ದೆಹಲಿ ಪೂರ್ವ ಭಾಗದಲ್ಲಿರುವ ಶಹದಾರ ಎಂಬಲ್ಲಿ ಇಬ್ಬರು ಮಾಂಸ ವ್ಯಾಪಾರಿಗಳ ಮೇಲೆ ಏಳು ಮಂದಿ ಸೇರಿ ಹಲ್ಲೆ ನಡೆಸಿದ್ದಲ್ಲದೆ, ಅವರ ಹಣವನ್ನೆಲ್ಲ ಲೂಟಿ ಮಾಡಿದ್ದಾರೆ. ಹೀಗೆ ಹಲ್ಲೆ ಮಾಡಿದವರಲ್ಲಿ ಮೂವರು ದೆಹಲಿ ಪೊಲೀಸರೂ ಸೇರಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಮಾರ್ಚ್ 7ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇಬ್ಬರು ವ್ಯಾಪಾರಿಗಳು ಕಾರಿನಲ್ಲಿ ಹೋಗುತ್ತಿದ್ದವರು, ಸ್ಕೂಟರ್ವೊಂದಕ್ಕೆ ಡಿಕ್ಕಿ ಹೊಡೆದರು. ಇದೇ ವೇಳೆ, ಅವರನ್ನು ಅಡ್ಡಟ್ಟಿದ ಏಳು ಮಂದಿ ತಮ್ಮನ್ನು ತಾವು ಗೋವು ರಕ್ಷಕರು ಎಂದು ಹೇಳಿಕೊಂಡು ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲ, ಆ ಇಬ್ಬರು ವ್ಯಾಪಾರಿಗಳ ಮುಖದ ಮೇಲೆ ಮೂತ್ರವನ್ನೂ ವಿಸರ್ಜನೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲ್ಲೆಗೆ ಒಳಗಾದ ಮಾಂಸದ ವ್ಯಾಪಾರಿಗಳು ಅಂದೇ ಪೊಲೀಸರಿಗೆ ದೂರು ಕೊಟ್ಟಿದ್ದರೂ, ಪ್ರಕರಣ ದಾಖಲಾಗಿದ್ದು ನಾಲ್ಕು ದಿನ ತಡವಾಗಿ. ಅದಾದ ಮೇಲೆ ಹಲ್ಲೆಯಲ್ಲಿ ಭಾಗಿಯಾದ ಒಬ್ಬ ಸಹಾಯಕ ಸಬ್ ಇನ್ಸ್ಪೆಕ್ಟರ್ ಸೇರಿ ಮೂವರೂ ಪೊಲೀಸರನ್ನೂ ಅಮಾನತು ಮಾಡಲಾಗಿದೆ.
ಮುಸ್ತಫಾಬಾದ್ ನಿವಾಸಿಯಾದ ನವಾಬ್ ಘಾಜಿಪುರ ಕಸಾಯಿಖಾನೆಗೆ ಮಾಂಸ ಪೂರೈಕೆ ಮಾಡುತ್ತಿದ್ದ. ಮಾರ್ಚ್ 7ರಂದು ಕೂಡ ಕಾರಿನಲ್ಲಿ ತನ್ನ ಕಸಿನ್ ಶೋಯೆಬ್ ಜತೆ ಹೋಗುತ್ತಿದ್ದ. ಕಾರಿನಲ್ಲಿ ಮಾಂಸವಿತ್ತು. ಆನಂದ್ ವಿಹಾರ್ ಬಳಿ ನವಾಬ್ ಕಾರು ಒಂದು ಸ್ಕೂಟರ್ಗೆ ಡಿಕ್ಕಿ ಹೊಡೆಯಿತು. ಆಗ ನವಾಬ್ ಮತ್ತು ಶೋಯೆಬ್ನನ್ನು ಸ್ಕೂಟರ್ ಚಾಲಕ ತರಾಟೆಗೆ ತೆಗೆದುಕೊಂಡಿದ್ದಲ್ಲದೆ, 4000 ರೂಪಾಯಿ ಪರಿಹಾರಕ್ಕೆ ಆಗ್ರಹಿಸಿದ. ಅದೇ ಹೊತ್ತಿಗೆ ಅಲ್ಲಿಗೆ ಒಂದು ಪೊಲೀಸ್ ವಾಹನ ಬಂತು. ಅದರಲ್ಲಿದ್ದ ಮೂವರು ಪೊಲೀಸರಲ್ಲಿ ಒಬ್ಬರು, ನವಾಬ್ನಿಂದ 2500 ರೂಪಾಯಿ ತೆಗೆದುಕೊಂಡು ಸ್ಕೂಟರ್ ಚಾಲಕನಿಗೆ ನೀಡಿದರು.
ಆದರೆ ಅಷ್ಟಕ್ಕೆ ಸುಮ್ಮನಾಗದೆ ಪೊಲೀಸರು ನವಾಬ್ ಮತ್ತು ಶೋಯೆಬ್ಗೆ ಬೆದರಿಕೆ ಹಾಕಿದರು. ನೀವೀಗ 15 ಸಾವಿರ ರೂಪಾಯಿ ಕೊಡದೆ ಇದ್ದರೆ ನಿಮ್ಮನ್ನು ಕಸ್ಟಡಿಗೆ ಕರೆದೊಯ್ಯುತ್ತೇವೆ ಎಂದು ಹೇಳಿದರು. ಅಷ್ಟೇ ಅಲ್ಲ, ಅಲ್ಲಿಯೇ ಇದ್ದ ನಾಲ್ವರನ್ನು ಕರೆದರು. ನವಾಬ್-ಶೋಯೇಬ್ರನ್ನು ಈ ನಾಲ್ವರು ಮತ್ತು ಮೂವರು ಪೊಲೀಸರು ಸೇರಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು, ಹಲ್ಲೆ ಮಾಡಿದ್ದಾರೆ. ನವಾಬ್-ಶೋಯೆಬ್ ಕೈ ಕತ್ತರಿಸಲು ಪ್ರಯತ್ನಿಸಿದ್ದಲ್ಲದೆ, ಮುಖದ ಮೇಲೆ ಮೂತ್ರ ವಿಸರ್ಜಿಸಿದ್ದಾರೆ. ‘ನೀವು ಗೋಹತ್ಯೆ ಮಾಡಿ, ಸಾಗಣೆ ಮಾಡುತ್ತಿದ್ದೀರಿ ಎಂದು ನವಾಬ್-ಶೋಯೆಬ್ಗೆ ಹೇಳಿದ ಪೊಲೀಸರು, ಅವರಿಬ್ಬರನ್ನೂ ಕೊಂದು ಚರಂಡಿಗೆ ಎಸೆಯುವ ಬೆದರಿಕೆ ಹಾಕಿದ್ದಾರೆ. ಅಷ್ಟಲ್ಲದೆ, ಇಬ್ಬರಿಂದ 25,500 ರೂಪಾಯಿ ಸುಲಿಗೆ ಮಾಡಿದ್ದಾರೆ. ಅವರಿಗೆ ಅದ್ಯಾವುದೋ ಮಾದಕದ್ರವ್ಯ ಇರುವ ಚುಚ್ಚುಮದ್ದು ನೀಡಿ, ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಈಗ ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ.