ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬಿದರಗುಪ್ಪೆ ಕೆರೆ ಕಟ್ಟೆ ಸಮೀಪ ಓಂಶಕ್ತಿಗೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿದೆ. ಓಂಶಕ್ತಿ ಮಾಲಾಧಾರಿಗಳಿಗೆ (Road Accident) ಗಂಭೀರ ಗಾಯವಾಗಿದೆ. ಬೆಳಗ್ಗೆ 5:30ರ ಸುಮಾರಿಗೆ ಈ ಘಟನೆ ನಡೆದಿದೆ.
ಐವತ್ತಕ್ಕೂ ಅಧಿಕ ಮಂದಿ ಓಂಶಕ್ತಿ ಮಾಲಾಧಾರಿಗಳು ಬಸ್‌ವೊಂದರಲ್ಲಿ ಬೆಳ್ಳಂದೂರಿನಿಂದ ಓಂಶಕ್ತಿ ದೇವಾಲಯಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕೆರೆಯ ತಡೆಗೋಡೆಗೆ ಮೊದಲು ಡಿಕ್ಕಿ ಹೊಡೆದಿದೆ. ಬಳಿಕ ಕೆರೆಯ ಹಳ್ಳಕ್ಕೆ ಉರುಳಿ ಬಿದ್ದಿದೆ.
ಸ್ಥಳದಲ್ಲಿದ್ದವರು ಕೂಡಲೇ ಬಸ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದವರನ್ನು ರಕ್ಷಿಸಿದ್ದಾರೆ. ಬಸ್‌ನಲ್ಲಿದ್ದ ಓಂ ಶಕ್ತಿ ಮಾಲಾಧಾರಿಗಳಿಗೆ ಗಂಭೀರ ಗಾಯಗಳಾಗಿದ್ದು, ಎಲ್ಲರನ್ನೂ ಹತ್ತಿರದ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಓಂಶಕ್ತಿ ಮಾಲಾಧಾರಿಗಳ ಬಟ್ಟೆಗಳು ಹಾಗೂ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿದೆ. ಹಳ್ಳಕ್ಕೆ ಬಿದ್ದಿದ್ದ ಬಸ್‌ಅನ್ನು ಮೇಲಕ್ಕೆತ್ತುವ ಕೆಲಸ ಮುಂದುವರಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಇದನ್ನೂ ಓದಿ:Lalbagh Flower Show : ಜ.18 ರಿಂದ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ; ವಿಶ್ವ ಗುರು ಬಸವಣ್ಣ ಅನಾವರಣ
ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ; ಗ್ರಾಂ.ಪ ಅಧ್ಯಕ್ಷ ಗಂಭೀರ
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ, ದಂಡಿಗನಹಳ್ಳಿ ಬಳಿ ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಲ್ಲಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಸ್ಥಿತಿ ಗಂಭೀರವಾಗಿದೆ. ಕುಮಾರ್ (48) ತೀವ್ರ ಗಾಯಗೊಂಡವರು.
ಗಾಯಾಳುವಿಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳು ಕುಮಾರ್ ಇತ್ತೀಚೆಗಷ್ಟೇ ಹೆರಗು ಗ್ರಾಮದ ಪಂಚಾಯತಿ ಅಧ್ಯಕ್ಷರಾಗಿದ್ದರು. ಅಪಘಾತದಲ್ಲಿ ಗಾಯಗೊಂಡಿರುವ ಕುಮಾರ್ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದು, ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.
ಸುಟ್ಟು ಕರಕಲಾಯಿತು ಗ್ಯಾರೇಜ್
ಬೆಂಗಳೂರಲ್ಲಿ ಅಗ್ನಿ ಅವಘಡಗಳು ಮುಂದುವರಿದಿದೆ. ಕೆ.ಜಿ ಹಳ್ಳಿಯ ಪಾನಿ ಕಂ ಚಾಯ್ ಸರ್ಕಲ್‌ನಲ್ಲಿರುವ ಗ್ಯಾರೇಜ್‌ವೊಂದು ಸುಟ್ಟು ಕರಕಲಾಗಿದೆ. ಬೆಳಗಿನ ಜಾವ ಗ್ಯಾರೇಜ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆ ಗ್ಯಾರೇಜ್‌ನಲ್ಲಿದ್ದ 5 ಮಿನಿ ಟೆಂಪೋ ವಾಹನಗಳು ಭಸ್ಮವಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಕೆ.ಜಿ ಹಳ್ಳಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗ್ನಿ ಅವಘಡ
ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಐಸಿಯುನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ನಿನ್ನೆ ಶುಕ್ರವಾರ ತಡರಾತ್ರಿ ಐಸಿಯುವಿನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದೆ.
ಹೊಗೆ ಕಾಣಿಸಿದ ತಕ್ಷಣ ರೋಗಿಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಬಳಿಕ ಸ್ಥಳಕ್ಕಾಗಮಿಸಿದ ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿ, ಬೆಂಕಿ ಆರಿಸಿದ್ದಾರೆ. ವಿಷಯ ತಿಳಿದು ರಾತೋರಾತ್ರಿ ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ