ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿಕೃತ ಪ್ರೇಮಿಯೊಬ್ಬ ತಾನು ಪ್ರೀತಿಸುತ್ತಿದ್ದವಳಿಗೇ 13 ಬಾರಿ ಚಾಕು (Man Stabs Woman) ಇರಿದಿದ್ದಾನೆ. ಕಳೆದ ಎರಡು ದಿನಗಳಿಂದ ಯುವತಿಯು ಮಾತು ಬಿಟ್ಟಿದ್ದಳು ಎಂದು ಆಕೆಗೆ ಕಾರಿನಲ್ಲೇ 13 ಬಾರಿ ಚಾಕು ಇರಿಯುವ ಮೂಲಕ ವಿಕೃತಿ ಮರೆದಿದ್ದಾನೆ. ಪ್ರಿಯತಮನಿಂದ ಮಾರಕ ದಾಳಿಗೆ ತುತ್ತಾದ ಯುವತಿಯು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಆಕೆ ಮಾತನಾಡುವ ಸ್ಥಿತಿಯಲ್ಲೂ ಇಲ್ಲ ಎಂದು ತಿಳಿದುಬಂದಿದೆ.
ಯುವತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದವನನ್ನು ಗೌರವ್ ಪಾಲ್ ಎಂದು ಗುರುತಿಸಲಾಗಿದೆ. ದೆಹಲಿಯ ಲಾಡೋ ಸರಾಯ್ ಪ್ರದೇಶದಲ್ಲಿ ಯುವತಿಯು ಕಾರಿನಲ್ಲಿ ಕುಳಿತಾಗ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಸುಮಾರು 13 ಬಾರಿ ಆತ ಚಾಕು ಇರಿದಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಯುವತಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದವನನ್ನು ಕ್ಯಾಬ್ ಚಾಲಕ ಪೊಲೀಸರಿಗೆ ಹಿಡಿದುಕೊಟ್ಟಿದ್ದಾನೆ.
ಅಷ್ಟಕ್ಕೂ ಆಗಿದ್ದೇನು?
23 ವರ್ಷದ ಯುವತಿ ಹಾಗೂ ಗೌರವ್ ಪಾಲ್ ಕಳೆದ ಎರಡೂ ವರ್ಷದಿಂದ ಪ್ರೀತಿಸುತ್ತಿದ್ದರು. ಆರಂಭದಲ್ಲಿ ಇಬ್ಬರೂ ಅನ್ಯೋನ್ಯವಾಗಿದ್ದರು. ಆದರೆ, ಇತ್ತೀಚೆಗೆ ಯುವತಿಯು ಗೌರವ್ ಪಾಲ್ ಮೇಲೆ ಮುನಿಸಿಕೊಂಡಿದ್ದಳು. ಫೋನ್‌ನಲ್ಲಿ ಭಾರಿ ಜಗಳವಾದ ಕಾರಣ ಆಕೆ ಎರಡು ದಿನದಿಂದ ಮಾತು ಬಿಟ್ಟಿದ್ದಳು. ಕೊನೆಗೆ ಯುವತಿಯನ್ನು ಭೇಟಿ ಮಾಡಲು ಬಂದಾಗ ಗೌರವ್ ಪಾಲ್ ಸಮಾಧಾನ ಮಾಡುವ ಬದಲು ಜಗಳ ಆಡಿದ್ದಾನೆ. ಇದರಿಂದ ಬೇಸರಗೊಂಡ ಯುವತಿಯು ಕ್ಯಾಬ್ ಬುಕ್ ಮಾಡಿದ್ದಾಳೆ.
ಇದನ್ನೂ ಓದಿ: Murder Case: ಬೆಂಗಳೂರಲ್ಲಿ ಹಳೆ ದ್ವೇಷಕ್ಕೆ ಯುವಕನ ಭೀಕರ ಹತ್ಯೆ
ಯುವತಿ ಇದ್ದ ಸ್ಥಳಕ್ಕೆ ಕ್ಯಾಬ್ ಬಂದಿದ್ದು, ನಿನ್ನ ಸಹವಾಸ ಸಾಕು ಎಂದು ಯುವತಿಯು ಗೌರವ್ ಪಾಲ್‌ಗೆ ಬೈದು ಕಾರು ಹತ್ತಿದ್ದಾಳೆ. ಇದರಿಂದ ಮತ್ತಷ್ಟು ಕುಪಿತಗೊಂಡ ಗೌರವ್ ಪಾಲ್, ಸತತವಾಗಿ 13 ಬಾರಿ ಚಾಕು ಇರಿದಿದ್ದಾನೆ. ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.