ಮುಂಬಯಿ: 16 ವರ್ಷದ ಮಲಮಗಳ ಮೇಲೆ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅತ್ಯಾಚಾರ ಮಾಡಿ, ಆಕೆಯನ್ನು ಗರ್ಭವತಿಯಾಗಿಸಿದ 41ವರ್ಷದ ಪುರುಷನಿಗೆ ಮುಂಬಯಿ ವಿಶೇಷ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ಇದೊಂದು ಅಪರೂಪದ ಪ್ರಕರಣ. ಇಲ್ಲಿ ಆ ವ್ಯಕ್ತಿಗೆ ಶಿಕ್ಷೆಯಾಗದಂತೆ ತಡೆಯಲು ಸಂತ್ರಸ್ತೆ ಮತ್ತು ಆಕೆಯ ಅಮ್ಮ ಇಬ್ಬರೂ ಪ್ರಯತ್ನ ಪಟ್ಟಿದ್ದರು. ಇಡೀ ಮನೆಗೆ ಜೀವನಾಧಾರವೇ ಆ ಪುರುಷ, ಆತ ದುಡಿಯದೆ ಇದ್ದರೆ ಬದುಕು ನಡೆಯುವುದಿಲ್ಲ ಎಂಬ ಕಾರಣಕ್ಕೆ ಇವರಿಬ್ಬರೂ ಆತನನ್ನು ಶಿಕ್ಷೆಯಿಂದ ಪಾರು ಮಾಡಲು ನಿರ್ಧಾರ ಮಾಡಿದ್ದರು. ಆದರೆ ಕೋರ್ಟ್ ಗಟ್ಟಿ ನಿಲುವನ್ನು ಪ್ರಕಟಿಸಿದೆ. ಡಿಎನ್ಎ ವರದಿಯೇ ಸಾಕು ಆತನಿಗೆ ಶಿಕ್ಷೆ ನೀಡಲು, ಇನ್ಯಾವುದೇ ಪುರಾವೆಯೂ ಬೇಕಿಲ್ಲ ಎಂದು ಅಭಿಪ್ರಾಯಪಟ್ಟು, 20 ವರ್ಷ ಶಿಕ್ಷೆ ವಿಧಿಸಿದೆ.
ಏನಿದು ಪ್ರಕರಣ?
ಹರೆಯಕ್ಕೆ ಬಂದ ಮಗಳಿದ್ದ ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಳು. ಆತ ತನ್ನ ಮಲಮಗಳ (ಮಹಿಳೆಗೆ ಮೊದಲ ಪತಿಯಿಂದ ಹುಟ್ಟಿದ ಮಗಳು) ಮೇಲೇ ಕಣ್ಣು ಹಾಕಿದ್ದ. 2019ರಿಂದಲೂ ನಿರಂತರವಾಗಿ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಿದ್ದ. ತಡೆದುಕೊಳ್ಳಲು ಸಾಧ್ಯವಾಗದ ಹುಡುಗಿ, 2020ರ ಜೂನ್ನಲ್ಲಿ ಅಮ್ಮನ ಬಳಿ ಈ ವಿಷಯ ಹೇಳಿಕೊಂಡಳು. ಆಗ ತಾಯಿ-ಮಗಳು ಇಬ್ಬರೂ ಪೊಲೀಸರಿಗೆ ದೂರು ಕೊಟ್ಟಿದ್ದರು. ಬಳಿಕ ಹುಡುಗಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಆಗಲೇ ಅವಳು ನಾಲ್ಕು ತಿಂಗಳ ಗರ್ಭಿಣಿ ಎಂಬುದೂ ಗೊತ್ತಾಯಿತು. ಬಳಿಕ ಆಕೆಗೆ ಗರ್ಭಪಾತವೂ ಆಗಿದೆ.
ಈ ಕೇಸ್ನ್ನು ಪೊಲೀಸರು ತನಿಖೆ ಮಾಡಿ ವರದಿಯನ್ನು ಪೋಕ್ಸೋ ವಿಶೇಷ ಕೋರ್ಟ್ಗೆ ಸಲ್ಲಿಸಿದ್ದರು. ಅದಾಗಲೇ ಡಿಎನ್ಎ ಟೆಸ್ಟ್ ಕೂಡ ಆಗಿತ್ತು. ಅದರ ರಿಪೋರ್ಟ್ನ್ನು ಕೂಡ ಪೊಲೀಸರು ನ್ಯಾಯಾಲಯಕ್ಕೆ ನೀಡಿದ್ದರು. ಆದರೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದಂತೆ ಸಂತ್ರಸ್ತೆ ಮತ್ತು ಆಕೆಯ ಅಮ್ಮ ಉಲ್ಟಾ ಹೊಡೆದಿದ್ದರು. ಪ್ರಾಸಿಕ್ಯೂಶನ್ಗೆ ಸಹಕರಿಸಲಿಲ್ಲ. ನಮ್ಮ ಕುಟುಂಬಕ್ಕೆ ಅವನೇ ಆಧಾರ. ಅವನೂ ಜೈಲಿಗೆ ಹೋದರೆ ಒಂದು ಹೊತ್ತಿನ ಊಟಕ್ಕೂ ಕಷ್ಟವಾಗುತ್ತದೆ. ಬದುಕು ನಡೆಸುವುದೇ ದುಸ್ತರವಾಗುತ್ತದೆ ಎಂದು ಹೇಳಿ, ತಾವಿಬ್ಬರೂ ಆತನನ್ನು ಕ್ಷಮಿಸುವುದಾಗಿ ಕೋರ್ಟ್ಗೆ ಹೇಳಿದರು. ಆದರೆ ಕೇಸ್ ವಿಚಾರಣೆ ನಡೆಸಿದ ನ್ಯಾಯಾಧೀಶರು ತಾಯಿ-ಮಗಳ ಹೇಳಿಕೆಯನ್ನು ಪರಿಗಣಿಸಲಿಲ್ಲ.
ಕೋರ್ಟ್ ಆದೇಶದಲ್ಲಿ ಏನಿದೆ?
ಸಾಮಾನ್ಯವಾಗಿ ದೂರು ಕೊಟ್ಟವರು ಅದರಿಂದ ಹಿಂದೆ ಸರಿದರೆ, ಅಲ್ಲಿಗೇ ಕೇಸ್ ಕೂಡ ಮುಕ್ತಾಯವಾಗುತ್ತದೆ. ವಿಚಾರಣೆ ಮುಂದುವರಿಯುವುದಿಲ್ಲ. ಆದರೆ ಇದು ವಿಶೇಷ ಕೇಸ್. ಇಲ್ಲಿ ಸಂತ್ರಸ್ತೆ ಮತ್ತು ಆಕೆಯ ಅಮ್ಮ ದೂರು ವಾಪಸ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರೂ ನ್ಯಾಯಾಧೀಶ ಅನಿಸ್ ಖಾನ್ ಒಪ್ಪಲಿಲ್ಲ. ‘ಸಂತ್ರಸ್ತೆ ಹೊಟ್ಟೆಯಲ್ಲಿದ್ದಿದ್ದ ಭ್ರೂಣದ ತಂದೆ ಈ 41ವರ್ಷದ ವ್ಯಕ್ತಿಯೇ ಎಂಬುದು ಡಿಎನ್ಎ ವರದಿಯಲ್ಲಿ ಸಾಬೀತಾಗಿದೆ. ಇದೊಂದು ಅತ್ಯಂತ ಹೀನಾಯ ಕೃತ್ಯ. ಇದರಲ್ಲಿ ಸಂತ್ರಸ್ತೆ ಇನ್ನೂ ಅಪ್ರಾಪ್ತೆ. ಮೊದಲು ದೂರು ಕೊಟ್ಟಿದ್ದ ಸಂತ್ರಸ್ತ ಹುಡುಗಿ ಮತ್ತು ಆಕೆಯ ಅಮ್ಮ ನಂತರ ಪ್ರಾಸಿಕ್ಯೂಶನ್ಗೆ ಸಹಕರಿಸಲಿಲ್ಲ. ಪ್ರತಿಕೂಲವಾಗಿ ವರ್ತಿಸಿ, ಹೇಳಿಕೆಗಳನ್ನು ನೀಡಿದರು. ಆದರೆ ಡಿಎನ್ಎ ಪರೀಕ್ಷೆ ವರದಿ ಈತ ಆರೋಪಿ ಎಂಬುದನ್ನು ಸಾಬೀತುಮಾಡಿದೆ. ಹಾಗಾಗಿ ಯಾವುದೇ ಅನುಮಾನಗಳೂ ಉಳಿದಿಲ್ಲ’ ಎಂದು ಅನಿಸ್ ಖಾನ್ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Teacher Assaulted | ಪೋಷಕರಿಗೆ ದೂರು ಹೇಳಿದ್ದಕ್ಕೆ 5 ತಿಂಗಳು ಗರ್ಭಿಣಿ ಶಿಕ್ಷಕಿಯನ್ನೇ ತಳ್ಳಾಡಿದ ವಿದ್ಯಾರ್ಥಿಗಳು!