ಚಂಡೀಗಢ: ಏನೇ ಕಷ್ಟ ಬಂದರೂ ಮಕ್ಕಳ ಗಮನಕ್ಕೆ ತರದೆ, ಜೇಬಿನಲ್ಲಿ ಕಡಿಮೆ ಹಣವಿದ್ದರೂ ಯಾವುದೇ ಕೊರತೆ ಬಾರದಂತೆ ನೋಡಿಕೊಂಡು, ಹೊಟ್ಟೆ-ಬಟ್ಟೆ ಕಟ್ಟಿ ಮಕ್ಕಳನ್ನು ತಂದೆ-ತಾಯಿ ದೊಡ್ಡವರನ್ನಾಗಿ ಮಾಡುತ್ತಾರೆ. ನೂರು ಕಷ್ಟ ಬಂದರೂ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ. ಸಮಾಜದಲ್ಲಿ ನಮ್ಮ ಮಗನೂ ಒಳ್ಳೆಯ ವ್ಯಕ್ತಿಯ, ಉನ್ನತ ಹುದ್ದೆಯಲ್ಲಿ ಇರಲಿ ಎಂದು ಮನದುಂಬಿ ಆಶೀರ್ವಾದ ಮಾಡುತ್ತಾರೆ. ಆದರೆ, ಪಾಲಕರ ತ್ಯಾಗದಿಂದಲೇ ಜೀವನ ರೂಪಿಸಿಕೊಳ್ಳುವ ಮಕ್ಕಳು ಅವರನ್ನು ಕೊನೆಯ ದಿನಗಳಲ್ಲಿ ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಮೂರು ಹೊತ್ತು ಊಟ ಹಾಕಿ, ಅವರನ್ನು ಸಾಕಿ ಸಲಹುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ತನ್ನ ಬಳಿ 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದ್ದರೂ ತಂದೆ-ತಾಯಿಗೆ ಮೂರು ಹೊತ್ತು ಊಟ ಹಾಕದ ಮಗನ ವರ್ತನೆಯಿಂದ ಬೇಸತ್ತು ದಂಪತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹರಿಯಾಣದ ಚರ್ಕಿ ದಾದ್ರಿಯಲ್ಲಿರುವ ಶಿವ ಕಾಲೋನಿಯ ನಿವಾಸದಲ್ಲಿ ಜಗದೀಶ್ ಚಂದ್ರ ಆರ್ಯ (78) ಹಾಗೂ ಭಾಗ್ಲಿ ದೇವಿ (77) ಅವರು ಸಲ್ಫಾಸ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರ್ಚ್ 29ರ ರಾತ್ರಿ ಇಬ್ಬರೂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಗನ ವರ್ತನೆಯಿಂದ ಬೇಸತ್ತ ಅವರು, ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ, ತಾವು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
ಡೆತ್ ನೋಟ್‌ನಲ್ಲಿ ಭಯಾನಕ ಮಾಹಿತಿ ಬಹಿರಂಗ
ಸಲ್ಫಾಸ್ ಮಾತ್ರೆಗಳನ್ನು ಸೇವಿಸುವ ಮೊದಲು ಜಗದೀಶ್ ಚಂದ್ರ ಆರ್ಯ ಅವರು ಡೆತ್‌ನೋಟ್ ಬರೆದಿದ್ದು, ಹಲವು ಭಯಾನಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. “ನನ್ನ ಮಗ ವೀರೇಂದರ್ 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ ನಮಗೆ ಮೂರು ಹೊತ್ತು ಊಟ ಹಾಕುತ್ತಿಲ್ಲ. ನನ್ನ ಹೆಂಡತಿಗೆ ಪಾರ್ಶ್ವವಾಯು ಆಗಿದ್ದು, ಕಷ್ಟ ಅನುಭವಿಸುತ್ತಿದ್ದಳು. ಹೀಗಿದ್ದರೂ, ನನ್ನ ಮಗ ನಮ್ಮನ್ನು ನೋಡಿಕೊಳ್ಳದ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ” ಎಂಬುದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.
“ನಾವು ಕೆಲವು ವರ್ಷಗಳ ಹಿಂದೆ ನಮ್ಮ ಇನ್ನೊಬ್ಬ ಮಗನ ಮನೆಯಲ್ಲಿ ವಾಸಿಸುತ್ತಿದ್ದೆವು. ಕೆಲ ವರ್ಷದ ಹಿಂದೆ ಆ ಮಗ ತೀರಿಕೊಂಡ. ಇದಾದ ಬಳಿಕ ನಾವು ಸೊಸೆಯ ಮನೆಯಲ್ಲಿ ಇದ್ದೆವು. ಆದರೆ, ಪತಿಯನ್ನು ಕಳೆದುಕೊಂಡಿದ್ದ ಸೊಸೆಯೂ ನಮ್ಮನ್ನು ಮನೆಯಿಂದ ಹೊರಗೆ ಹಾಕಿದಳು. ಹಾಗಾಗಿ ನಾವು ವೀರೇಂದರ್‌ನ ಮನೆಗೆ ಬಂದು ವಾಸಿಸಲು ಆರಂಭಿಸಿದೆವು. ಆದರೆ, ಕೋಟ್ಯಧೀಶನಾದರೂ ವೀರೇಂದರ್ ನಮಗೆ ಊಟ ಹಾಕುತ್ತಿರಲಿಲ್ಲ. ನನ್ನ ಹೆಂಡತಿಗೆ ಪಾರ್ಶ್ವವಾಯು ಆದರೂ ಚಿಕಿತ್ಸೆ ಕೊಡಲಿಲ್ಲ. ಇದೆಲ್ಲ ಕಾರಣದಿಂದ ಬೇಸತ್ತು ನಾವು ಇಂತಹ ತೀರ್ಮಾನ ತೆಗೆದುಕೊಂಡಿದ್ದೇವೆ. ನಮ್ಮ ಸಾವಿಗೆ ನನ್ನ ಮಗ ಹಾಗೂ ಇಬ್ಬರು ಸೊಸೆಯಂದಿರೇ ಕಾರಣ” ಎಂಬುದಾಗಿ ಜಗದೀಶ್ ಚಂದ್ರ ಆರ್ಯ ಅವರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Suicide Case: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ 21ರ ಮಹಿಳೆ; ಕೌಟುಂಬಿಕ ಕಲಹ ಶಂಕೆ