ಚೆನ್ನೈ: ದೂರ ದೇಶದ ಪ್ರಯಾಣಕ್ಕೆ ಹೋಗುವಾಗ ಒಂದಿಷ್ಟು ಬಟ್ಟೆ ಬರೆಗಳು, ತುರ್ತು ಅಗತ್ಯದ ಔಷಧಗಳು ಸೇರಿದಂತೆ ಕೆಲವು ವಸ್ತುಗಳನ್ನು ಮಾತ್ರ ತೆಗೆದುಕೊಂಡು ಹೋಗುತ್ತೇವೆ. ಆದರೆ, ಚೆನ್ನೈ ಏರ್‌ಪೋರ್ಟ್‌ಗೆ ಬ್ಯಾಂಕಾಕ್‌ನಿಂದ ಬಂದ ವ್ಯಕ್ತಿಯೊಬ್ಬರ ಚೀಲದಲ್ಲಿ ಸಿಕ್ಕಿರುವ ವಸ್ತುಗಳನ್ನು ನೋಡಿ ಕಸ್ಟಮ್ಸ್ ಅಧಿಕಾರಿಗಳೇ ದಂಗಾಗಿದ್ದಾರೆ. ಅವುಗಳು ಏನೇನೂ ಗೊತ್ತೇ? ಹೆಬ್ಬಾವು, ಆಮೆ ಮತ್ತು ಕೋತಿ ಮರಿ.
ಟಿಜಿ-೩೩೭ ವಿಮಾನದಲ್ಲಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವ್ಯಕ್ತಿಯು ಅಕ್ರಮವಾಗಿ ಹಲವು ಪ್ರಾಣಿಗಳನ್ನು ಸಾಗಿಸುತ್ತಿದ್ದಾರೆ ಎಂಬ ಕುರಿತು ನಿಖರ ಮಾಹಿತಿ ಪಡೆದ ಕಸ್ಟಮ್ಸ್ ಅಧಿಕಾರಿಗಳು, ಬ್ಯಾಗ್ ಪರಿಶೀಲಿಸಿದ್ದಾರೆ. ಆಗ ಬ್ಯಾಗ್‌ನಲ್ಲಿ ಒಂದು ಡಿ ಬ್ರಾಜಾ ಕೋತಿ, 15 ಕಿಂಗ್ ಸ್ನೇಕ್ಸ್, ಐದು ಹೆಬ್ಬಾವಿನ ಮರಿಗಳು ಪತ್ತೆಯಾಗಿವೆ. ಕೂಡಲೇ ಅಧಿಕಾರಿಗಳು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಅನಿಮಲ್ಸ್ ಕ್ವಾರಂಟೈನ್ ಅಂಡ್ ಸರ್ಟಿಫಿಕೇಷನ್ ಸರ್ವಿಸಸ್ (ಎಕ್ಯುಸಿಎಸ್) ಜತೆ ಮಾತನಾಡಿದ ಬಳಿಕ ಏರ್ಪೋರ್ಟ್ ಅಧಿಕಾರಿಗಳು ಥಾಯ್ ಏರ್‌ವೇಸ್‌ನ ವಿಮಾನದ ಮೂಲಕ ಅವುಗಳ ಮೂಲ ದೇಶಕ್ಕೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಹಣಕ್ಕಾಗಿ ಬೇರೆ ದೇಶಗಳಿಂದ ಪ್ರಾಣಿಗಳನ್ನು ಅಕ್ರಮವಾಗಿ ತಂದು ಮಾರಾಟ ಮಾಡುವುದು ವ್ಯಕ್ತಿಯ ಉದ್ದೇಶವಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ವಿಷಕಾರಿ ಹಾವುಗಳ ಕಡಿತಕ್ಕೆ ಬೆಂಗಳೂರಿನಲ್ಲಿ ಸಿಗಲಿದೆ ಜೀವರಕ್ಷಕ ʻಪ್ರತಿವಿಷʼ