ರಾಯಚೂರು/ದಾವಣಗೆರೆ: ಬೊಲೆರೋ ವಾಹನವು ಪಲ್ಟಿಯಾಗಿ ಯುವಕನೊರ್ವ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ರಾಯಚೂರಿನ ಯಾಪಲದಿನ್ನಿ ಬಳಿಯ ಎನ್‌ಎಚ್ 150 (C) ಮಾರ್ಗದಲ್ಲಿ ಅಪಘಾತ (Road Accident ) ಸಂಭವಿಸಿದೆ. ಆಂಜನೇಯ (23) ಮೃತ ದುರ್ದೈವಿ.
ಚಂದ್ರಬಂಡಾ ಗ್ರಾಮದ ಆಂಜನೇಯ ಸೇರಿ ಮೂವರು ಬೊಲೆರೋದಲ್ಲಿ ಪ್ರಯಾಣಿಸುತ್ತಿದ್ದಾಗ ಒಮ್ಮೆಲೆ ಪಲ್ಟಿ ಹೊಡೆದಿದೆ. ಬೊಲೆರೋ ಅಡಿ ಸಿಲುಕಿದ್ದ ಆಂಜನೇಯನಿಗೆ ತೀವ್ರ ರಕ್ತವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ನಾಗರಾಜ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಚಾಲಕ ವಿರೇಶ್ ಎಂಬಾತ ನಿರ್ಲಕ್ಷಕ್ಕೆ ಈ ಅಪಘಾತ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಬೊಲೆರೋ ವಾಹನದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಕಬ್ಬಿಣದ ವಸ್ತುಗಳನ್ನು ತುಂಬಿಸಿಕೊಂಡು ಹೋಗುತ್ತಿದ್ದ. ಹೀಗಾಗಿ ಭರಕ್ಕೆ ನಿಯಂತ್ರಣ ತಪ್ಪಿ ವಾಹನವು ಪಲ್ಟಿ ಹೊಡೆದಿದೆ ಎನ್ನಲಾಗಿದೆ ಸ್ಥಳಕ್ಕೆ ರಾಯಚೂರು ಎಸ್‌ಪಿ ನಿಖಿಲ್.ಬಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆ ತುಂಬೆಲ್ಲ ಚೆಲ್ಲಾಪಿಲ್ಲಿಯಾಗಿದ್ದ ಕಬ್ಬಿಣದ ಕಂಬಗಳನ್ನು , ವಾಹನವನ್ನು ತೆರವು ಮಾಡಿದ್ದಾರೆ. ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident : ಡೆಡ್ಲಿ ಆಕ್ಸಿಡೆಂಟ್‌ಗೆ ಸವಾರ ಮೃತ್ಯು; ಟ್ಯಾಂಕರ್ ಡಿಕ್ಕಿಗೆ ಉರುಳಿ ಬಿದ್ದ ಸ್ಕೂಲ್ ಬಸ್
ದಾವಣಗೆರೆಯಲ್ಲಿ ಬೈಕ್ ಸವಾರ ಪ್ರಾಣ ತೆಗೆದ ಕಂಬ
ದಾವಣಗೆರೆ ನಗರದ ನಿಟ್ಟುವಳ್ಳಿ 60 ಅಡಿ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ಬ್ಯಾನರ್ ಹಾಗೂ ಫ್ಲೆಕ್ಸ್ ಕಟ್ಟಲು ಕಂಬವೊಂದನ್ನು ನಿರ್ಮಿಸಲಾಗಿತ್ತು. ಆದರೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಟಿಟಿ ವಾಹನವು ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಟಿಟಿ ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಎದುರಿಗೆ ಬರುತ್ತಿದ್ದ ಬೈಕ್ ಸವಾರನ ಮೇಲೆ ಕಂಬ ಬಿದ್ದಿದೆ.
ಕಂಬ ಬಿದ್ದ ರಭಸಕ್ಕೆ ಚಲಿಸುತ್ತಿದ್ದಾಗಲೇ ಬೈಕ್‌ನಿಂದ ಬಿದ್ದ ಸವಾರನ ತಲೆಯು ನೆಲಕ್ಕೆ ಬಡಿದಿತ್ತು. ಕೂಡಲೇ ಅಲ್ಲಿದ್ದ ಸ್ಥಳೀಯರು ಸವಾರನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆತ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಿಟ್ಟುವಳ್ಳಿ ಭಗೀರಥ ಸರ್ಕಲ್ ಬಳಿಯ ನಿವಾಸಿ ಗಣೇಶ್ (40) ಮೃತ ದುರ್ದೈವಿ. ನಡುರಸ್ತೆಯಲ್ಲಿ ಕಂಬ ನಿರ್ಮಿಸಿದ್ದಕ್ಕೆ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ. ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರವಾಸಿಗರಿಗೆ ಗುದ್ದಿದ ಬ್ಯಾಟರಿ ಚಾಲಿತ ವಾಹನ
ವಿಜಯನಗರದ ಹೊಸಪೇಟೆ ತಾಲೂಕಿನ ಹಂಪಿಯ ವಿಜಯ ವಿಠ್ಠಲ ದೇಗುಲದ ಬಳಿ ಪ್ರವಾಸಿಗರಿಗೆ ಬ್ಯಾಟರಿ ಚಾಲಿತ ವಾಹನವು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಸ್ಥಳೀಯರು ಹಾಗೂ ಆಟೋ ಚಾಲಕರು ಸೇರಿ ಕಮಲಾಪುರದ ಆಸ್ಪತ್ರೆಗೆ ರವಾನಿಸಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಸಿದೆ. ಹಂಪಿ ಪ್ರವಾಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ