ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್. ಈಶ್ವರಪ್ಪ ಅವರ ಮೇಲೆ ಲಂಚದ ಆರೋಪ ಹೊರಿಸಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವಿನ ತನಿಖೆ ಇದೀಗ ದಿಲ್ಲಿ ತಲುಪಿದೆ.
ಸಂತೋಷ್ ಪಾಟೀಲ್ ಮಾಡಿದ ಮೊಬೈಲ್ ಕರೆಗಳ ಆಧಾರದಲ್ಲಿ ತನಿಖೆ ಆರಂಭಿಸಿದ ಉಡುಪಿ ಪೊಲೀಸರ ತಂಡ ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ನಾನಾ ಕಡೆ ತನಿಖೆ ನಡೆಸಿದೆ. ಇದೀಗ ಎರಡನೇ ಹಂತದ ತನಿಖೆಯ ಭಾಗವಾಗಿ ದಿಲ್ಲಿಯಲ್ಲಿ ವಿಚಾರಣೆ ಆರಂಭಿಸಿದೆ.
ಸಂತೋಷ್ ಪಾಟೀಲ್ ದಿಲ್ಲಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನು ಕೇಂದ್ರೀಕರಿಸಿ ಈ ತನಿಖೆ ನಡೆಯುತ್ತಿದೆ ಎನ್ನಲಾಗಿದೆ. ಅದರಲ್ಲೂ ಮುಖ್ಯವಾಗಿ ಪತ್ರಿಕಾಗೋಷ್ಠಿ ನಡೆಸಲು ಸಹಾಯ ಮಾಡಿದ್ದು ಯಾರು ಎನ್ನುವ ಮುಖ್ಯ ಪ್ರಶ್ನೆ ಆಧರಿಸಿ ವಿಚಾರಣೆ ಮುಂದುವರಿಯಲಿದೆ. ಮುಖ್ಯವಾಗಿ ಬೆಂಗಳೂರು ಮತ್ತು ಬೆಳಗಾವಿಯ ಕೆಲವು ಕಾಂಗ್ರೆಸ್ ನಾಯಕರು ಅವರಿಗೆ ಸಹಾಯ ಮಾಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿರುವುದರಿಂದ ಅವರ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ | Santosh Suicide Case: ಚಿಕ್ಕಮಗಳೂರು ಹೋಮ್ ಸ್ಟೇಯಲ್ಲಿ ಮೂರು ದಿನ ಇದ್ದ ಸಂತೋಷ್
ತಾವು ಹಿಂಡಲಗಾದಲ್ಲಿ ನಡೆಸಿದ ಕಾಮಗಾರಿಗಳ ಬಿಲ್ ಪಾವತಿಸಲು ಈಶ್ವರಪ್ಪ ಅವರು 40% ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ. ಕಮಿಷನ್ ನೀಡದೆ ಇರುವುದರಿಂದ ಹಣ ಬಿಡುಗಡೆ ಮಾಡಲಿಲ್ಲ. ಹೀಗಾಗಿ ತಾನು ಸಂಕಷ್ಟದಲ್ಲಿರುವುದಾಗಿ ಆರೋಪ ಮಾಡಿದ್ದರು ಸಂತೋಷ್. ಬಳಿಕ ಏಪ್ರಿಲ್ 12ರಂದು ಅವರು ಗೆಳೆಯರ ಜತೆ ಉಡುಪಿಗೆ ಬಂದು ತಾವೊಬ್ಬರೇ ಹೋಟೆಲ್‌ನ ಒಂದು ಕೋಣೆಯಲ್ಲಿ ಉಳಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿವಿಧ ಮಾಧ್ಯಮ ಪ್ರತಿನಿಧಿಗಳಿಗೆ ವಾಟ್ಸಾಪ್ ಮೂಲಕ ಸಂದೇಶ ಕಳಿಸಿದ್ದ ಸಂತೋಷ್, ತನ್ನ ಸಾವಿಗೆ ಕೆ.ಎಸ್. ಈಶ್ವರಪ್ಪ ಅವರೇ ಕಾರಣ ಎಂದು ತಿಳಿಸಿದ್ದರು. ಈ ಸಂದೇಶದ ಆಧಾರದಲ್ಲಿ ಉಡುಪಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮುಂದುವರಿದ ತನಿಖೆ
ಈಶ್ವರಪ್ಪ ರಾಜೀನಾಮೆಯೊಂದಿಗೆ ಒಂದು ಹಂತದಲ್ಲಿ ಪ್ರಕರಣ ತಣ್ಣಗಾದಂತೆ ಕಂಡರೂ ಪೊಲೀಸರು ಎಲ್ಲ ಆಯಾಮಗಳಲ್ಲಿ ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ. ದಿಲ್ಲಿಗೆ ತಲುಪಿರುವ ಪೊಲೀಸರು ಅವರಿಗೆ ಈ ಹಿಂದೆ ಪತ್ರಿಕಾಗೋಷ್ಠಿ ಆಯೋಜಿಸಲು ಸಹಾಯ ಮಾಡಿದವರ ಬೆನ್ನು ಬೀಳುವ ಸಾಧ್ಯತೆ ಇದೆ. ಇವರಲ್ಲಿ ಕಾಂಗ್ರೆಸ್‌ನ ಕೆಲವು ಮುಖಂಡರ ಹೆಸರು ಕೇಳಿಬಂದಿರುವುದರಿಂದ ಮತ್ತೆ ರಾಜಕೀಯ ಆರೋಪ ಪ್ರತ್ಯಾರೋಪಗಳು ಮುನ್ನೆಲೆಗೆ ಬರುವ ಸೂಚನೆ ಕಂಡುಬಂದಿದೆ.
ಇದನ್ನೂ ಓದಿ | Santosh Suicide Case: ಉ.ಕ.ದಲ್ಲಿ ಪ್ರತಿಭಟನೆ