ಧಾರವಾಡ: ಹೈವೇಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ತಿರುವು ಪಡೆಯುತ್ತಿದ್ದ ಬೈಕ್ಗೆ ಟಿಪ್ಪರ್ ಲಾರಿ ಡಿಕ್ಕಿ (Road Accident) ಹೊಡೆದಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತ್ಯುವಾಗಿದ್ದಾನೆ. ನಾಗಯ್ಯ ಹಿರೇಮಠ್ (56) ಮೃತ ದುರ್ದೈವಿ. ಧಾರವಾಡದ ಹೊರವಲಯದ ಹೊಯ್ಸಳ ನಗರದ ಈ ದುರ್ಘಟನೆ ನಡೆದಿದೆ.
ಹುಬ್ಬಳ್ಳಿಯ ತಾರಿಹಾಳ ನಗರದ ನಿವಾಸಿಯಾಗಿರುವ ನಾಗಯ್ಯ ಬೈಕ್ನಲ್ಲಿ ಬರುತ್ತಿದ್ದರು. ತಾರಿಹಾಳದಿಂದ ಬೇಲೂರು ಕಡೆಗೆ ಹೋಗುವಾಗ ವೇಗವಾಗಿ ಬಂದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸಮೇತ ಹಾರಿ ಸವಾರ ಬಿದ್ದಿದ್ದಾರೆ. ಬಳಿಕ ಟಿಪ್ಪರ್ ಟೈಯರ್ ಅಡಿ ಸಿಲುಕಿ ಸವಾರ ನಾಗಯ್ಯ ಜೀವಬಿಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸಂಚಾರಿ ಪೊಲೀಸರು ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Drowned in water tank : ನೀರಿನ ತೊಟ್ಟಿಯಲ್ಲಿ ತೇಲುತ್ತಿತ್ತು ವರ್ಷದ ಕೂಸು!
ಗೋವಾ ಪಾರ್ಟಿ ಮುಗಿಸಿ ಬರುವಾಗ ಅಪಘಾತಕ್ಕೀಡಾದ ಕಾರು, ವ್ಯಕ್ತಿ ಸಾವು
ಗೋವಾ ಪ್ರವಾಸ ಮುಗಿಸಿ ವಾಪಸ್ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೇವಿಕೆರೆ ಗ್ರಾಮದಲ್ಲಿ ಈ ಅಪಘಾತ ನಡೆದಿದೆ.
ಗುರುಮೂರ್ತಿ (35) ಮೃತ ದುರ್ದೈವಿ. ಗಾಯಾಳುಗಳನ್ನು ಜಗಳೂರು ಹಾಗೂ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೊಸ ವರ್ಷಾಚರಣೆ ಮಾಡಲು ಜಗಳೂರಿನಿಂದ ಡಿ. 31ರಂದು ಗೋವಾಕ್ಕೆ ಐವರು ಪ್ರವಾಸಕ್ಕೆ ಹೋಗಿದ್ದರು. ಗೋವಾದಲ್ಲಿ ಪಾರ್ಟಿ ಮುಗಿಸಿ ಬರುವಾಗ ಮಂಗಳವಾರ ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಜಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಇದನ್ನೂ ಓದಿ: Road Accident : ತುಂಡಾದ ಆ್ಯಕ್ಸಲ್ ಬ್ಲೇಡ್; ಉರುಳುತ್ತಿದ್ದ ಬಸ್ಸನ್ನು ಹಿಡಿದು ನಿಲ್ಲಿಸಿದ ಆಪದ್ಭಾಂಧವರು
ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು; ಸ್ಕೂಟಿ ಮೇಲಿಂದ ಹಾರಿ ಬಿದ್ದಳು
ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿಯಲ್ಲಿದ್ದ ಯುವತಿ 50 ಮೀಟರ್ ಹಾರಿ ಕೆಳಗೆ ಬಿದ್ದಿದ್ದಾಳೆ. ಸ್ಕೂಟಿಗೆ ಡಿಕ್ಕಿ ಹೊಡೆದು ಮುಂದೆ ಇದ್ದ ಮತ್ತೆರಡು ಕಾರಿಗಳಿಗೂ ರಭಸವಾಗಿ ಗುದ್ದಿದೆ.
ಗಾಡಿ ಓಡಿಸುತ್ತಿದ್ದ ದಿವ್ಯಾ ಸುಜಯ್ ಪಾಟೀಲ (23) ಎಂಬಾಕೆ ಗಂಭೀರ ಗಾಯಗೊಂಡಿದ್ದಾಳೆ. ಬೆಳಗಾವಿಯ ಬ್ರಹ್ಮನಗರದ ನಿವಾಸಿಯಾಗಿರುವ ದಿವ್ಯಾ, ಬೆಳಗಾವಿಯ ಮಜಗಾಂವ ಕಡೆಯಿಂದ ಪೀರನವಾಡಿ ಕಡೆಗೆ ಹೊರಟಿದ್ದಳು. ಗಂಭೀರ ಗಾಯಗೊಂಡಿದ್ದ ದಿವ್ಯಾಳನ್ನು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದಿಂದಾಗಿ ಸ್ಕೂಟಿ ಎರಡು ಪೀಸ್ ಆಗಿದ್ದರೆ, ಮೂರು ಕಾರುಗಳು ಜಖಂಗೊಂಡಿವೆ. ಸರಣಿ ಅಪಘಾತದ ಭಯಾನಕ ದೃಶ್ಯವು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪಘಾತ ಮಾಡಿದ ಕಾರು ಚಾಲಕ ಭರತ ಚೌಗಲೇ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಬೆಳಗಾವಿ ದಕ್ಷಿಣ ಸಂಚಾರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Road Accident : ಎಲೆಕ್ಟ್ರಿಕ್ ಬಸ್- ಜೀಪ್ ಮಧ್ಯೆ ಭೀಕರ ಅಪಘಾತ; ನಾಲ್ವರು ಸಾವು
ಉಡುಪಿಯಲ್ಲಿ ಜನೌಷಧಿ ಕೇಂದ್ರಕ್ಕೆ ನುಗ್ಗಿದ ಆಂಬ್ಯುಲೆನ್ಸ್
ಉಡುಪಿಯ ಲಕ್ಷ್ಮೀಂದ್ರ ನಗರದಲ್ಲಿರುವ ಜನೌಷಧಿ ಕೇಂದ್ರಕ್ಕೆ ಆಂಬ್ಯುಲೆನ್ಸ್ವೊಂದು ನುಗ್ಗಿದೆ. ನಸುಕಿನ ಜಾವ ಬರುವಾಗ ಆಂಬ್ಯುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಏಕಾಏಕಿ ಜನೌಷಧಿ ಕೇಂದ್ರಕ್ಕೆ ನುಗ್ಗಿದೆ. ಘಟನೆಯಲ್ಲಿ ಚಾಲಕನಿಗೆ ಗಾಯಗಳಾಗಿವೆ.
ಚಿತ್ರದುರ್ಗದಲ್ಲಿ ಶಾಲಾ ವಾಹನ ಪಲ್ಟಿ
ಶಾಲಾ ವಾಹನ ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಚಿತ್ರದುರ್ಗದ ಹೊಸದುರ್ಗ ತಾಲ್ಲೂಕಿನ ಮಲ್ಲಪ್ಪನಹಳ್ಳಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಬಸ್ ಚನ್ನಸಮುದ್ರ ಗ್ರಾಮದಿಂದ ಹೋಗುತ್ತಿದ್ದಾಗ ಪಲ್ಟಿಯಾಗಿದೆ.
ತೆಂಗಿನ ತೋಟದ ಕೆಲಸಕ್ಕೆ ಪೈಪ್ ಲೈನ್ ಕಾಮಗಾರಿಗಾಗಿ ರಸ್ತೆಯಲ್ಲಿ ಗುಂಡಿ ತೆಗೆಯಲಾಗಿತ್ತು. ಆದರೆ ರಸ್ತೆ ಗುಂಡಿಯನ್ನು ಅರ್ಧಂಬರ್ಧ ಮುಚ್ಚಿದ್ದೆ ಬಸ್ ಪಲ್ಟಿಯಾಗಲು ಕಾರಣ ಎನ್ನಲಾಗಿದೆ. ಬಸ್ನಲ್ಲಿದ್ದ ಸುಮಾರು 15 ರಿಂದ 20 ಮಕ್ಕಳು ಗಾಯಗೊಂಡಿದ್ದು, ಅವರನ್ನೆಲ್ಲ ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ