ಶಿವಮೊಗ್ಗ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಭೀಕರ ಅಪಘಾತ (Road Accident ) ಸಂಭವಿಸಿದೆ. ಮಾರುತಿ ಓಮ್ನಿ ಹಾಗೂ ಇಂಡಿಕಾ ಕಾರು ನಡುವೆ ಡಿಕ್ಕಿಯ ರಭಸಕ್ಕೆ ಓಮ್ನಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಜೇಯ (21) ಮೃತ ದುರ್ದೈವಿ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಂಚಾಲೆ ಗ್ರಾಮದ ಬಳಿ ಅಪಘಾತ ನಡೆದಿದೆ. ಓಮ್ನಿ ಕಾರು ಜೋಗದಿಂದ ಶಿವಮೊಗ್ಗ ಕಡೆ ಹೊರಟಿತ್ತು. ಇಂಡಿಕಾ ಕಾರು ಆನಂದಪುರದಿಂದ ಸಾಗರ ಕಡೆಗೆ ತೆರಳುತ್ತಿದ್ದ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಂಡಿಕಾ ಕಾರು ಚಾಲಕ ಹಾಗೂ ಮಾರುತಿ ಓಮ್ನಿಯಲ್ಲಿದ್ದ ಯುವಕನಿಗೆ ಗಾಯವಾಗಿದೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಆನಂದಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೆಲ್ಲಾಪಿಲ್ಲಿಯಾಗಿದ್ದ ಬಿದ್ದಿದ್ದ ಕಾರುಗಳನ್ನು ತೆರವು ಮಾಡಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಗೂಡ್ಸ್ ಲಾರಿ ಡಿಕ್ಕಿ
ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಬಂದ ಗೂಡ್ಸ್ ಲಾರಿಯೊಂದು ಡಿಕ್ಕಿ ಹೊಡೆದಿದೆ. ಉಡುಪಿಯ ರಾಷ್ಟ್ರೀಯ ಹೆದ್ದಾರಿ 66 ಉದ್ಯಾವನದಲ್ಲಿ ಘಟನೆ ನಡೆದಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದೆ.
ಲಾರಿಯು ತಾಂತ್ರಿಕ ಸಮಸ್ಯೆಯಿಂದ ರಾಷ್ಟ್ರೀಯ ಹೆದ್ದಾರಿ ನಡುವೆಯೇ ಕೆಟ್ಟು ನಿಂತಿತ್ತು. ಇದನ್ನೂ ಗಮನಿಸಿದ ಗೂಡ್ಸ್ ಚಾಲಕ ವೇಗವಾಗಿ ಬಂದಿದ್ದಾನೆ. ಈ ವೇಳೆ ಅಪಘಾತ ಸಂಭವಿಸಿದೆ. ಉಡುಪಿಯ ಕಾಪು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Fire Accident: ಹಾವೇರಿಯಲ್ಲಿ ಧಗಧಗಿಸಿದ ಬೆಂಕಿ; ಸುಟ್ಟು ಭಸ್ಮವಾಯ್ತು 5 ಅಂಗಡಿ
ಉಡುಪಿಯಲ್ಲಿ ಆಯಿಲ್ ಟ್ಯಾಂಕರ್ ಪಲ್ಟಿ
ಉಡುಪಿಯ ಸಂತೆಕಟ್ಟೆ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಖಾದ್ಯ ತೈಲ ಸಾಗಣೆ ಮಾಡುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ. ಉಡುಪಿಯಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಆಯಿಲ್ ಟ್ಯಾಂಕರ್ ಕೆಸರು ರಸ್ತೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕನಿಗೆ ತರಚಿದ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಹೈವೇ ಕಾಮಗಾರಿ ಸೂಚನಾ ಫಲಕ ನೋಡದೆ ಮುಚ್ಚಿದ್ದ ಸರ್ವಿಸ್ ರಸ್ತೆಯಲ್ಲಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ.
ಶಾರ್ಟ್ ಸರ್ಕ್ಯೂಟ್‌ಗೆ ಹೊತ್ತಿ ಉರಿದ ಕಾರು
ಚಿಕ್ಕಮಗಳೂರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಕಾರೊಂದು ಹೊತ್ತಿ ಉರಿದಿದೆ. ಚಿಕ್ಕಮಗಳೂರಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಸ್ಟಿಫ್ಟ್ ಕಾರೊಂದು ಕಡೂರು ತಾಲೂಕಿನ ಸರಸ್ವತಿಪುರ ಗೇಟ್ ಬಳಿ ಬಂದಾಗ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಕಾರಿನಲ್ಲಿದ್ದ ನಾಲ್ವರು ಕೆಳಗಿಳಿದು ಜೀವ ಉಳಿಸಿಕೊಂಡಿದ್ದಾರೆ. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಸ್ವಿಫ್ಟ್ ಕಾರು ಸುಟ್ಟು ಹೋಗಿದೆ. ಕಡೂರು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ