ನವ ದೆಹಲಿ: ದೆಹಲಿಯ ನಜಾಫ್ಗಢದ ಡಾಬಾದಲ್ಲಿ ಫ್ರಿಜ್ನಲ್ಲಿ ಶವ ಸಿಕ್ಕ ಪ್ರಕರಣಕ್ಕೆ ಪ್ರತಿದಿನ ಒಂದೊಂದು ಟ್ವಿಸ್ಟ್ ಸಿಗುತ್ತಿದೆ. ಹತ್ಯೆಗೀಡಾಗಿದ್ದು ನಿಕ್ಕಿ ಯಾದವ್ (Nikki Yadav Murder) ಮತ್ತು ಆಕೆಯನ್ನು ಕೊಲೆ ಮಾಡಿದ್ದು, ಅವಳ ಪತಿ ಸಾಹಿಲ್ ಗೆಹ್ಲೋಟ್ (Sahil Gehlot). ಇವರಿಬ್ಬರಿಗೂ 2020ರಲ್ಲೇ ಮದುವೆಯಾಗಿತ್ತು. ಆದರೆ ಸಾಹಿಲ್ ಕುಟುಂಬಕ್ಕೆ ಈ ಮದುವೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಅವರು ಸಾಹಿಲ್ಗೆ ಬೇರೆ ಮದುವೆ ಮಾಡಿಕೊಳ್ಳುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಆದರೆ ನಿಕ್ಕಿ ತಿರುಗಿಬಿದ್ದಿದ್ದಳು. ಈ ವಿಷಯವಾಗಿ ಸಾಹಿಲ್-ನಿಕ್ಕಿ ನಡುವೆ ಸದಾ ಗಲಾಟೆಯಾಗುತ್ತಿತ್ತು. ಅಂತಿಮವಾಗಿ ನಿಕ್ಕಿಯನ್ನು ಸಾಹಿಲ್ ಕೊಂದು, ತನ್ನ ಡಾಬಾದ ಫ್ರಿಜ್ನಲ್ಲಿಯೇ ಬಚ್ಚಿಟ್ಟು, ಹೋಗಿ ಇನ್ನೊಂದು ಮದುವೆಯಾಗಿದ್ದ. ಅಂದಹಾಗೇ, ನಿಕ್ಕಿ ಮತ್ತು ಸಾಹಿಲ್ 2020ರಲ್ಲಿ ಮದುವೆಯಾಗಿದ್ದಕ್ಕೆ ಸಾಕ್ಷಿಯಾಗಿ ಅವರ ಮದುವೆ ಪ್ರಮಾಣ ಪತ್ರವೂ ಪೊಲೀಸರಿಗೆ ಸಿಕ್ಕಿದೆ. ಇಷ್ಟು ಇಲ್ಲಿಯವರೆಗಿನ ಬೆಳವಣಿಗೆಗಳು.
ಈ ಕೇಸ್ನಲ್ಲಿ ಈಗ ಇನ್ನೊಂದು ಬೆಳವಣಿಗೆಯಾಗಿದೆ, ‘ಸಾಹಿಲ್ ಗೆಹ್ಲೋಟ್ ಈ ಕೊಲೆಯನ್ನು ಒಬ್ಬನೇ ಮಾಡಿಲ್ಲ, ಬದಲಿಗೆ ಆತನ ಅಪ್ಪ ಸೇರಿ, ಕುಟುಂಬದ ಇನ್ನಿತರ ಸದಸ್ಯರ ಸಹಾಯದಿಂದಲೇ ನಿಕ್ಕಿ ಯಾದವ್ಳನ್ನು ಹತ್ಯೆ ಮಾಡಿದ್ದಾನೆ’ ಎಂಬುದು ಸ್ಪಷ್ಟವಾಗಿದೆ. ಅದರಂತೆ, ಸಾಹಿಲ್ ಗೆಹ್ಲೋಟ್ ತಂದೆ ಸೇರಿ ಒಟ್ಟು ಐವರನ್ನು ಪೊಲೀಸರು ಶನಿವಾರ ಸಂಜೆ ಬಂಧಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಡಾಬಾ ಫ್ರಿಡ್ಜ್‌ನಲ್ಲಿ ಶವ ಪತ್ತೆ, ನಿಕ್ಕಿ ಜತೆ 2020ರಲ್ಲೇ ಮದುವೆ, 2ನೇ ಮದುವೆಗಾಗಿ ಹೆಂಡತಿಯನ್ನೇ ಕೊಂದ ಸಾಹಿಲ್
ಫೆ.14ರಂದು ಈ ಘಟನೆ ಬೆಳಕಿಗೆ ಬಂದಿತ್ತು. ಅಲ್ಲಿಗೆ 23 ವರ್ಷದ ನಿಕ್ಕಿ ಯಾದವ್ ಕೊಲೆಯಾಗಿ 4 ದಿನವೇ ಕಳೆದು ಹೋಗಿತ್ತು. ಡಾಬಾ ಮಾಲೀಕ ಸಾಹಿಲ್ನನ್ನು ವಿಚಾರಣೆಗೆ ಒಳಪಡಿಸಿದಾಗ ಒಂದೊಂದೇ ವಿಷಯಗಳು ಹೊರಬಿದ್ದಿದ್ದವು. ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆತನ ತಂದೆ ವಿರೇಂದ್ರ ಸಿಂಗ್, ಸೋದರ ಸಂಬಂಧಿಗಳಾದ ಆಶೀಶ್ ಮತ್ತು ನವೀನ್, ಅವರ ಸ್ನೇಹಿತರಆದ ಅಮರ್ ಮತ್ತು ಲೋಕೇಶ್ ಎಂಬುವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇವರೆಲ್ಲ ಸೇರಿ, ನಿಕ್ಕಿ ಯಾದವ್ಳನ್ನು ಹತ್ಯೆ ಮಾಡಲು ಹೇಗೆಲ್ಲ ಸಂಚು ರೂಪಿಸದರು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.