ಸವಾರ ಬರುತ್ತಿದ್ದ, ಬೆಂಗಳೂರಿನಿಂದ ಮಂಗಳೂರು ಕಡೆಗೆ ಕಾರು ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಇದೇ ಜಾಗದಲ್ಲಿ ಒಂದು ತಿಂಗಳಲ್ಲಿ ಒಂಭತ್ತು ಅಪಘಾತ ನಡೆದಿದೆ. ಕಳೆದ ಮೂರು ದಿನದಲ್ಲಿ ಮೂರು ಸರಣಿ ಅಪಘಾತ ನಡೆದಿದ್ದು, ಮೂವರು ಸಾವನ್ನಪ್ಪಿ, ಆರು ಮಂದಿ ಗಾಯಗೊಂಡಿದ್ದಾರೆ.

ರಸ್ತೆ ಕಾಮಗಾರಿ ವಿಳಂಬದಿಂದ ಈ ಅಪಘಾತ ಸಂಭವಿಸುತ್ತಿದೆ ಎಂದು ಸವಾರರು ಆಕ್ರೋಶ ಹೊರಹಾಕಿದ್ದಾರೆ. ಏಕಮುಖದಿಂದ ಸಂಚಾರದಿಂದ ಅಪಘಾತ ಸಂಭವಿಸುತ್ತಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version