ಬೆಳಗಾವಿ: ಇಲ್ಲಿನ ಮಹಾಂತೇಶ ನಗರದಲ್ಲಿ ಬೀದಿ ನಾಯಿಗಳ ದಾಳಿಗೆ (Dog Attack) ನಾಲ್ಕು ಮಕ್ಕಳಿಗೆ ಗಾಯಗಳಾಗಿವೆ. ಗಾಯಗೊಂಡ ನಾಲ್ಕೂ ಮಕ್ಕಳಿಗೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಮನೆಯ ಮುಂದೆ ಆಟ ಆಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ನಾಯಿಗಳು ದಾಳಿ ನಡೆಸಿವೆ. ಮಕ್ಕಳ ಕುತ್ತಿಗೆ, ಕೈ, ಕಾಲು, ತೊಡೆ, ಬೆನ್ನು, ಕಿವಿ ಭಾಗಕ್ಕೆ ನಾಯಿಗಳೂ ಕಚ್ಚಿವೆ. ಕೂಡಲೇ ಸ್ಥಳೀಯರು ಮಕ್ಕಳ ರಕ್ಷಣೆಗೆ ಧಾವಿಸಿ ನಾಯಿಗಳನ್ನು ಓಡಿಸಿದ್ದಾರೆ.
ನಾಯಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಸ್ಥಳೀಯ ಆಡಳಿತಕ್ಕೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೋರ್ಟ್‌ನಲ್ಲಿ ಸಾಕ್ಷಿ ಹೇಳಬೇಡ ಅಂತ ಆವಾಜ್ ಹಾಕಿ ತಾನೇ ಕೊಲೆಯಾದ ರೌಡಿ
ಆನೇಕಲ್: ಕೋರ್ಟ್‌ನಲ್ಲಿ ತನ್ನ ಎದುರು ಸಾಕ್ಷಿ ಹೇಳದಂತೆ ಆವಾಜ್ ಹಾಕಲು ಹೋದ ರೌಡಿ ಶೀಟರ್ (Rowdy sheeter) ಒಬ್ಬನನ್ನು ಇರಿದು (Murder Case) ಕೊಲ್ಲಲಾಗಿದೆ. ಬೆಂಗಳೂರು ಹೊರವಲಯದ (Bangalore rural) ಆನೇಕಲ್ ಪಟ್ಟಣದ ವೀವರ್ಸ್ ಕಾಲೋನಿಯಲ್ಲಿ ಘಟನೆ ನಡೆದಿದೆ.
ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ಕೊಲೆ ನಡೆದಿದೆ. ಆನೇಕಲ್ ಪಟ್ಟಣ ಮಂಜುನಾಥ್ ಅಲಿಯಾಸ್ ಮೆಂಟಲ್ ಮಂಜ ಕೊಲೆಯಾದ ರೌಡಿ ಶೀಟರ್. ಶಶಿಕುಮಾರ್, ವಿಜಯ್ ಅಲಿಯಾಸ್ ಟ್ಯಾಟೂ ವಿಜಿ ಕೊಲೆ ಮಾಡಿದ ಆರೋಪಿಗಳು.
ಮೆಂಟಲ್ ಮಂಜ ಕಳೆದ ಆರೇಳು ತಿಂಗಳಿನ ಹಿಂದೆ ಮನೆಯೊಂದಕ್ಕೆ ನುಗ್ಗಿ ಗಲಾಟೆ ಮಾಡಿದ್ದ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ಕೇಸ್ ದಾಖಲಾಗಿತ್ತು. ಈ ಪ್ರಕರಣಕ್ಕೆ ವಿಜಯ್ ಅಲಿಯಾಸ್ ಟ್ಯಾಟೂ ವಿಜಿ ಎಂಬಾತ ಸಾಕ್ಷಿ ಆಗಿದ್ದ. ನಿನ್ನೆ ಟ್ಯಾಟೂ ವಿಜಿಗೆ ಪೋನ್ ಮಾಡಿ, ಕೋರ್ಟ್‌ನಲ್ಲಿ ಸಾಕ್ಷಿ ಹೇಳದಂತೆ ಮೆಂಟಲ್ ಮಂಜ ಅವಾಜ್ ಹಾಕಿದ್ದ.
ಈ ಬಗ್ಗೆ ಫೋನ್‌ನಲ್ಲಿಯೇ ಮೆಂಟಲ್ ಮಂಜ ಮತ್ತು ಟ್ಯಾಟೂ ವಿಜಿ ನಡುವೆ ವಾಗ್ಯುದ್ಧ ಹಾಗೂ ಅವಾಚ್ಯ ಬೈಗುಳಗಳ ವಿನಿಮಯ ನಡೆದಿತ್ತು. ಕೆರಳಿದ ಮೆಂಟಲ್ ಮಂಜ ಹುಡುಗರ ಜೊತೆ ಟ್ಯಾಟೂ ವಿಜಿ ಮನೆ ಬಳಿ ಹೋಗಿದ್ದ. ಏರಿಯಾದ ರಸ್ತೆಯಲ್ಲಿ ಟ್ಯಾಟೂ ವಿಜಿಯನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದ.
ಅಷ್ಟು ಹೊತ್ತಿಗೆ ಟ್ಯಾಟೂ ವಿಜಿ ಸ್ನೇಹಿತ ಶಶಿ ಅಲ್ಲಿಗೆ ಬಂದಿದ್ದು, ಎರಡು ಕಡೆಯವರೂ ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡಿದ್ದಾರೆ. ಮೆಂಟಲ್ ಮಂಜನನ್ನು ಹೀಗೇ ಬಿಟ್ಟರೆ ನಮ್ಮನ್ನು ಮುಗಿಸುತ್ತಾನೆ ಎಂದು ಮಂಜನ ಎದೆಗೆ ಟ್ಯಾಟೂ ವಿಜಿ ಮತ್ತು ಶಶಿ ಚಾಕು ಇಳಿಸಿದ್ದರು.
ಮೆಂಟಲ್ ಮಂಜ ಕೆಳಗೆ ಉರುಳಿ ಬೀಳುತ್ತಿದ್ದಂತೆ ಜೊತೆಯಲ್ಲಿದ್ದವರು ಎಸ್ಕೇಪ್ ಆಗಿದ್ದರು. ಕೂಡಲೇ ಆತನನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೆಲ್ತ್‌ಗೆ ಶಿಫ್ಟ್ ಮಾಡುವಾಗ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆ.
ಕೊಲೆ ಮಾಡಿದ ಟ್ಯಾಟೂ ವಿಜಿ ಮತ್ತು ಶಶಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೆಂಟಲ್ ಮಂಜ ಈ ಹಿಂದೆ ಎಂಟಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಕೊಲೆ, ದರೋಡೆ ಮತ್ತಿತರ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ. ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೇ ಏಳು ಪ್ರಕರಣ ಇವೆ. ಮೊನ್ನೆಯಷ್ಟೇ ಮೆಂಟಲ್ ಮಂಜನ ಮೇಲೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಆನೇಕಲ್ ಪೊಲೀಸರು 110 ಕೇಸ್ ಹಾಕಿ ವಾರ್ನ್ ಮಾಡಿ ಕಳುಹಿಸಿದ್ದರು.
ಇದನ್ನೂ ಓದಿ: Self Harm: ನಿಶ್ಚಿತಾರ್ಥವಾದ ಯುವತಿಗೆ ಹಳೆಯ ಪ್ರಿಯಕರನ ಕಾಟ, ಆತ್ಮಹತ್ಯೆ
ಕೊಲೆ ಆರೋಪಿ ಶಶಿ ಮೇಲೆ ಈ ಹಿಂದೆ ಎರಡು ಪ್ರಕರಣ ದಾಖಲು ಆಗಿವೆ. ಈತ ಕೊಲೆ ಯತ್ನ ಮತ್ತು ಗಲಾಟೆ ವಿಚಾರದಲ್ಲಿ ಜೈಲಿಗೆ ಹೋಗಿಬಂದಿದ್ದ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಾಕು ಇರಿದು ಸೆ.307 ಕೇಸ್ ದಾಖಲಾಗಿದೆ. ಶಶಿ ಮತ್ತು ಟ್ಯಾಟೂ ವಿಜಿ ಇಬ್ಬರೂ ಗಲಾಟೆಗಳನ್ನು ಮಾಡಿಕೊಳ್ಳುತ್ತಿದ್ದರು.