Site icon Vistara News

Bihar Hooch Tragedy | ನಕಲಿ ಮದ್ಯ ಸೇವಿಸಿ 7 ಮಂದಿ ಸಾವು, 10 ಜನರ ದೃಷ್ಟಿಯೇ ಹೋಯ್ತು

Seven die in Bihar hooch tragedy

ಪಾಟ್ನಾ: ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 7 ಮಂದಿ ಮೃತಪಟ್ಟಿದ್ದು, ಸುಮಾರು 15 ಮಂದಿ ಅಸ್ವಸ್ಥರಾಗಿದ್ದಾರೆ. ಹಲವರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ. ಮಾಕರ್ ಪೊಲೀಸ್ ಸ್ಟೇಶನ್​ ವ್ಯಾಪ್ತಿಯಲ್ಲಿರುವ ಹಳ್ಳಿಗಳಲ್ಲಿ ಈ ದುರಂತ ನಡೆದಿದ್ದು, ಇವರೆಲ್ಲರೂ ನಕಲಿ ಮದ್ಯ ಸೇವಿಸಿಯೇ ಮೃತಪಟ್ಟಿದ್ದು ಪ್ರಾಥಮಿಕ ವರದಿಯಲ್ಲಿ ದೃಢಪಟ್ಟಿದೆ ಎಂದು ಸರನ್​ ಜಿಲ್ಲಾಧಿಕಾರಿ ರಾಜೇಶ್ ಮೀನಾ ತಿಳಿಸಿದ್ದಾರೆ.

ನಕಲಿ ಮದ್ಯ ಸೇವನೆ ಮಾಡಿದ ಕೆಲವೇ ಹೊತ್ತಲ್ಲಿ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ಪಾಟ್ನಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ 15ಜನರ ಸ್ಥಿತಿ ಗಂಭೀರವಾಗಿದೆ, ಅದರಲ್ಲೂ ಹತ್ತು ಜನರ ಕಣ್ಣು ಹೋಗಿದೆ ಎಂದು ರಾಜೇಶ್​​ ಮಾಹಿತಿ ನೀಡಿದ್ದಾರೆ. ಸರನ್​ ಜಿಲ್ಲೆಯ ಎಸ್​ಪಿ ಸಂತೋಷ್ ಕುಮಾರ್​ ಮಾತನಾಡಿದ್ದು, ‘ಮಾಕರ್, ಮಥುರಾ ಮತ್ತು ಭೆಲ್ದಿ ಪೊಲೀಸ್​ ಠಾಣೆ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ರೇಡ್ ಮಾಡಿದ್ದೇವೆ. ಈ ಘಟನೆಯ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ಸುಳಿವು ಸಿಕ್ಕಿದೆ. ತನಿಖೆ ಮುಕ್ತಾಯವಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸುತ್ತೇವೆ’ ಎಂದಿದ್ದಾರೆ.

ನಾಗರಪಂಚಮಿ ಹಬ್ಬದ ಸಂದರ್ಭಗಳಲ್ಲಿ ಈ ಭಾಗದಲ್ಲಿ ಜನರು ಗಾಂಜಾದಂಥ ಅಮಲು ಪದಾರ್ಥಗಳನ್ನು ಸೇವಿಸುವ ಸಂಪ್ರದಾಯ ರೂಢಿಯಲ್ಲಿದೆ. ಇದೇ ನೆಪದಲ್ಲಿ ಹಲವರು ಮಿತಿಮೀರಿ ಮದ್ಯ ಸೇವನೆ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಪೊಲೀಸರ ಎದುರು ಹೇಳಿಕೊಂಡಿದ್ದಾರೆ. ಬಿಹಾರದಲ್ಲಿ 2016ರಿಂದ ಮದ್ಯ ನಿಷೇಧವಾಗಿದೆ. ಅಲ್ಲಿ ಮದ್ಯ ಸರಬರಾಜು, ಖರೀದಿಗೆ ಕಡಿವಾಣ ಹಾಕಲಾಗಿದೆ. ಆದರೆ ಚಟಕ್ಕೆ ಬಿದ್ದ ಜನರು ನಕಲಿ ಮದ್ಯ, ಕಳ್ಳಬಟ್ಟಿ ಸೇವಿಸಿ ಜೀವಕ್ಕೇ ಅಪಾಯ ತಂದುಕೊಳ್ಳುತ್ತಿದ್ದಾರೆ. ಬಿಹಾರದಲ್ಲಿ 2021ರ ನವೆಂಬರ್​​ನಿಂದ ಇಲ್ಲಿಯವರೆಗೆ ನಕಲಿ ಮದ್ಯ ಸೇವನೆಯಿಂದ ಸುಮಾರು 50 ಮಂದಿ ಜೀವ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಜಪಾನ್‌ನಲ್ಲಿ ಅತಿಯಾದ ದುಡಿಮೆಯಿಂದ ವರ್ಷಕ್ಕೆ 10,000 ನೌಕರರ ಅಕಾಲಿಕ ಸಾವು!

Exit mobile version