Site icon Vistara News

Road Accident : ಟಂಟಂ ಪಲ್ಟಿಯಾಗಿ ವೃದ್ಧೆ ಸಾವು; ಐವರು ಗಂಭೀರ ಗಾಯ

Elderly woman dies after road Accident Five seriously injured

ಕಲಬುರಗಿ: ಟಂಟಂ ವಾಹನವು ಪಲ್ಟಿಯಾಗಿ ಸ್ಥಳದಲ್ಲೆ (Road Accident) ವೃದ್ಧೆ ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸೊನ್ನ ಕ್ರಾಸ್ ಬಳಿ ಘಟನೆ ನಡೆದಿದೆ. ಕಲ್ಲವ್ವ ಪಾಣೆಗಾರ್ (60) ಮೃತ ದುದೈವಿ.

ಗಂಭೀರವಾಗಿ ಗಾಯಗೊಂಡವರನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಕೂಲಿ ಕೆಲಸಕ್ಕೆಂದು ಟಂಟಂವೊಂದರಲ್ಲಿ 15 ಮಂದಿ ಅಫಜಲಪುರ ಪಟ್ಟಣದಿಂದ ಸಿಂದಗಿ ತಾಲೂಕಿನ ಕುಮಸಿ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟಂಟಂ ವಾಹನವು ಪಲ್ಟಿಯಾಗಿದೆ.

ವಾಹನದಡಿ ಸಿಲುಕಿದ ವೃದ್ಧೆ ಮೃತಪಟ್ಟರೆ, ಐವರು ಗಂಭೀರ ಗಾಯಗೊಂಡಿದ್ದರು. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದರು. ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸರಣಿ ಅಪಘಾತದಲ್ಲಿ ತುಂಡಾದ ಚಾಲಕನ ಪಾದ

ನೈಸ್‌ ರೋಡ್‌ನಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಲಾರಿ ಚಾಲಕನ ಪಾದವೇ ತುಂಡಾಗಿದೆ. ಮಾಗಡಿ- ಮೈಸೂರು ರಸ್ತೆ ಟೋಲ್ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಲಾರಿ- ಕಾರು ಸೇರಿ ಹಲವು ವಾಹನಗಳು ಜಖಂಗೊಂಡಿವೆ.

ಲಾರಿ ಚಾಲಕನ ಪಾದವೇ ಕಟ್ ಆಗಿದ್ದು, ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರು ಚಾಲಕರಿಗೆ ಸಣ್ಣ- ಪುಟ್ಟ ಗಾಯವಾಗಿದೆ. ಸರಣಿ ಅಪಘಾತದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ಆಗಮಿಸಿದ ಟ್ರಾಫಿಕ್ ಪೊಲೀಸರು ಚೆಲ್ಲಾಪಿಲ್ಲಿಯಾಗಿದ್ದ ವಾಹನಗಳನ್ನು ತೆರವು ಮಾಡಿದರು. ಕೆಂಗೇರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Namma Metro : ಗುಡ್‌ ನ್ಯೂಸ್‌- ಫೆ.26 ರಿಂದ ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಓಡಾಟ

ಅಕ್ರಮ ಮರಳು ಸಾಗಾಟದ ಟಿಪ್ಪರ್‌ಗೆ ಬೈಕ್‌ ಡಿಕ್ಕಿ, ಸವಾರ ಸಾವು

ಯಾದಗಿರಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹೊರವಲಯದಲ್ಲಿ ಘಟನೆ ನಡೆದಿದೆ. ಆಲ್ದಾಳ ಗ್ರಾಮದ ಶ್ರೀಶೈಲ (40) ಮೃತ ದುರ್ದೈವಿ.

ಕೆಂಭಾವಿಯಿಂದ ಸ್ವಗ್ರಾಮ ಆಲ್ದಾಳಕ್ಕೆ ಬರುವಾಗ ಈ ಅಪಘಾತ ನಡೆದಿದೆ. ಅಕ್ರಮ ಮರಳು ಸಾಗಾಟದ ಟಿಪ್ಪರ್ ಲಾರಿಯನ್ನು ಚಾಲಕ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ. ಇಂಡಿಕೇಟರ್ ಹಾಕದೇ ರಸ್ತೆ ಬದಿ ನಿಂತಿದ್ದ ಟಿಪ್ಪರ್‌ಗೆ ಬೈಕ್‌ ಡಿಕ್ಕಿಯಾಗಿದೆ. ಈ ವೇಳೆ ಡಿಕ್ಕಿಯ ರಭಸಕ್ಕೆ ಶ್ರೀಶೈಲ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬಸ್‌ ಇಳಿಯುವಾಗ ಆಯತಪ್ಪಿ ಬಿದ್ದ ಬಾಲಕಿ

ಬಸ್ ಇಳಿಯುವಾಗ ವಿದ್ಯಾರ್ಥಿನಿ ಆಯತಪ್ಪಿ‌ ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಬಸ್‌ ಸ್ಟ್ಯಾಂಡ್ ಬಳಿ ಘಟನೆ ನಡೆದಿದೆ. ಬಾಚಣಕಿ ಗ್ರಾಮದ ಆಶಾ ಹೊತಗಣ್ಣನವರ ಎಂಬಾಕೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ ಓದುತ್ತಿದ್ದಳು. ಕಾಲೇಜಿಗೆ ಬಸ್‌ನಲ್ಲಿ ಹೋಗುವಾಗ ಈ ಅಪಘಾತ ನಡೆದಿದೆ. ಗಾಯಾಳು ಬಾಲಕಿಯನ್ನು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version