ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರ ಹಟ್ಟಿಕೇರಿ ಗ್ರಾಮದ ಬಳಿ ತಡರಾತ್ರಿ ಬೈಕ್ ಹಾಗೂ ಟ್ರ್ಯಾಕ್ಸ್ ನಡುವೆ ಮುಖಾಮುಖಿ ಡಿಕ್ಕಿ (Road Accident) ಸಂಭವಿಸಿದ್ದು, ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ತಗುಲಿ ಬೈಕ್ ಸವಾರ ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ. ಬೈಕ್‌ನಲ್ಲಿದ್ದ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿವೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಮಂತ ಹರಿಕಂತ್ರ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿದ್ದ ಸುಮಿತ್ ಹರಿಕಂತ್ರ, ಚಾಣಕ್ಯ ಹರಿಕಂತ್ರ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.
ಬೈಕ್ ಸವಾರರು ಮಂಗಳವಾರ (ಏಪ್ರಿಲ್ 24) ತಡರಾತ್ರಿ ಅಂಕೋಲಾದಿಂದ ಕಾರವಾರದತ್ತ ತೆರಳುತ್ತಿದ್ದರು. ಈ ವೇಳೆ ಕಾರವಾರ ಕಡೆಯಿಂದ ಬಂದ ಟ್ರ್ಯಾಕ್ಸ್‌ವೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಅಪಘಾತದ ವೇಳೆ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ಗೆ ಬೆಂಕಿ ತಗುಲಿದ್ದು, ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಆದರೆ, ಬೈಕ್ ಸವಾರನ ಮೇಲೆ ಬೈಕ್ ಬಿದ್ದಿದ್ದರಿಂದ ಮೇಲೆ ಏಳಲು ಆಗಿಲ್ಲ. ಹೀಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದರಿಂದ ಅಲ್ಲೇ ಸಿಲುಕಿದ್ದ ಬೈಕ್ ಸವಾರ ಸುಮಂತ ಹರಿಕಂತ್ರ ಅವರ ಮೈಗೂ ಬೆಂಕಿ ತಗುಲಿದೆ. ಹೀಗಾಗಿ ಅವರು ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.
ಗಾಯಾಳುಗಳು ಆಸ್ಪತ್ರೆಗೆ ದಾಖಲು
ಗಾಯಾಳುಗಳಾದ ಸುಮಿತ್ ಹಾಗೂ ಚಾಣಕ್ಯ ಹರಿಕಂತ್ರ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಗುಜರಿ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪೀಕಿದ ಪೊಲೀಸ್
ಬೆಂಗಳೂರು: ಮಾರತ್ತಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಸುಳ್ಳು ಆರೋಪಗಳನ್ನು ಮಾಡಿ ಗುಜರಿ ಅಂಗಡಿ ಮಾಲೀಕನಿಂದ ಹಣ ವಸೂಲಿ (Fraud Case) ಮಾಡಿರುವ ಆರೋಪವೊಂದು ಕೇಳಿ ಬಂದಿದೆ. ಗುಜರಿ ಅಂಗಡಿ ಮಾಲೀಕ ಅಖ್ತಿರ್ ಅಲಿ ಮಂಡಲ್ ಎಂಬುವವರು ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಅಖ್ತರ್ ಅವರು ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರಳ್ಳಿಯಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದರು. ಕಳೆದ ಏಪ್ರಿಲ್ 17ರ ಮಧ್ಯಾಹ್ನ 12ಗಂಟೆಗೆ ಗುಜುರಿ ಬಳಿ ಪೊಲೀಸ್ ಸಿಬ್ಬಂದಿ, ಇನ್ಫಾರ್ಮರ್ ಎಸ್.ನಿವಾಸ್ ಎಂಬಾತನ ಜತೆಗೆ ಆಗಮಿಸಿದ್ದರು. ಹೀಗೆ ಬಂದವರೇ ನಾವು ಪೊಲೀಸರು ನೀವು ದಂಧೆ ನಡೆಸುತ್ತಿದ್ದೀರಾ? ಗಾಂಜಾ ಮಾರಾಟ ಮಾಡುತ್ತೀದ್ದೀರಾ ಎಂದು ಬೆದರಿಕೆ ಹಾಕಿದ್ದಾರೆ.
ಕೆಲಸಗಾರರ ಮೇಲೆ ಹಲ್ಲೆ ಮಾಡಿ ಅಖ್ತರ್ ಬಳಿ ಸುಮಾರು 2 ಲಕ್ಷ ರೂ. ಹಣವನ್ನು ಇನ್ಫಾರ್ಮರ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಮೊದಲು 20 ಸಾವಿರ ನಗದು ಪಡೆದುಕೊಂಡು ಬಳಿಕ ಬ್ಯಾಂಕ್ ಖಾತೆಯಿಂದ 80 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಹೋಗುವಾಗ ಬೆದರಿಕೆ ಹಾಕಿ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್ ಪಡೆದುಕೊಂಡಿದ್ದಾರೆ. ಬಳಿಕ ಎಟಿಎಂನಿಂದ 50 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Neha Murder Case: ಫಯಾಜ್ ಜೈಲಲ್ಲಿ ಇರೋವಾಗ ಮೊಬೈಲ್ ಫೋಟೊ ಲೀಕ್ ಆಗಲು ಹೇಗೆ ಸಾಧ್ಯ?
ಮರುದಿನ ವಾಪಸ್ ಗುಜುರಿ ಅಂಗಡಿಗೆ ಬಂದಿದ್ದ ಆರೋಪಿಗಳು, ಎಟಿಎಂ ಕಾರ್ಡ್ ಕೊಟ್ಟು ಮತ್ತೆ 50 ಸಾವಿರ ಹಣ ಪಡೆದುಕೊಂಡು ಹೋಗಿದ್ದಾರೆ. ಮತ್ತೊಮ್ಮೆ 50 ಸಾವಿರ ರೂ. ಕೊಡಬೇಕು ಇಲ್ಲದಿದ್ದರೆ ಬೈಕ್ ತೆಗೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಇವರ ಕಾಟ ತಾಳಲಾರದೆ ಅಖ್ತಿರ್ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಿವಾಸ್ ಎಂಬಾತನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾಗಿ ವೈಟ್ ಫೀಲ್ಡ್ ಡಿಸಿಪಿ ಶಿವಕುಮಾರ್ ಗುಣಾರೆ ಮಾಹಿತಿ ನೀಡಿದ್ದಾರೆ.