ನವ ದೆಹಲಿ: 17 ವರ್ಷದ ಹುಡುಗನೊಬ್ಬ ತನ್ನ ತಂದೆಗೆ ಲಟ್ಟಣಿಗೆಯಿಂದ ಹೊಡೆದು ಕೊಂದಿದ್ದಾನೆ. ಪ್ರತಿದಿನ ಅಪ್ಪ ಮನೆಗೆ ಬಂದು ತನ್ನ ಪ್ರೀತಿಯ ಅಮ್ಮನಿಗೆ ಹೊಡೆಯುತ್ತಿದ್ದುದನ್ನು, ನಿಂದಿಸುತ್ತಿದ್ದುದನ್ನು, ದೌರ್ಜನ್ಯ ಎಸಗುತ್ತಿದ್ದುದನ್ನು ನೋಡಿ ರೋಸಿ ಹೋಗಿದ್ದ ಹುಡುಗ, ತಾಳ್ಮೆಗೆಟ್ಟು ತಂದೆಯ ಉಸಿರನ್ನೇ ನಿಲ್ಲಿಸಿದ್ದಾನೆ. ಮೃತ ವ್ಯಕ್ತಿಗೆ 42 ವರ್ಷವಾಗಿದ್ದು, ರೈಲ್ವೆ ರಕ್ಷಣಾ ವಿಶೇಷ ಪಡೆ (RPSF)ಯಲ್ಲಿ ಕಾನ್ಸ್ಟೆಬಲ್ ಆಗಿದ್ದ.
ಈ ಘಟನೆ ದೆಹಲಿಯ ಸರೈ ರೊಹಿಲ್ಲಾ ಎಂಬ ಏರಿಯಾದಲ್ಲಿ 15 ದಿನಗಳ ಹಿಂದೆ. ಆದರೆ ಈಗ ಬೆಳಕಿಗೆ ಬಂದಿದೆ. ಹುಡುಗನನ್ನು ಪೊಲೀಸರು ಅರೆಸ್ಟ್ ಮಾಡಿ, ವಿಚಾರಣೆಗೆ ಒಳಪಡಿಸಿದ್ದಾರೆ. ‘ನನಗೆ ಅಪ್ಪನನ್ನು ಕೊಲ್ಲುವ ಆಶಯ ಇರಲಿಲ್ಲ. ಆದರೆ ಸದಾ ಅಮ್ಮನನ್ನು ನಿಂದಿಸುತ್ತಿದ್ದ ಅವನಿಗೆ ಬುದ್ಧಿ ಕಲಿಸಲು ಬಯಸಿದ್ದೆ’ ಎಂದು ಪೊಲೀಸರಿಗೆ ಹುಡುಗ ಹೇಳಿದ್ದಾರೆ. ಅಂದಹಾಗೇ, ಈತ ತನ್ನ ತಂದೆಗೆ ಲಟ್ಟಣಿಗೆಯಿಂದ ಹೊಡೆದದ್ದು ಒಂದೆರಡು ಏಟಲ್ಲ, 20 ಹೊಡೆತಗಳನ್ನು ಕೊಟ್ಟಿದ್ದಾನೆ.
ಆಗಸ್ಟ್ 22ರಂದು ಕಾನ್ಸ್ಟೆಬಲ್ ತನ್ನ ಡ್ಯೂಟಿ ಮುಗಿಸಿ, ಕಂಠಪೂರ್ತಿ ಕುಡಿದು ಮನೆಗೆ ಬಂದ. ಹೀಗೆ ಬಂದವನೇ ಎಂದಿನಂತೆ ತನ್ನ ಪತ್ನಿಗೆ ಹೊಡೆಯಲು, ಕೂಗಾಡಲು ಪ್ರಾರಂಭಿಸಿದ. ಅಲ್ಲಿಯೇ ಇದ್ದ ಮಗ ಹೊಡೆದ. ವಿಪರೀತ ಹೊಡೆತ ಬಿದ್ದಿದ್ದರಿಂದ ತಂದೆ ಎಚ್ಚರತಪ್ಪಿದ್ದ. ಅಲ್ಲಿಂದ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಮೃತಪಟ್ಟಿದ್ದಾನೆ. ಹಾಗೇ, ‘ಅತಿಯಾಗಿ ಹೊಡೆತ ಬಿದ್ದಿದ್ದರಿಂದ ಗಂಭೀರ ಸ್ವರೂಪದ ಗಾಯವಾಗಿಯೇ ಈತ ಮೃತಪಟ್ಟಿದ್ದಾಗಿ ಪೋಸ್ಟ್ಮಾರ್ಟಮ್ ವರದಿಯಲ್ಲಿ ಉಲ್ಲೇಖವಾಗಿದೆ.
ಪೊಲೀಸರು ಈ ಹತ್ಯೆ ಪ್ರಕರಣವನ್ನು ತನಿಖೆ ನಡೆಸಿದ್ದಾರೆ. ಕಾನ್ಸ್ಟೆಬಲ್ನ ಕುಟುಂಬದ ಇನ್ನೂ ಹಲವರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ‘ಈತ ಸದಾ ಮದ್ಯಸೇವನೆ ಮಾಡಿಯೇ ಮನೆಗೆ ಬರುತ್ತಿದ್ದ. ಪತ್ನಿ ಮತ್ತು ವಯಸ್ಸಿಗೆ ಬಂದ ಪುತ್ರನ ಮೇಲೆ ಹಲ್ಲೆ ನಡೆಸುತ್ತಿದ್ದ. ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಿದ್ದ’ ಎಂದೇ ಎಲ್ಲರೂ ಹೇಳಿದ್ದಾರೆ. ಇನ್ನು ತಂದೆಯನ್ನು ಕೊಂದ ಬಾಲಕನಿಗೆ ಯಾವುದೇ ಕ್ರಿಮಿನಲ್ ಹಿಸ್ಟರಿಯಿಲ್ಲ. 12 ನೇ ತರಗತಿಯಲ್ಲಿ ಓದುತ್ತಿದ್ದಾನೆ ಎಂಬುದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.
ಇದನ್ನೂ ಓದಿ: ಕೆಜಿ ಹಳ್ಳಿ ಕಾಲೇಜು ವಿದ್ಯಾರ್ಥಿ ಕೊಲೆಗೆ ಬಳಕೆ ಆಗಿದ್ದು PEN WEAPON! ಬೆಂಗಳೂರಿಗೇ ಇದು ಹೊಸ ಪರಿಚಯ!