ನವ ದೆಹಲಿ: ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾ, ಮಾನಸಿಕ ಹಿಂಸೆ ನೀಡುತ್ತಿದ್ದ ಮೂವರು ಸಹೋದ್ಯೋಗಿಗಳನ್ನು ಪೊಲೀಸ್ ಒಬ್ಬ ಗುಂಡಿಕ್ಕಿ ಸಾಯಿಸಿದ್ದಾನೆ. ದಿಲ್ಲಿಯ ಹೈದರ್ ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೂವನ್ನು ಕೊಂದ ಬಳಿಕ ತಾನೇ ಪೊಲೀಸ್ ಠಾಣೆಗೆ ಹಾಜರಾಗಿರುವ ಈ ವ್ಯಕ್ತಿ ಅಲ್ಲಿ ತನಗಾದ ನೋವಿನ ಕಥೆಯನ್ನು ಹೇಳಿಕೊಂಡು ಕೊಲೆಯನ್ನು ಸಮರ್ಥಿಸಿಕೊಂಡಿದ್ದಾನೆ.
ಜತೆಗಾರರೇ ಹಿಂಸೆ ಕೊಡುತ್ತಿದ್ದರು
ಸಿಕ್ಕಿಂ ಮೀಸಲು ಪಡೆಗೆ ಸೇರಿದ ೩೨ ವರ್ಷಷ ಲಾನ್ಸ್ ನಾಯ್ಕ್ ಪ್ರಬೀಣ್ ರಾಯ್ ಹೈದರ್‌ಪುರದ ನೀರು ಶುದ್ಧೀಕರಣ ಘಟಕದಲ್ಲಿ ಸೇವೆಗೆ ನಿಯೋಜಿಸಲ್ಪಟ್ಟಿದ್ದ. ಆತ ಅಲ್ಲಿ ಕೆಲಸಕ್ಕೆ ಸೇರಿ ಇನ್ನೂ ೧೦ ದಿನ ಆಗಿರಲಿಲ್ಲ. ಆದರೆ, ಅಷ್ಟು ಹೊತ್ತಿಗೇ ಸಹೋದ್ಯೋಗಿಗಳು ಆತನ ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಲು ಆರಂಭಿಸಿದ್ದರು. ಇದನ್ನು ಕೇಳಿ ಕೇಳಿ ಬೇಸತ್ತ ಆತ ಕೊನೆಗೆ ಅವರ ಮೇಲೆ ಗುಂಡು ಹಾರಿಸಿದ್ದಾನೆ.
ಸೋಮವಾರ ಮಧ್ಯಾಹ್ನ ೨.೩೦ರ ಹೊತ್ತಿಗೆ ರಾಯ್ ತಾನು ವಾಸವಾಗಿದ್ದ ಕ್ವಾರ್ಟ್‌ರ್ಸ್‌ಗೆ ಹೋಗಿದ್ದಾನೆ. ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ನಾಲ್ವರ ಮೇಲೆ ತನ್ನಲ್ಲಿರುವ ಇನ್ಸಾಸ್ ರೈಫಲ್‌ನಿಂದ ಏಳು-ಎಂಟು ಸುತ್ತು ಗುಂಡು ಹಾರಿಸಿದ್ದಾನೆ. ಮೂವರಲ್ಲಿ ಇಬ್ಬರು ಒಂದು ಕೋಣೆಯಲ್ಲಿದ್ದರೆ, ಮತ್ತೊಬ್ಬ ಇನ್ನೊಂದು ಕೋಣೆಯಲ್ಲಿದ್ದ. ನಾಲ್ಕನೇ ವ್ಯಕ್ತಿ ಹಿಂಬಾಗಿಲಿನಿಂದ ಓಡಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಠಾಣೆಗೆ ಹೋಗಿ ಶರಣಾಗತನಾದ
ಮೂವರು ಸಹೋದ್ಯೋಗಿಗಳನ್ನು ಕೊಂದ ಪ್ರಬೀಣ್ ರಾಯ್ ಬಳಿಕ ನೇರವಾಗಿ ಸಮಯಾಪುರ್ ಬಾದ್ಲಿ ಪೊಲೀಸ್ ಠಾಣೆಗೆ ಹೋಗಿ ಶರಣಾಗತನಾಗಿದ್ದಾನೆ. ತಾನು ಕಮಾಂಡರ್ ಪಿಂಟೋ ನಂಗ್ಯಾಲ್ ಭೂತಿಯಾ (೨೦೧೨ರ ಬ್ಯಾಚ್‌ನ ಸಹೋದ್ಯೋಗಿ), ಕಾನ್‌ಸ್ಟೇಬಲ್‌ಗಳಾದ ಇಂದ್ರ ಲಾಲ್ ಛೇಟ್ರಿ ಮತ್ತು ಧನ್ ಹಂಗ್ ಸುಬ್ಬಾ (೨೦೧೩ನೇ ಬ್ಯಾಚ್) ಅವರನ್ನು ಕೊಂದಿರುವುದಾಗಿ ಹೇಳಿದ್ದಾನೆ. ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ವಿಶೇಷ ಪೊಲೀಶ್ ಕಮಿಷನರ್ ದೀಪೇಂದ್ರ ಪಾಠಕ್ ಅವರು ಪ್ರಾಥಮಿಕವಾಗಿ ವಿಚಾರಣೆ ನಡೆಸಿದಾಗ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೇ ಘಟನೆಗೆ ಕಾರಣ ಎಂದು ಸ್ಪಷ್ಟವಾಗಿದೆ.
ಹತ್ತು ದಿನಗಳ ಹಿಂದಷ್ಟೇ ಕೆಲಸಕ್ಕೆ ಸೇರಿದ್ದ ಪ್ರಬೀಣ್ ರಾಯ್‌ನ ಖಾಸಗಿ ವಿಚಾರಗಳನ್ನು ಈ ಸಿಬ್ಬಂದಿ ಕೇಳಿ ತಿಳಿದುಕೊಂಡಿದ್ದಾರೆ. ಪ್ರಬೀಣ್‌ಗೆ ಮದುವೆಯಾಗಿತ್ತಾದರೂ ಹೆಂಡತಿ ಜತೆಗಿರಲಿಲ್ಲ. ಯಾವುದೋ ಸಮಸ್ಯೆಯಾಗಿ ಆಕೆ ತವರಿಗೆ ಹೋಗಿದ್ದಳು. ಈ ನಡುವೆ ಆಕೆಯನ್ನು ಮನವೊಲಿಸುವ ಪ್ರಯತ್ನ ನಡೆಯುತ್ತಿತ್ತು. ಸೋಮವಾರ ಮಧ್ಯಾಹ್ನದ ನಂತರವೂ ಪ್ರಬೀಣ್ ತನ್ನ ಪತ್ನಿಗೆ ಕರೆ ಮಾಡಿದ್ದ. ಆದರೆ, ಆಕೆ ಕರೆಗೆ ಪ್ರತಿಕ್ರಿಯಿಸಲೇ ಇಲ್ಲ. ಇದನ್ನು ನೋಡಿದ ಸಹೋದ್ಯೋಗಿಗಳು ಆತನ ಹೆಂಡತಿಯ ಬಗ್ಗೆ ಅಪಹಾಸ್ಯ ಮಾಡಿದ್ದರು. ಇದರಿಂದ ಪ್ರಬೀಣ್‌ಗೆ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ಆತ ರೈಫಲ್ ಎತ್ತಿ ಗುಂಡು ಹಾರಿಸಿದ್ದ ಎಂದು ಪೊಲೀಸರು ವಿಚಾರಣೆಯ ಬಳಿಕ ತಿಳಿಸಿದ್ದಾರೆ.
ಇದನ್ನೂ ಓದಿ| ಮೂವರು ಸಹೋದ್ಯೋಗಿಗಳಿಗೆ ಗುಂಡಿಕ್ಕಿದ ಸಿಕ್ಕಿಂ ಪೊಲೀಸ್, ಇಬ್ಬರ ಸಾವು