ಬೆಂಗಳೂರು: ನಿಂತಿದ್ದ ಗಾಡಿಗೆ ಕ್ಯಾಂಟರ್ ಡಿಕ್ಕಿಯಾಗಿ ಚಾಲಕನೊಬ್ಬ ದಾರುಣವಾಗಿ ಮೃತಪಟ್ಟಿರುವ ಘಟನೆ ನೈಸ್ ರೋಡ್‌ನ ನಾಗೇಗೌಡ ಪಾಳ್ಯ ಬ್ರಿಡ್ಜ್ ಬಳಿ (Road Accident) ನಡೆದಿದೆ. ಕ್ಯಾಂಟರ್ ಚಾಲಕ ಸಂತೋಷ್ ನಾಯಕ್ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಂಗಳವಾರ ರಾತ್ರಿ ಈ ಅಪಘಾತ ನಡೆದಿದೆ. ಅತೀ ವೇಗವಾಗಿ ಕ್ಯಾಂಟರ್ ಚಲಾಯಿಸಿ ಬಂದ ಸಂತೋಷ್ ನಿಯಂತ್ರಣ ತಪ್ಪಿ, ನಿಂತಿದ್ದ ಟ್ರಕ್ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಕ್ಯಾಂಟರ್ ಚಾಲಕ ಸಂತೋಷ್ ಎರಡು ವಾಹನಗಳ ಮಧ್ಯೆ ಸಿಲುಕಿದ್ದಾನೆ. ಹೊರಬರಲು ಆಗದೆ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ.
ಅಪಘಾತ ನಡೆಯುತ್ತಿದ್ದಂತೆ ಆತನನ್ನು ಹೊರತೆಗೆಯಲು ಸ್ಥಳೀಯರು ಹಾಗೂ ತಲ್ಲಘಟ್ಟಪುರ ಸಂಚಾರಿ ಪೊಲೀಸರು ಹರಸಾಹಸ ಪಟ್ಟರು. ಡಿಕ್ಕಿ ರಭಸಕ್ಕೆ ಎರಡು ವಾಹನಗಳ ಮಧ್ಯೆ ಸಿಲುಕಿ ಚಾಲಕ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಸ್ಥಳಕ್ಕೆ ತಲ್ಲಘಟ್ಟಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ASI Death : ನೈಟ್ ಡ್ಯೂಟಿ ಮುಗಿಸಿ ವಿಷ ಸೇವಿಸಿದ ಎಎಸ್‌ಐ!
ಹೆದ್ದಾರಿಯಲ್ಲಿ ಲಾರಿ ಪಲ್ಟಿ; ಚೆಲ್ಲಾಪಿಲ್ಲಿಯಾದ ಗ್ಲಾಸ್
ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯ ಕೃಷ್ಣಗಿರಿಯ ಸೂಳಗಿರಿ ಸಮೀಪದ ಹೆದ್ದಾರಿಯಲ್ಲಿ ಗ್ಲಾಸ್ ತುಂಬಿದ್ದ ಲಾರಿ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ ಹೊಡೆದಿದೆ. ಲಾರಿ ಚಾಲಕ ಹಾಗೂ ಕ್ಲೀನರ್‌ಗೆ ಸಣ್ಣಪುಟ್ಟ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೆದ್ದಾರಿಯಲ್ಲಿ ಗ್ಲಾಸ್ ಪೀಸ್‌ಗಳ ರಾಶಿಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಗ್ಲಾಸ್‌ಗಳು ಪೀಸ್ ಆಗಿದ್ದವು. ರಸ್ತೆ ಮೇಲೆ ಬಿದ್ದಿದ್ದ ಗ್ಲಾಸ್ ಪೀಸ್‌ಗಳನ್ನು ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆ.
ಕೇರಳದಿಂದ ಪ್ರವಾಸ ಬಂದಿದ್ದ ವಿದ್ಯಾರ್ಥಿನಿ ಕೆಆರ್‌ಎಸ್‌ನಲ್ಲಿ ಮೃತ್ಯು
ಮೈಸೂರು: ಕೆಆರ್‌ಎಸ್ ಉದ್ಯಾನಕ್ಕೆ (KRS dam) ಪ್ರವಾಸ ಬಂದಿದ್ದ ಕೇರಳದ ವಿದ್ಯಾರ್ಥಿನಿಯೊಬ್ಬಳು (Student from Kerala) ಫಿಟ್ಸ್ ಕಾಯಿಲೆಯಿಂದ ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾಳೆ (Student Death). ಕೇರಳದ ಪಾಲಕ್ಕಾಡ್ ಜಿಲ್ಲೆಯ ಸರ್ಕಾರಿ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಶ್ರೀಸಯನಾ(15) ಮೃತಪಟ್ಟ ದುರ್ದೈವಿ.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಟೀಮ್ ಶಾಲಾ ಪ್ರವಾಸದಲ್ಲಿ ಮೈಸೂರಿಗೆ ಬಂದಿತ್ತು. ನವೆಂಬರ್ ಐದರಂದು ಕೇರಳದಿಂದ ಮೈಸೂರಿಗೆ ಆಗಮಿಸಿದ ಸ್ಕೂಲ್ ಟೀಮ್ ಸೋಮವಾರ ಮೈಸೂರಿನ ಎಲ್ಲ ಸ್ಥಳಗಳನ್ನು ವೀಕ್ಷಿಸಿದ ಬಳಿಕ ಕೆ.ಆರ್.ಎಸ್‌ಗೆ ತೆರಳಿತ್ತು. ಅಲ್ಲಿ ಬೃಂದಾವನ ಗಾರ್ಡನ್ಸ್ ವೀಕ್ಷಿಸಿ ಮರಳುವಾಗ ಸಯನಾ ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ಈ ಸಾವಿನ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ವಿದ್ಯಾರ್ಥಿನಿ ನೀರಿಗೆ ಬಿದ್ದು ಸಾವು, ಹೃದಯಾಘಾತದಿಂದ ಸಾವು ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡಿತ್ತು. ಆದರೆ, ಆಕೆಯ ತಂದೆ ಶಶಿಕುಮಾರ್ ಅವರು ಮಗಳಿಗೆ ಫಿಟ್ಸ್ ಕಾಯಿಲೆ ಇತ್ತು. ಅದರಿಂದಾಗಿಯೇ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಅದರಲ್ಲಿ ಕೂಡಾ ಅಪಸ್ಮಾರ ಸಮಸ್ಯೆಯಿಂದ ಮೃತಪಟ್ಟ ಮಾಹಿತಿ ಹೊರಬಿದ್ದಿದೆ. ಇದೀಗ ಕುಟುಂಬ ಆಕೆಯ ಮೃತದೇಹವನ್ನು ಕೇರಳಕ್ಕೆ ತೆಗೆದುಕೊಂಡು ಹೋಗಿದೆ.
ಕೇರಳದಿಂದ ಬಂದಿದ್ದ ಸ್ಕೂಲ್ ಟೀಮ್ ಈ ರೀತಿ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಾಗ, ಒಬ್ಬ ಬಾಲಕಿ ಮೃತಪಟ್ಟ ಹೊತ್ತಿನಲ್ಲಿ ತಂಡಕ್ಕೆ ಮತ್ತು ಕುಟುಂಬಕ್ಕೆ ನೆರವಾಗಿದ್ದು ಸುವರ್ಣ ಕರ್ನಾಟಕ ಕೇರಳ ಸಮಾಜದ ಅಧ್ಯಕ್ಷ ಡಾ.ಮನು ಮೆನನ್ ಎಂದು ತಂಡ ನೆನಪು ಮಾಡಿಕೊಂಡಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ