ಮುಂಬೈ: ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆ, ಮಾಹಿತಿ ಹಂಚಿಕೆ, ವಿಡಿಯೊ, ಫೋಟೊ ಶೇರ್ ಮಾಡುವ ವೇದಿಕೆಯಾಗಿರದೆ ಆನ್‌ಲೈನ್ ವಂಚನೆಯ ತಾಣಗಳೂ ಆಗಿವೆ. ಸಾಮಾಜಿಕ ಜಾಲತಾಣಗಳನ್ನು ಬಳಸುವವರು ತುಸು ಯಾಮಾರಿದರೂ ಸಾಕು, ಸಾವಿರಾರು ರೂಪಾಯಿ, ಕೆಲವೊಮ್ಮೆ ಲಕ್ಷಾಂತರ ರೂ. ಕಳೆದುಕೊಳ್ಳುವ ಸಾಧ್ಯತೆ, ಕಳೆದುಕೊಂಡ ನಿದರ್ಶನಗಳು ತುಂಬ ಇವೆ. ಇದಕ್ಕೆ ತಾಜಾ ನಿದರ್ಶನ ಎಂಬಂತೆ, ಇನ್‌ಸ್ಟಾಗ್ರಾಂನಲ್ಲಿ (Loan Scam On Instagram) ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ರೀಲ್ ನೋಡಿ ಯಾಮಾರಿದ ಮುಂಬೈ ಮಹಿಳೆಯೊಬ್ಬರು 61 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ.
ಮುಂಬೈನ ವೊರ್ಲಿ-ಕೋಲಿವಾಡಾ ಪ್ರದೇಶದಲ್ಲಿ ರೆಸ್ಟೋರೆಂಟ್ ಇಟ್ಟುಕೊಂಡಿರುವ ಮಹಿಳೆಯು ತಮ್ಮ ಉದ್ಯಮವನ್ನು ವಿಸ್ತರಿಸುವ ಕನಸು ಹೊಂದಿದ್ದಾರೆ. ಇದೇ ವೇಳೆ ಫೆಬ್ರವರಿ 17ರಂದು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಕುರಿತು ಇನ್‌ಸ್ಟಾಗ್ರಾಂನಲ್ಲಿ ರೀಲ್ ನೋಡಿದ್ದಾರೆ. ಬಳಿಕ ಸಾಲಕ್ಕೆ ಅಪ್ಲೈ ಮಾಡಿದ್ದಾರೆ. ಇದಾದ ನಂತರ ಪಂಕಜ್ ಸಿಂಗ್ ಭದುರಿಯಾ ಎಂಬಾತನು ಕರೆ ಮಾಡಿ, ತನ್ನ ಐಡಿ ಕಾರ್ಡ್, ಕಂಪನಿ ಹೆಸರು, ಫೋಟೊ, ವಿಳಾಸ ನೀಡಿ ಮಹಿಳೆಯನ್ನು ನಂಬಿಸಿದ್ದಾನೆ. 5 ಲಕ್ಷ ರೂ. ಸಾಲ ಪಡೆಯಲು ತೀರ್ಮಾನಿಸಿದ್ದ ಮಹಿಳೆಗೆ 10 ಲಕ್ಷ ರೂ. ಸಾಲದ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Payal Rohatgi | ಬಿಗ್ ಬಾಸ್ ಮಾಜಿ ಸ್ಪರ್ಧಿಗೆ ಆನ್‌ಲೈನ್ ವಂಚನೆ: ಹಣ ಕಳೆದುಕೊಂಡ ನಟಿ!
ವ್ಯಕ್ತಿಯನ್ನು ನಂಬಿದ ಮಹಿಳೆಯು ಭದುರಿಯಾಗೆ ಪ್ರಕ್ರಿಯೆ ಶುಲ್ಕವಾಗಿ ಒಂದಷ್ಟು ಹಣ ವರ್ಗಾಯಿಸಿದ್ದಾರೆ. ಹೀಗೆ, ಮೂರು ಬಾರಿ ಒಟ್ಟು 61 ಸಾವಿರ ರೂ. ವರ್ಗಾವಣೆ ಮಾಡಿದ್ದಾರೆ. ನಂತರ ಸಾಲದ ಮೊತ್ತ ಕ್ರೆಡಿಟ್ ಆಗದ ಕಾರಣ ಕಂಪನಿ ವಿಳಾಸದ ಸ್ಥಳಕ್ಕೆ ಹೋಗಿದ್ದಾರೆ. ಆಗ ಆ ಜಾಗದಲ್ಲಿ ಕಂಪನಿಯೇ ಇಲ್ಲದ್ದನ್ನು ಕಂಡು ಪೆಚ್ಚಾಗಿದ್ದಾರೆ. ಕೊನೆಗೆ ಫೆಬ್ರವರಿ 23ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗಾಗಿ, ಯಾವುದೇ ಜಾಲತಾಣದಲ್ಲಿ ಜನ ಸಾಲದ ಆಮಿಷಕ್ಕೆ ಮರುಳಾಗಿ, ಹಣ ಕಳೆದುಕೊಳ್ಳಬಾರದು ಎಂದು ಪೊಲೀಸರು ಜಾಗೃತಿಯ ಸಂದೇಶ ರವಾನಿಸಿದ್ದಾರೆ.