ಹಾಸನ/ಯಾದಗಿರಿ: ಪ್ರತ್ಯೇಕ ಕಡೆಗಳಲ್ಲಿ ಸಂಭವಿಸಿದ ಅಪಘಾತದಲ್ಲಿ (Road Accident) ತಾಯಿ-ಮಗ ಸೇರಿ ಬೈಕ್ ಸವಾರರಿಬ್ಬರು, ಆಟೋ ಪ್ರಯಾಣಿಕ ದಾರುಣವಾಗಿ ಮೃತಪಟ್ಟಿದ್ದಾರೆ. ಐವರಿಗೆ ಗಂಭೀರ ಗಾಯಗೊಂಡಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಕೆಂಪುಹೊಳೆ ಸಮೀಪ ಇನೋವಾ ಕಾರು ಹಾಗೂ ಕಂಟೇನರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟರೆ, ಉಳಿದ ನಾಲ್ವರಿಗೆ ಗಂಭೀರ ಗಾಯವಾಗಿದೆ. ಶಫೀಕ್ (20), ಸಫಿಯಾ (50) ಮೃತ ದುರ್ದೈವಿಗಳು.
ಕಂಟೇನರ್ ಲಾರಿ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ಇನೋವಾ ಕಾರು ಬೆಂಗಳೂರಿನಿಂದ ಮಂಗಳೂರು ಕಡೆಗೆ ಹೋಗುತ್ತಿದ್ದಾಗ ಕೆಂಪುಹೊಳೆ ಸಮೀಪ ಮುಖಾಮುಖಿ ಡಿಕ್ಕಿಯಾಗಿದೆ. ಗಾಯಾಳುಗಳನ್ನು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತರು ಹಾಗೂ ಗಾಯಾಳುಗಳು ದಕ್ಷಿಣ ಕನ್ನಡದ ಬಂಟ್ವಾಳ ಮೂಲದವರು ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಛಿದ್ರವಾಗಿ ಬಿದ್ದಿದ್ದ ಕಾರನ್ನು ತೆರವುಗೊಳಿಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!
ಯಾದಗಿರಿಯಲ್ಲಿ ಬೈಕ್‌ಗಳ ಡಿಕ್ಕಿ, ಇಬ್ಬರು ಸವಾರರು ಸಾವು
ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ನಿನ್ನೆ ಸೋಮವಾರ ಸಂಜೆ ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಸವಾರನಿಗೆ ಗಂಭೀಯ ಗಾಯವಾಗಿದೆ. ಗಾಯಾಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೈದಾಪುರದ ಸ್ವಾಮಿ ವಿವೇಕಾನಂದ ಶಾಲೆಯ ಮುಂಭಾಗ ಅಪಘಾತ ಸಂಭವಿಸಿದೆ. ಸೈದಾಪುರ ನಿವಾಸಿ ಮೌನೇಶ್ (24) ಹಾಗೂ ಕೊಂಡಾಪುರ ನಿವಾಸಿ ಅಶೋಕ್ (21) ಮೃತ ಬೈಕ್ ಸವಾರರು. ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆಟೋ-ಬೈಕ್ ಡಿಕ್ಕಿ, ಹಾರಿ ಬಿದ್ದ ಪ್ರಯಾಣಿಕ ಸಾವು
ಆಟೋ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಆಟೋದಲ್ಲಿದ್ದ ಪ್ರಯಾಣಿಕ ರಸ್ತೆಗೆ ಹಾರಿ ಬಿದ್ದಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಎಂಬಲ್ಲಿ ಘಟನೆ ನಡೆದಿದೆ. ಮಹಮ್ಮದ್ ಅಲ್ತಾಫ್ (19) ಮೃತ ದುರ್ದೈವಿ.
ಮಹಮ್ಮದ್ ಆಟೋದಲ್ಲಿ ಸಜಿಪ ಕಡೆಯಿಂದ ಬಿಸಿರೋಡ್ ಕಡೆ ತೆರಳುತ್ತಿದ್ದರು. ಬಿಸಿರೋಡ್ ನಿಂದ ಪಾಣೆಮಂಗಳೂರು ಕಡೆಯಿಂದ ಬೈಕ್ ಬರುವಾಗ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತ ಸಂದರ್ಭದಲ್ಲಿ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ದೃಶ್ಯ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಬೈಕ್ ಸವಾರರಿಗೂ ಸಣ್ಣಪುಟ್ಟ ಗಾಯವಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ