ಮುಂಬೈ: ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಚಿನ್ನಾಭರಣ ವ್ಯಾಪಾರಿಗಳ ಮನೆಯಲ್ಲಿ ದರೋಡೆ ಮಾಡುವ, ಅಕ್ಷಯ್ ಕುಮಾರ್, ಅನುಪಮ್ ಖೇರ್ ಸೇರಿ ಹಲವರು ನಟಿಸಿರುವ ಸ್ಪೆಷಲ್ 26 (Special 26) ಸಿನಿಮಾ ಶೈಲಿಯಲ್ಲಿಯೇ ಮುಂಬೈನಲ್ಲಿ 36 ಲಕ್ಷ ರೂ. ದರೋಡೆ ಮಾಡಲಾಗಿದೆ. ಪಿಡಬ್ಲ್ಯೂಡಿ ನಿವೃತ್ತ ನೌಕರರೊಬ್ಬರ ಮನೆಗೆ ಭ್ರಷ್ಟಾಚಾರ ನಿಗ್ರಹ ದಳದ (ACB) ಅಧಿಕಾರಿಗಳ ಸೋಗಿನಲ್ಲಿ ಆರು ಜನ ನುಗ್ಗಿ ನಗದು, ಚಿನ್ನ ಸೇರಿ 36 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದಾರೆ.
ನವಿ ಮುಂಬೈನಲ್ಲಿರುವ ಕಾಂತಿಲಾಲ್ ಯಾದವ್ ಎಂಬ ನಿವೃತ್ತ ಅಧಿಕಾರಿ ಮನೆಗೆ ಜುಲೈ 21ರಂದು ಎಸಿಬಿ ಅಧಿಕಾರಿಗಳ ಸೋಗಿನಲ್ಲಿ ಆರು ಜನ ತೆರಳಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಎಂದು ಮನೆಯವರನ್ನು ಹೆದರಿಸಿದ್ದಾರೆ. ನಿಮ್ಮ ವಿರುದ್ಧ ಕೇಸ್ ದಾಖಲಾಗಿದೆ, ಹಾಗಾಗಿ ದಾಳಿ ಮಾಡಿದ್ದೇವೆ ಎಂದು ತಂಡದಲ್ಲಿದ್ದ ಒಬ್ಬನು ಹೆದರಿಸಿದ್ದಾನೆ. ದಾಳಿ ಹೆಸರಿನಲ್ಲಿ ಮನೆಯಲ್ಲಿದ್ದ ನಗದು, ಚಿನ್ನಾಭರಣ ಸೇರಿ ಹಲವು ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದಾರೆ.
ಜುಲೈ 21ರ ಮಧ್ಯಾಹ್ನವೇ ಇವರ ಮನೆಗೆ ದುಷ್ಕರ್ಮಿಗಳು ನುಗ್ಗಿದ್ದಾರೆ. ಕಾಂತಿಲಾಲ್ ಯಾದವ್ ಹಾಗೂ ಅವರ ಪತ್ನಿಯ ಮೊಬೈಲ್‌ಗಳನ್ನು ಪಡೆದು, ಅವುಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ. ಅವರಿಂದಲೇ ಕಬೋರ್ಡ್ ಕೀಗಳನ್ನು ಪಡೆದು, ಎಲ್ಲ ಹಣ, ಚಿನ್ನಾಭರಣ ದೋಚಿದ್ದಾರೆ. ಇದೇ ವೇಳೆ ಅನುಮಾನ ಬಂದ ಹಿನ್ನೆಲೆಯಲ್ಲಿ ಕಾಂತಿಲಾಲ್ ಅವರು ಗುರುತಿನ ಚೀಟಿ ತೊರಿಸುವಂತೆ ದರೋಡೆಕೋರರಿಗೆ ತಿಳಿಸಿದ್ದಾರೆ. ಆದರೆ, ದಾಳಿ ಬಳಿಕ ತೋರಿಸುವುದಾಗಿ ದರೋಡೆಕೋರರ ನಾಯಕ ತಿಳಿಸಿದ್ದಾನೆ. ದರೋಡೆ ಬಳಿಕ ಅವರು ಪರಾರಿಯಾಗಿದ್ದಾರೆ.
ಏನೇನು ದರೋಡೆ?
ಕಾಂತಿಲಾಲ್ ಯಾದವ್ ಅವರ ಮೂರು ಬೆಡ್‌ರೂಮ್‌ಗಳುಳ್ಳ ಫ್ಲ್ಯಾಟ್‌ನಲ್ಲಿ 25.25 ಲಕ್ಷ ರೂ. ನಗದು, 3.8 ಲಕ್ಷ ರೂ. ಮೌಲ್ಯದ ಚಿನ್ನದ ಸರ, 4.20 ಲಕ್ಷ ರೂ. ಮೌಲ್ಯದ ಬ್ರೇಸ್‌ಲೆಟ್, 40 ಸಾವಿರ ರೂ. ಮೌಲ್ಯದ ವಜ್ರ ಸೇರಿ ಹಲವು ವಸ್ತುಗಳನ್ನು ದರೋಡೆ ಮಾಡಿದ್ದಾರೆ. ಇದಾದ ಬಳಿಕ ಕಾಂತಿಲಾಲ್ ಅವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ತೆಲಂಗಾಣದ ಸಿಕಂದರಾಬಾದ್‌ನಲ್ಲೂ ಚಿನ್ನಾಭರಣ ಮಳಿಗೆಗೆ ಐಟಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ 60 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದರು.