ವಿಜಯನಗರ/ಚಿಕ್ಕಮಗಳೂರು: ಪ್ರತ್ಯೇಕ ಕಡೆಗಳಲ್ಲಿ ಸವಾರರ ನಿಯಂತ್ರಣ ತಪ್ಪಿದ್ದು ಪ್ರಾಣವನ್ನೇ (Road Accident) ಕಳೆದುಕೊಂಡಿದ್ದಾರೆ. ವಿಜಯನಗರದಲ್ಲಿ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರು ಜಲಾಶಯದ ಹಿನ್ನೀರಿನ ಕಂದಕಕ್ಕೆ ಹಾರಿ ಬಿದ್ದಿದ್ದಾರೆ. ಮೇಲಿಂದ ಬಿದ್ದ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರ ಪೈಕಿ ಒಬ್ಬ ಯುವಕ ಮೃತಪಟ್ಟರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ.
ಜಗದೀಶ್ (28) ಮೃತಪಟ್ಟವನು. ಶಶಾಂಕ್ ಪಾಟೀಲ್ ಎಂಬಾತನಿಗೆ ಗಂಭೀರ ಗಾಯವಾಗಿದೆ. ಇವರಿಬ್ಬರು ಬೆಂಗಳೂರಿನಿಂದ ಇಳಕಲ್‌ಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಬೈಕ್ ಸ್ಪಿಡ್ ಆಗಿ ಬಂದು ರಭಸವಾಗಿ ತುಂಗಭದ್ರಾ ಜಲಾಶಯದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ನಿಂದ ಹಾರಿ ಹಿನ್ನೀರಿಗೆ ಬಿದ್ದಿದ್ದಾರೆ. ಕೆಳಗೆ ಬೃಹತ್ ಗಾತ್ರದ ಕಲ್ಲುಗಳು ಇದ್ದ ಕಾರಣ ಬಿದ್ದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಜಗದೀಶ್ ಮೃತಪಟ್ಟಿದ್ದಾನೆ. ಶಶಾಂಕ್ ಗಂಭೀರ ಗಾಯಗೊಂಡಿದ್ದು ಆತನನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಇಬ್ಬರೂ ಇಳಕಲ್ ಮೂಲದವರು ಎಂದು ತಿಳಿದು ಬಂದಿದೆ. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಗದೀಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Murder case : ಮಕ್ಕಳ ಎದುರೇ ಪತ್ನಿಗೆ ಸಲಾಕೆಯಿಂದ ಹೊಡೆದು ಕೊಂದು ಪರಾರಿಯಾದ ಪತಿ
ಚಿಕ್ಕಮಗಳೂರಲ್ಲಿ ಕಾರು ಸಮೇತ ಕೆರೆಗೆ ಬಿದ್ದು ವ್ಯಕ್ತಿ ಸಾವು
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆಗೆ ಉರುಳಿದ್ದು, ನೀರಿನಲ್ಲಿ ಮುಳುಗಿ ವ್ಯಕ್ತಿಯೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ. ಅಂಬಳೆ ಗ್ರಾಮದ ರಮೇಶ್ (33), ಮೃತ ದುರ್ದೈವಿ. ಚಿಕ್ಕಮಗಳೂರು ತಾಲೂಕಿನ ಅಂಬಳೆ ಕೆರೆಯಲ್ಲಿ ಘಟನೆ ನಡೆದಿದೆ. ಬುಧವಾರ ತಡರಾತ್ರಿ ರಮೇಶ್ ಮತ್ತು ಆತನ ಸ್ನೇಹಿತ ಸಂತೋಷ್ ಕಾರಿನಲ್ಲಿ ಬರುವಾಗ ನಿಯಂತ್ರಣ ತಪ್ಪಿದೆ. ಏಕಾಏಕಿ ಕಾರು ಕೆರೆಗೆ ಹಾರಿದೆ. ಕಾರು ನೀರಿನಲ್ಲಿ ಮುಳುಗಿದ್ದರಿಂದ ಹೊರಬರಲು ಆಗದೆ ರಮೇಶ್ ಮೃತಪಟ್ಟರೆ, ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾರೊಳಗೆ ಇದ್ದ ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕೆರೆಯಿಂದ ಕಾರನ್ನು ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿದೆ. ಗಾಯಾಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ