Site icon Vistara News

Self Harming : ವಿಷ ಕುಡಿದು ಫ್ಯಾನ್‌ಗೆ ನೇಣು ಹಾಕಿಕೊಂಡ ಬಸ್‌ ಕಂಡಕ್ಟರ್‌

Bus conductor hangs himself from fan after consuming poison

ಕೊಡಗು: ರಾಜ್ಯದಲ್ಲಿ ಇತ್ತೀಚೆಗೆ ಆತ್ಮಹತ್ಯೆ (Self Harming) ಪ್ರಕರಣಗಳು ಹೆಚ್ಚಾಗುತ್ತಿದೆ. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ಎಲ್ಲ ವಯೋಮಾನದವರು ನಾನಾ ಕಾರಣಗಳಿಗೆ ಆತ್ಮಹತ್ಯೆಯ ದಾರಿಯನ್ನು ಹಿಡಿಯುತ್ತಿದ್ದಾರೆ. ಇದೀಗ ಬಸ್‌ ಕಂಡಕ್ಟರ್‌ವೊಬ್ಬರು ವಿಷ ಕುಡಿದಿದ್ದು ಮಾತ್ರವಲ್ಲ, ಆ ಬಳಿಕ ಫ್ಯಾನ್‌ಗೆ ನೇಣು ಬಿಗಿದುಕೊಂಡು (Kodagu News) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಡಿಕೇರಿಯ ಲಾಡ್ಜ್‌ನಲ್ಲಿ ಮೊಣ್ಣಪ್ಪ (28) ಎಂಬಾತ ಆತ್ಮಹತ್ಯೆ ಮಾಡಿಕೊಂಡವರು. ವಿರಾಜಪೇಟೆಯ ಆರ್ಜಿ ಗ್ರಾಮದ ನಿವಾಸಿ ಮೊಣ್ಣಪ್ಪ, ಮಡಿಕೇರಿಯಲ್ಲಿ ಖಾಸಗಿ ಬಸ್ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ರೂಮಿನ ಬಾಗಿಲು ತೆರೆಯದೇ ಇದ್ದಾಗ ಅನುಮಾನಗೊಂಡ ಲಾಡ್ಜ್‌ ಸಿಬ್ಬಂದಿ ಮತ್ತೊಂದು ಕೀ ಬಳಸಿ ತೆರೆದುನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಪೊಲೀಸರಿಗೆ ಈ ವಿಷಯವನ್ನು ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಮಡಿಕೇರಿ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Self Harming: ಪಪ್ಪಾ… ನಾನು ಲೂಸರ್, ಕೆಟ್ಟ ಮಗಳು! ಕೋಟಾದಲ್ಲಿ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

ಕಾಡಿಗೆ ಓಡಿ ಹೋಗಿ ಮರಕ್ಕೆ ನೇಣು ಬಿಗಿದುಕೊಂಡ ವಿದ್ಯಾರ್ಥಿನಿ!

ಶಿವಮೊಗ್ಗ: ಹಲವು ದಿನಗಳಿಂದ ತರಗತಿಗೆ ಗೈರಾಗಿದ್ದ ವಿದ್ಯಾರ್ಥಿನಿಗೆ ಶಾಲೆಗೆ ಬಾ ಎಂದಿದ್ದಕ್ಕೆ ಆತ್ಮಹತ್ಯೆಗೆ (Self Harming) ಶರಣಾಗಿದ್ದಾಳೆ. ಶಿವಮೊಗ್ಗದ ತೀರ್ಥಹಳ್ಳಿಯ (Shivamogga News) ಬಸವಾನಿ ಸಮೀಪದ ಕಾಡಿಗೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾಳೆ. ಪ್ರೀತಿ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಬಸವಾನಿ ಗ್ರಾ.ಪಂ ವ್ಯಾಪ್ತಿಯ ಶುಂಠಿಕಟ್ಟೆ ಫ್ರೌಢಶಾಲೆಯ ವಿದ್ಯಾರ್ಥಿನಿಯಾದ ಪ್ರೀತಿ, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಕಳೆದ 15 ದಿನದಿಂದ ಶಾಲೆಗೆ ಹೋಗದೇ ಮನೆಯಲ್ಲಿ ಇದ್ದಳು. ಹೀಗಾಗಿ ಶಾಲಾ ಶಿಕ್ಷಕರು ಪ್ರೀತಿಗೆ ಶಾಲೆಗೆ ಬರುವಂತೆ ಸೂಚಿಸಿದ್ದರು. ಇತ್ತ ಮನೆಯಲ್ಲೂ ಪ್ರೀತಿಗೆ ಶಾಲೆಗೆ ಹೋಗುವಂತೆ ಒತ್ತಾಯಿಸಿದ್ದರು.

ಆದರೆ ಇಂದು ಏಕಾಏಕಿ ಬಸವಾನಿ ಸಮೀಪದ ಕಾಡಿನೊಳಗೆ ಹೋದ ಪ್ರೀತಿ, ಅಲ್ಲಿದ್ದ ಮರವೊಂದಕ್ಕೆ ತನ್ನ ವೇಲ್‌ನಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳು ರಾತ್ರಿ ಕಳೆದರೂ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮರದಲ್ಲಿ ನೇತಾಡುತ್ತಿದ್ದ ಪ್ರೀತಿ ಮೃತದೇಹವನ್ನು ಕೆಳಗಿಳಿಸಿ, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident: ಬನ್ನೇರುಘಟ್ಟ ಪಾರ್ಕ್‌ನಲ್ಲಿ ಬ್ಯಾಟರಿ ಚಾಲಿತ ವಾಹನಕ್ಕೆ ಸಿಲುಕಿದ ಮಗು!

ಕೋಲಾರದಲ್ಲಿ ಸಾಲಭಾದೆಗೆ ನೇಣಿಗೆ ಶರಣಾದ

ಸಾಲ‌ಬಾಧೆಗೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ನ್ಯೂಟೌಟ್‌ನಲ್ಲಿ ನಡೆದಿದೆ. ಪ್ರವೀಣ್ ಚೌವ್ಹಾಣ್ (40) ಆತ್ಮಹತ್ಯೆಗೆ ಶರಣಾದವರು. ಎಲೆಕ್ಟ್ರಿಕ್ ಮತ್ತು ಹಾರ್ಡ್‌ವೇರ್ ಅಂಗಡಿ ಹೊಂದಿದ್ದ ಪ್ರವೀಣ್, ಸಾಲ ಹೆಚ್ಚಾಗಿದ್ದ ಕಾರಣ ಕಡಿಮೆ ಬೆಲೆಗೆ ಮನೆ ಮಾರಾಟ ಮಾಡಿದ್ದ. ಮನೆ ವಾಪಸ್ ಪಡೆದು ಹೆಚ್ವಿನ ಹಣಕ್ಕೆ ಮಾರಾಟ ಮಾಡಿ ಸಾಲವೆಲ್ಲ ತೀರಿಸಲು ಪ್ಲಾನ್ ಮಾಡಿದ್ದ. ಆದರೆ ಮನೆ ವಾಪಸ್ ಸಿಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version