Site icon Vistara News

Road Accident : ಲಾರಿಗೆ ಕಾರು ಡಿಕ್ಕಿ; ನಿಶ್ಚಿತಾರ್ಥದ ಖುಷಿಯಲ್ಲಿದ್ದ ಕೃಷಿ ಅಧಿಕಾರಿ ಸಾವು

Lorry Hit Car

ಚಿತ್ರದುರ್ಗ: ಆ ಕುಟುಂಬದವರು ನಾಳೆ ನಡೆಯಬೇಕಿದ್ದ ಮಗನ ನಿಶ್ಚಿತಾರ್ಥಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದರು. ಆದರೆ ಅವರ ಖುಷಿಗೆ ಸಂಭ್ರಮಕ್ಕೆ ಅದ್ಯಾರ ಕಣ್ಣು ಬಿತ್ತೋ ಏನೋ, ಸಂಭ್ರಮದ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ನಿಶ್ಚಿತಾರ್ಥದ ಸಿದ್ಧತೆಯಲ್ಲಿ ಇದ್ದವರು ಈಗ ಮಗನಿಗೆ ಚಟ್ಟ (Road Accident) ಕಟ್ಟುವಂತಾಗಿದೆ.

ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿತ್ರದುರ್ಗ ತಿರುಮಲ ಡಾಬಾ ಬಳಿ ಅಪಘಾತ ಸಂಭವಿಸಿದೆ. ಕೃಷಿ ಇಲಾಖೆ ಅಧಿಕಾರಿ ವಿಶಾಲ್ ಕುಮಾರ್ (28) ಎಂಬಾತ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಶಾಲ್ ಕುಮಾರ್ ಹೊಳಲ್ಕೆರೆಯಲ್ಲಿ ಕೆಲಸ ಮಾಡುತ್ತಿದ್ದರು. ಕಾರಲ್ಲಿ ಬರುವಾಗ ಎದುರಿಗೆ ಬಂದ ಲಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಡಿಕ್ಕಿ ಹೊಡೆದ ರಭಸಕ್ಕೆ ವಿಶಾಲ್‌ ತಲೆಗೆ ಗಂಭೀರ ಪೆಟ್ಟಾಗಿತ್ತು. ತೀವ್ರ ರಕ್ತಸ್ರಾವದಿಂದ ವಿಶಾಲ್‌ ಉಸಿರು ಚೆಲ್ಲಿದ್ದಾರೆ.

ಎಂಗೇಜ್ಮೆಂಟ್ ಖುಷಿಯಲ್ಲಿದ್ದ ವಿಶಾಲ್‌

ವಿಶಾಲ್‌ ಪೋಷಕರು ಮಗನಿಗೆ ಹುಡುಗಿಯನ್ನು ಹುಡುಕಿ, ಸಂಬಂಧ ಗೊತ್ತು ಮಾಡಿದ್ದರು. ಅದರಂತೆ ನಾಳೆ ಭಾನುವಾರ ವಿಶಾಲ್‌ಗೆ ನಿಶ್ಚಿತಾರ್ಥ ಮಾಡಲು ಮುಂದಾಗಿದ್ದರು. ಆದರೆ ಯಮರೂಪಿಯಾಗಿ ಬಂದ ಲಾರಿಗೆ ವಿಶಾಲ್‌ ಅಸುನೀಗಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ: Killer CEO : 4 ವರ್ಷದ ಮಗನ ಕೊಂದ ಸುಚನಾ ಸೇಠ್‌ಗೆ 13 ದಿನಗಳ ನ್ಯಾಯಾಂಗ ಬಂಧನ

ದಟ್ಟ ಮಂಜಿಗೆ ದಾರಿ ತಪ್ಪಿ ಪಲ್ಟಿ ಹೊಡೆದ ಲಾರಿ

ಮುಂಜಾನೆಯದ್ದು ದಟ್ಟ ಮಂಜು ಆವರಿಸುತ್ತಿದ್ದು, ಇದು ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುತ್ತಿದೆ. ಮಂಜಿಗೆ ದಾರಿ ಕಾಣದೆ ಅಪಘಾತಗಳು ಸಂಭವಿಸುತ್ತಿದೆ. ಸದ್ಯ ಚಿಕ್ಕಮಗಳೂರಿನ ಕಳಸ‌ ತಾಲೂಕಿನ ಬಾಳೆಹೊಳೆ ಗ್ರಾಮದ ಬಳಿ ದಟ್ಟ ಮಂಜಿನಿಂದ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಲಾರಿ ಪಲ್ಟಿ ಹೊಡೆದಿದೆ.

ಗ್ಯಾಸ್ ಸಿಲಿಂಡರ್ ತುಂಬಿಕೊಂಡು ಹೊರಟಿದ್ದಾಗ ಲಾರಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಪಲ್ಟಿಯಾಗಿದ್ದು, ರಸ್ತೆಗೆ ಅಡ್ಡಲಾಗಿ ನೂರಾರು ಗ್ಯಾಸ್ ತುಂಬಿದ ಸಿಲಿಂಡರ್‌ಗಳು ಬಿದ್ದಿತ್ತು. ಅದೃಷ್ಟವಶಾತ್‌ ಯಾವುದೇ ದೊಡ್ಡ ಮಟ್ಟದ ಅನಾಹುತ ಸಂಭವಿಸಿಲ್ಲ. ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಕಳಸ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version