Site icon Vistara News

Soujanya Muder Case: ಸಿನಿಮಾ ಆಗಲಿದೆ ಸೌಜನ್ಯ ಕೇಸ್‌; ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್?

Story Of Soujanya Tittle Registered

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿದ್ದ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ (Soujanya Muder Case ) ಪ್ರಕರಣದಲ್ಲಿ ಆರೋಪಿ ಸಂತೋಷ್‌ ರಾವ್‌ನನ್ನು ಸಿಬಿಐ ವಿಶೇಷ ನ್ಯಾಯಾಲಯ (CBI Special court) ದೋಷಮುಕ್ತಗೊಳಿಸಿ ಬಿಡುಗಡೆ ಮಾಡಿದೆ. ಕೊಲೆಗಾರ ಎನ್ನುವುದಕ್ಕೆ ಸೂಕ್ತವಾದ ಸಾಕ್ಷ್ಯಾಧಾರಗಳು ಇಲ್ಲದೆ ಇರುವುದರಿಂದ ಆತನನ್ನು ಬಿಡುಗಡೆ ಮಾಡಲಾಡುತ್ತಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಸಿ.ಬಿ ಅವರು ನೀಡಿರುವ ತೀರ್ಪಿನಲ್ಲಿ ತಿಳಿಸಲಾಗಿದೆ. ಇದರ ಬೆನ್ನಲ್ಲೇ ಇದೇ ಪ್ರಕರಣ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ವಿಚಾರ ಸಾಕಷ್ಟು ಕುತೂಹಲ ಮೂಡಿಸಿದೆ.

ಸೌಜನ್ಯ ಅವರ ಜೀವನ ಆಧರಿಸಿ ಸಿನಿಮಾ ಮಾಡಲಾಗುತ್ತಿದೆ ಎನ್ನಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಟೈಟಲ್ ನೋಂದಣಿ ಆಗಿದೆ. ಜಿಕೆ ವೆಂಚರ್ಸ್ ಈ ಟೈಟಲ್ ನೋಂದಣಿ ಮಾಡಿಸಿದೆ. ವಿ. ಲವ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಾಮಾಜಿಕ ಕಥಾ ಹಂದರ ಹೊಂದಿರಲಿದೆ. ಈ ಚಿತ್ರ ಕನ್ನಡದಲ್ಲಿ ಮಾತ್ರ ಸಿದ್ಧವಾಗಲಿದೆ.

ಇದನ್ನೂ ಓದಿ: Soujanya muder case : ಧರ್ಮಸ್ಥಳದ ಸೌಜನ್ಯ ಕೊಲೆ, ಅತ್ಯಾಚಾರ ಪ್ರಕರಣ; ಸಂತೋಷ್‌ ರಾವ್‌ ಖುಲಾಸೆ

ಏನಿದು ಪ್ರಕರಣ?

ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ಇರುವ ಪಾಂಗಾಳ ನಿವಾಸಿಗಳಾದ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಪುತ್ರಿಯಾಗಿರುವ ಸೌಜನ್ಯಳ ಕೊಲೆ 2012ರ ಅಕ್ಟೋಬರ್‌ 9ರಂದು ಸಂಜೆ ನಡೆದಿತ್ತು. ಉಜಿರೆ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಆಕೆ ಅಂದು ಸಂಜೆ ಕಾಲೇಜಿನಿಂದ ಬಂದು ನೇತ್ರಾವತಿ ಸ್ನಾನ ಘಟ್ಟದ ಬಳಿ ಇಳಿದು ಮನೆ ಕಡೆಗೆ ಹೋಗಿದ್ದಳು.

ಆದರೆ, ಆಕೆ ಮನೆ ತಲುಪಿರಲಿಲ್ಲ. ರಾತ್ರಿಯಾದರೂ ಮಗಳು ಮನೆಗೆ ಬರಲಿಲ್ಲ ಎಂದು ಮನೆ ಮಂದಿ ಆತಂಕದಿಂದ ಹುಡುಕಾಡಿದ್ದರು. ಆಕೆ ಪಾಂಗಾಳದ ಮನೆ ಕಡೆ ಹೋಗಿರುವುದನ್ನು ಹಲವರು ಗಮನಿಸಿದ್ದರು. ಹೀಗಾಗಿ ಮನೆಗೆ ಹೋಗುವ ದಾರಿಯಲ್ಲಿ ಏನೋ ಅವಘಡ ನಡೆದಿದೆ ಎಂಬ ಸಂಶಯದಲ್ಲಿ ಹುಡುಕಾಟ ನಡೆಸಿದ್ದರು. ಇಡೀ ರಾತ್ರಿ ಹುಡುಕಾಡಿದರೂ ಆಕೆ ಸಿಕ್ಕಿರಲಿಲ್ಲ. ಆದರೆ ಮರುದಿನ ರಾತ್ರಿ ಮಣ್ಣಸಂಕ ಎಂಬಲ್ಲಿ ವಿದ್ಯಾರ್ಥಿನಿ ಸೌಜನ್ಯಳ ಮೃತದೇಹ ಸಿಕ್ಕಿತ್ತು. ಬೆಳ್ತಂಗಡಿಯ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಕೇಸ್ ದಾಖಲಾಗಿತ್ತು.

ಈ ನಡುವೆ, ಈ ಕೊಲೆಯ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದೆಲ್ಲ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆಕೆ ನಾಪತ್ತೆಯಾದ ದಿನ ವಿಪರೀತ ಮಳೆ ಬಂದಿದ್ದು, ಅದರ ನಡುವೆಯೇ ಸಾವಿರಾರು ಮಂದಿ ಆಕೆಗಾಗಿ ಹುಡುಕಾಟ ನಡೆಸಿದ್ದರು. ಆದರೆ, ಅವರೆಲ್ಲರೂ ಹುಡುಕಾಡಿದ ಪ್ರದೇಶದ ಅನತಿ ದೂರದಲ್ಲೇ ಆಕೆಯ ಶವ ಪತ್ತೆಯಾಗಿದ್ದು ಹಲವು ರೀತಿಯ ಸಂಶಯಕ್ಕೆ ಕಾರಣವಾಗಿತ್ತು.

ಈ ನಡುವೆ, ಎರಡು ದಿನಗಳ ಬಳಿಕ ಧರ್ಮಸ್ಥಳದ ಬಾಹುಬಲಿ ಬೆಟ್ಟದ ಬಳಿ ಅನುಮಾನಾಸ್ಪದ ರೀತಿಯಲ್ಲಿ ಒಬ್ಬ ಯುವಕ ಸಿಕ್ಕಿಬಿದ್ದಿದ್ದು, ಆತನನ್ನು ಬೆನ್ನಟ್ಟಿ ಬಂಧಿಸಲಾಗಿತ್ತು. ಆತನ ಮೇಲೆ ಸಂಶಯದಲ್ಲಿ ವಿಚಾರಿಸಲಾಗಿತ್ತು. ಅಂತಿಮವಾಗಿ ಕುಕ್ಕುಂದೂರು ಮೂಲದ ಆತನೇ ಸೌಜನ್ಯಳನ್ನು ಕೊಲೆ ಮಾಡಿದ್ದಾಗಿ ಪೊಲೀಸರು ತೀರ್ಮಾನಕ್ಕೆ ಬಂದಿದ್ದರು.

ಇದನ್ನೂ ಓದಿ: Dr D Veerendra Heggade : ಸೌಜನ್ಯ ಪ್ರಕರಣದಲ್ಲಿ ಮೌನ ಮುರಿದ ಡಾ. ಹೆಗ್ಗಡೆ; ವೈಯಕ್ತಿಕ ನಿಂದನೆ ನಿಲ್ಲಿಸಿ ಎಂದು ಎಚ್ಚರಿಕೆ

ಆದರೆ, ಸಂತೋಷ್‌ ರಾವ್‌ ಕೊಲೆಗಾರನಲ್ಲ. ಆತನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಪ್ರಭಾವಿಗಳ ಕೈವಾಡವೇ ಇದರಲ್ಲಿ ಮುಖ್ಯವಾಗಿರುವುದು. ಅವರನ್ನು ಬಂಧಿಸಬೇಕು ಎಂಬ ಕೂಗು ಕೇಳಿಬಂದಿತ್ತು. ದೊಡ್ಡ ಮಟ್ಟದ ಪ್ರತಿಭಟನೆಗಳು ನಡೆದಿದ್ದವು. ಈ ಬೇಡಿಕೆ ಜೋರಾಗುತ್ತಿದ್ದಂತೆಯೇ ಆಗ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸಿದ್ದರಾಮಯ್ಯ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು.

Exit mobile version