Site icon Vistara News

Shivamogga News : ಕಾಡಿಗೆ ಓಡೋಗಿ ಮರಕ್ಕೆ ನೇಣು ಬಿಗಿದುಕೊಂಡ ವಿದ್ಯಾರ್ಥಿನಿ!

Class 9 student commits suicide in Shivamogga

ಶಿವಮೊಗ್ಗ: ಹಲವು ದಿನಗಳಿಂದ ತರಗತಿಗೆ ಗೈರಾಗಿದ್ದ ವಿದ್ಯಾರ್ಥಿನಿಗೆ ಶಾಲೆಗೆ ಬಾ ಎಂದಿದ್ದಕ್ಕೆ ಆತ್ಮಹತ್ಯೆಗೆ (Self Harming) ಶರಣಾಗಿದ್ದಾಳೆ. ಶಿವಮೊಗ್ಗದ ತೀರ್ಥಹಳ್ಳಿಯ (Shivamogga News) ಬಸವಾನಿ ಸಮೀಪದ ಕಾಡಿಗೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡಿದ್ದಾಳೆ. ಪ್ರೀತಿ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ಬಸವಾನಿ ಗ್ರಾ.ಪಂ ವ್ಯಾಪ್ತಿಯ ಶುಂಠಿಕಟ್ಟೆ ಫ್ರೌಢಶಾಲೆಯ ವಿದ್ಯಾರ್ಥಿನಿಯಾದ ಪ್ರೀತಿ, 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆದರೆ ಕಳೆದ 15 ದಿನದಿಂದ ಶಾಲೆಗೆ ಹೋಗದೇ ಮನೆಯಲ್ಲಿ ಇದ್ದಳು. ಹೀಗಾಗಿ ಶಾಲಾ ಶಿಕ್ಷಕರು ಪ್ರೀತಿಗೆ ಶಾಲೆಗೆ ಬರುವಂತೆ ಸೂಚಿಸಿದ್ದರು. ಇತ್ತ ಮನೆಯಲ್ಲೂ ಪ್ರೀತಿಗೆ ಶಾಲೆಗೆ ಹೋಗುವಂತೆ ಒತ್ತಾಯಿಸಿದ್ದರು.

ಆದರೆ ಇಂದು ಏಕಾಏಕಿ ಬಸವಾನಿ ಸಮೀಪದ ಕಾಡಿನೊಳಗೆ ಹೋದ ಪ್ರೀತಿ, ಅಲ್ಲಿದ್ದ ಮರವೊಂದಕ್ಕೆ ತನ್ನ ವೇಲ್‌ನಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳು ರಾತ್ರಿ ಕಳೆದರೂ ಬಾರದಿದ್ದಾಗ ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿರುವ ಬೆಳಕಿಗೆ ಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮರದಲ್ಲಿ ನೇತಾಡುತ್ತಿದ್ದ ಪ್ರೀತಿ ಮೃತದೇಹವನ್ನು ಕೆಳಗಿಳಿಸಿ, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Road Accident: ಬನ್ನೇರುಘಟ್ಟ ಪಾರ್ಕ್‌ನಲ್ಲಿ ಬ್ಯಾಟರಿ ಚಾಲಿತ ವಾಹನಕ್ಕೆ ಸಿಲುಕಿದ ಮಗು!

ಕೋಲಾರದಲ್ಲಿ ಸಾಲಭಾದೆಗೆ ನೇಣಿಗೆ ಶರಣಾದ

ಸಾಲ‌ಬಾಧೆಗೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ನ್ಯೂಟೌಟ್‌ನಲ್ಲಿ ನಡೆದಿದೆ. ಪ್ರವೀಣ್ ಚೌವ್ಹಾಣ್ (40) ಆತ್ಮಹತ್ಯೆಗೆ ಶರಣಾದವರು. ಎಲೆಕ್ಟ್ರಿಕ್ ಮತ್ತು ಹಾರ್ಡ್‌ವೇರ್ ಅಂಗಡಿ ಹೊಂದಿದ್ದ ಪ್ರವೀಣ್, ಸಾಲ ಹೆಚ್ಚಾಗಿದ್ದ ಕಾರಣ ಕಡಿಮೆ ಬೆಲೆಗೆ ಮನೆ ಮಾರಾಟ ಮಾಡಿದ್ದ. ಮನೆ ವಾಪಸ್ ಪಡೆದು ಹೆಚ್ವಿನ ಹಣಕ್ಕೆ ಮಾರಾಟ ಮಾಡಿ ಸಾಲವೆಲ್ಲ ತೀರಿಸಲು ಪ್ಲಾನ್ ಮಾಡಿದ್ದ. ಆದರೆ ಮನೆ ವಾಪಸ್ ಸಿಗದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Self Harming: ತೊದಲು ಸಮಸ್ಯೆಗೆ ಮನನೊಂದ; ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

ಪಪ್ಪಾ… ನಾನು ಲೂಸರ್, ಕೆಟ್ಟ ಮಗಳು! ಕೋಟಾದಲ್ಲಿ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ

ಕೋಟಾ: ವಿದ್ಯಾರ್ಥಿಗಳ ಮೇಲಿನ ಪರೀಕ್ಷೆಯ ಒತ್ತಡದ ದುಷ್ಪರಿಣಾಮಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. ಜೆಇಇ ಪರೀಕ್ಷೆಗೆ (JEE Examination) ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ (Student Suicide) ಮಾಡಿಕೊಂಡ ಘಟನೆಯು ದೇಶದ ಕೋಚಿಂಗ್ ಹಬ್ (Coaching Center) ಆಗಿರುವ ರಾಜಸ್ಥಾನದ (Rajasthan) ಕೋಟಾದಲ್ಲಿ (Kota) ನಡೆದಿದೆ. ಇತ್ತೀಚಿನ ದಿನಗಳಲ್ಲಿ ಕೋಟಾದಲ್ಲಿ ನಡೆಯುತ್ತಿರುವ ಎರಡನೇ ಆತ್ಮಹತ್ಯೆಯಾಗಿದ್ದು, ಕೋಚಿಂಗ್ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿನ ಒತ್ತಡಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. ನಿಹಾರಿಕಾ ಬರೆದಿಟ್ಟ ಡೆತ್ ನೋಟ್ ವೈರಲ್ ಆಗಿದೆ.

18 ವರ್ಷದ ನಿಹಾರಿಕಾ ಅವರು ಕೋಟಾದ ಬೋರ್ಖೇಡಾ ಪ್ರದೇಶದಲ್ಲಿ ವಾಸಿಸುತ್ತಿದ್ದರು. ನಿಹಾರಿಕಾ ಅವರು ಜಾಯಿಂಟ್ ಎಂಟ್ರನ್ಸ್ ಎಕ್ಸಾಮಿನೇಷನ್(JEE) ತಯಾರಿ ನಡೆಸುತ್ತಿದ್ದರು. ನಿಹಾರಿಕಾ ತಾವಿದ್ದ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆ ದಾಖಲಿಸಲಾಯಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಮತ್ತು ನಿಧನರಾಗಿದ್ದಾರೆಂದು ಘೋಷಿಸಲಾಯಿತು. ಮರಣೋತ್ತರ ಪರೀಕ್ಷೆ ಸೇರಿದಂತೆ ತನಿಖೆಯನ್ನು ಪೊಲೀಸರು ಆರಂಭಿಸಿದ್ದಾರೆ. ನಿಹಾರಿಕಾ ಕೋಣೆಯಿಂದ ಡೆತ್ ನೋಟ್‌ ವಶಪಡಿಸಿಕೊಂಡಿದ್ದಾರೆ.

ಡೆತ್‌ನೋಟ್‌ನಲ್ಲಿ ಏನಿದೆ?

ಮಮ್ಮಿ, ಪಪ್ಪಾ ನನ್ನಿಂದ ಜೆಇಇ ಆಗಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನಾನು ಲೂಸರ್. ಕೆಟ್ಟ ಮಗಳು. ಸಾರಿ ಮಮ್ಮಿ, ಪಪ್ಪಾ. ಇದು ನನಗೆ ಉಳಿದ ಕೊನೆಯ ಆಯ್ಕೆ ಎಂದು ಡೆತ್ ನೋಟ್‌ನಲ್ಲಿ ನಿಹಾರಿಕಾ ಬರೆದಿದ್ದು, ಇದು ವೈರಲ್ ಆಗಿದೆ.

ನಿಹಾರಿಕಾ ತನ್ನ ತಂದೆಯೊಂದಿಗೆ ವಾಸಿಸುತ್ತಿದ್ದರು. ಅವರು ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ತೀವ್ರ ಒತ್ತಡದಿಂದಾಗಿ ನಿಹಾರಿಕಾ 12 ನೇ ತರಗತಿಗೆ ಮತ್ತೊಮ್ಮೆ ದಾಖಲಾಗಿದ್ದರು. ಪರೀಕ್ಷೆಗಾಗಿ ದಿನನಿತ್ಯದ ಅಧ್ಯಯನದಲ್ಲಿ ಏಳರಿಂದ ಎಂಟು ಗಂಟೆಗಳ ಕಾಲ ವ್ಯಯಿಸಿದರೂ, ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಕೋಚಿಂಗ್ ವಿದ್ಯಾರ್ಥಿ ಮೊಹಮ್ಮದ್ ಜೈದ್ ಅವರ ಪ್ರಕರಣದ ರೀತಿಯಲ್ಲೇ ನಿಹಾರಿಕಾ ಆತ್ಮಹತ್ಯೆ ಇದೆ. ಉತ್ತರ ಪ್ರದೇಶ ಮೊರಾದಾಬಾದ್ ಮೂಲದ ಜೈದ್ ಅವರು ನೀಟ್ ಪ್ರವೇಶ ಪರೀಕ್ಷೆಗೆ ಸಜ್ಜಾಗುತ್ತಿದ್ದರು. ಆದರೆ, ಸವಾಲುಗಳನ್ನು ಎದುರಿಸಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version