ಮುಂಬಯಿಯ ಗೋರೆಗಾಂವ್ನಲ್ಲಿ ಈಜುಕೊಳದಲ್ಲಿ (Mumbai Swimming Pool) ಈಜಾಡುತ್ತಿದ್ದ 72 ವರ್ಷದ ವೃದ್ಧನ ಮೇಲೆ 20ವರ್ಷದ ಯುವಕನೊಬ್ಬ ಹಾರಿದ ಪರಿಣಾಮ, ಆ ವೃದ್ಧರು ಮೃತಪಟ್ಟಿದ್ದಾರೆ. ಪಶ್ಚಿಮ ಗೋರೆಗಾಂವ್ನ ಓಝೋನ್ ಸ್ವಿಮ್ಮಿಂಗ್ ಪೂಲ್ನಲ್ಲಿ ಘಟನೆ ನಡೆದಿದೆ. 72ವರ್ಷದ ವಿಷ್ಣು ಸಮಂತ್ ಎಂಬುವರು ಕೊಳದಲ್ಲಿ ಈಜುತ್ತಿದ್ದರು. 20ವರ್ಷದ ಯುವಕನೊಬ್ಬ ಆ ಈಜುಕೊಳಕ್ಕೆ ಅಲ್ಲಿದ್ದ ಎತ್ತರದ ಚಿಮ್ಮುಹಲಗೆ (Diving Board)ಯಿಂದ ಹಾರಿದ್ದಾನೆ. ಆದರೆ ಆತ ಹೋಗಿ ವೃದ್ಧನ ಮೈಮೇಲೇ ಬಿದ್ದಿದ್ದಾನೆ. ಇದರಿಂದಾಗಿ ವೃದ್ಧನ ಕುತ್ತಿಗೆ ಭಾಗಕ್ಕೆ ವಿಪರೀತ ಗಾಯವಾಗಿತ್ತು. ದೇಹದ ಇತರ ಭಾಗಗಳಿಗೂ ಸಣ್ಣಪುಟ್ಟ ಏಟಾಗಿತ್ತು. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ.
72ವರ್ಷದ ಸಮಂತ್ ಗೋರೆಗಾಂವ್ ಪೂರ್ವದ ಚಿರುವಾಡಿಯಲ್ಲಿರುವ ಅಲಿಯಾ ಅಪಾರ್ಟ್ಮೆಂಟ್ನ ನಿವಾಸಿ. ಸೋಮವಾರ ಸಂಜೆ 4.30ರ ಹೊತ್ತಿಗೆ ತನ್ನ ಮೊಮ್ಮಗ ನೀಲ್ ಜತೆ ಈಜುಕೊಳಕ್ಕೆ ಹೋಗಿದ್ದರು. ಸುಮಾರು 5.30ರ ಹೊತ್ತಿಗೆ ನೀಲ್ ತನ್ನ ಅಜ್ಜಿಗೆ ಕರೆ ಮಾಡಿ, ‘ಈಜುತ್ತಿದ್ದ ಅಜ್ಜನ ಮೈಮೇಲೆ ಒಬ್ಬರು ಬಿದ್ದರು. ಹೀಗಾಗಿ ಅಜ್ಜ ಗಾಯಗೊಂಡಿದ್ದಾರೆ’ ಎಂದು ತಿಳಿಸಿದ್ದಾನೆ. ವೃದ್ಧರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಪ್ರಯೋಜನ ಆಗದೆ, ಅವರು ಮೃತಪಟ್ಟಿದ್ದಾರೆ. ಅವರ ಪತ್ನಿ ನೀಡಿದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Vande Bharat: ಹಸುವಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದು ವೃದ್ಧ ಸಾವು; ಛಿದ್ರವಾಯ್ತು ದನದ ದೇಹ
ಸ್ವಿಮ್ಮಿಂಗ್ಪೂಲ್ನ ಸಿಬ್ಬಂದಿ, ಈಜು ತರಬೇತುದಾರರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದೇವೆ. ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮರಾಗಳ ಫೂಟೇಜ್ಗಳನ್ನೂ ಪರಿಶೀಲನೆ ಮಾಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದತ್ತಾತ್ರೇಯ ತೋಪ್ಟೆ ಹೇಳಿದ್ದಾರೆ. ‘ಯಾರದ್ದೇ ದುಡುಕು-ಅವಸರದಿಂದ ಇನ್ನೊಬ್ಬರ ಪ್ರಾಣ ಹೋದರೆ ಅದು ದಂಡಾರ್ಹ ನರಹತ್ಯೆ ಎಂದು ಪರಿಗಣಿತವಾಗುವುದಿಲ್ಲ. ಅದಕ್ಕೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಅಥವಾ ದಂಡ ವಿಧಿಸಬಹುದು. ಅಥವಾ ಎರಡನ್ನೂ ವಿಧಿಸಬಹುದು ಎಂದೂ ಅವರು ಹೇಳಿದ್ದಾರೆ.